ಕರ್ನಾಟಕ

ಭೂ ಸ್ವಾಧೀನ ಕಾಯ್ದೆ ಬೆಂಬಲಿಸುವಂತೆ ಬಿಜೆಪಿ ಆಂದೋಲನ

Pinterest LinkedIn Tumblr

ph01

ಬೆಂಗಳೂರು, ಏ.4: ಕೇಂದ್ರ ಸರ್ಕಾರದ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಬೆಂಬಲಿಸುವಂತೆ ರಾಷ್ಟ್ರವ್ಯಾಪಿ ಬೃಹತ್ ಆಂದೋಲನ ನಡೆಸಲು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ತೀವ್ರ ವಿವಾದಕ್ಕೆ ಒಳಗಾಗಿ ರಾಷ್ಟ್ರಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಮಸೂದೆಯ ಕುರಿತ ವಸ್ತು ಸ್ಥಿತಿ ಬಗ್ಗೆ ಜನಜಾಗೃತಿ ಮೂಡಿಸಲು ಆಂದೋಲನ ನಡೆಸಲು ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ಭೀಷ್ಮ ಎಲ್.ಕೆ.ಅಡ್ವಾಣಿ , ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ಭೂ ಸ್ವಾಧೀನ ಕಾಯ್ದೆಯಲ್ಲಿ ಅನುಸರಿಸುತ್ತಿರುವ ದ್ವಿಮುಖ ನೀತಿಯನ್ನು ಬಯಲು ಮಾಡುವುದು ಜನಾಂದೋಲನದ ಪ್ರಮುಖ ಉದ್ದೇಶ.

ಇದುವರೆಗೂ ಜಾರಿಯಲ್ಲಿದ್ದ ಕಾಯ್ದೆ ಪ್ರಕಾರ ಎಷ್ಟು ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಎಷ್ಟು ಯೋಜನೆಗಳು ಕಾರ್ಯಗತವಾಗಿವೆ. ಭೂ ಸ್ವಾಧೀನ ವಿವಾದದಿಂದಾಗಿ ನೆನೆಗುದಿಗೆ ಬಿದ್ದಿರುವ ಯೋಜನೆಗಳೆಷ್ಟು ಎಂಬ ಮಾಹಿತಿ ಒಳಗೊಂಡ ವಸ್ತು ಸ್ಥಿತಿಯನ್ನು ಜನರಿಗೆ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಕಳೆದ ಎಂಟು ವರ್ಷಗಳಿಂದ ರಕ್ಷಣಾ ಇಲಾಖೆಯ 21 ಹಾಗೂ ರೈಲ್ವೆ ಮಾರ್ಗ ಹಾಗೂ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದ 16 ಯೋಜನೆಗಳು ನೆನೆಗುದಿಗೆ ಬಿದ್ದಿರುವ ಅಂಶವನ್ನು ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಇದುವರೆಗೂ ಜಾರಿಯಲ್ಲಿದ್ದ ಕಾಯ್ದೆ ರೈತ ಪರವೂ ಆಗಿರಲಿಲ್ಲ. ಹೀಗಾಗಿ ಕಾಯ್ದೆಗೆ ತಿದ್ದುಪಡಿ ತರುವುದು ಅನಿವಾರ್ಯವಾಗಿದೆ ಎಂದು ರೈತರು ಹಾಗೂ ಜನರಿಗೆ ಮನವರಿಕೆ ಮಾಡಿಕೊಡುವುದು ಆಂದೋಲನದ ಉದ್ದೇಶವಾಗಿದೆ. ಈ ಸಂಬಂಧ ಕಾರ್ಯಕಾರಿಣಿಯಲ್ಲಿ ರಾಜಕೀಯ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅಲ್ಲದೆ ಏ.19ರಂದು ಕಾಂಗ್ರೆಸ್ ಹಾಗೂ ಇತರೆ ಪಕ್ಷಗಳು ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ನಡೆಸಲಿರುವ ಮಹಾರ್ಯಾುಲಿಗೆ ಪ್ರತಿಯಾಗಿ ಬಿಜೆಪಿ ಕೂಡ ರ್ಯಾ ಲಿ ನಡೆಸುವ ಬಗ್ಗೆಯೂ ಗಂಭೀರ ಚಿಂತನೆ ನಡೆಸಲಾಗಿದೆ. ದೇಶದೆಲ್ಲೆಡೆ ಭಾರೀ ಚರ್ಚೆಗೆ ಗ್ರಾಸವಾಗಿರುವ ಕಪ್ಪು ಹಣ ವಾಪಸು ತರುವ ವಿಚಾರದ ಬಗ್ಗೆಯೂ ಕಾರ್ಯಕಾರಿಣಿಯಲ್ಲಿ ಗಂಭೀರ ಚಿಂತನ-ಮಂಥನ ನಡೆಸಲಾಗಿದೆ. ಮೇ 26ಕ್ಕೆ ನರೇಂದ್ರ ಮೋದಿ ಪ್ರಧಾನಿಯಾಗಿ ಒಂದು ವರ್ಷ ತುಂಬಲಿದ್ದು , ಆ ಸಂದರ್ಭದಲ್ಲಿ ದೇಶಾದ್ಯಂತ ದೊಡ್ಡ ಆಂದೋಲನ ನಡೆಸಲು ಕೂಡ ತೀರ್ಮಾನಿಸಲಾಗಿದೆ. ವರ್ಷದ ಸಾಧನೆಗಳ ವರದಿ ಪುಸ್ತಕ ಬಿಡುಗಡೆ ಮಾಡುವುದು ಜತೆಗೆ ಅಭಿವೃದ್ಧಿಗೆ ಪೂರಕವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನು ಜನತೆಗೆ ಮನವರಿಕೆ ಮಾಡಿಕೊಡುವ ಉದ್ದೇಶ ಹೊಂದಲಾಗಿದೆ.

ಈಗಾಗಲೇ ಕೈಗೊಂಡಿರುವ ಸದಸ್ಯತ್ವ ಅಭಿಯಾನದ ಮುಂದುವರೆದ ಭಾಗವಾಗಿ ಮಹಾಸಂಪರ್ಕ ಅಭಿಯಾನವನ್ನು ನಡೆಸುವುದು. ಕರ್ನಾಟಕ ಕೇಂದ್ರೀಕರಿಸಿಕೊಂಡು ದಕ್ಷಿಣದ ರಾಜ್ಯಗಳಲ್ಲಿ ಪಕ್ಷವನ್ನು ಸಂಘಟಿಸಿ ಬಲಗೊಳಿಸಲು ತೀರ್ಮಾನಿಸಲಾಗಿದೆ. ನಿನ್ನೆ ವಿದೇಶಾಂಗ ನೀತಿ ಕುರಿತ ನಿರ್ಣಯವನ್ನು ಕೈಗೊಳ್ಳಲಾಗಿತ್ತು.

ಕಾಂಗ್ರೆಸ್ ಮುಕ್ತ ಭಾರತಕ್ಕೆ
ಬೆಂಗಳೂರು: ಕಾಂಗ್ರೆಸ್ ಮುಕ್ತ ಭಾರತ ಮಾಡಲು ಮತ್ತೊಮ್ಮೆ ನಿರ್ಣಯ ಕೈಗೊಂಡಿರುವ ಬಿಜೆಪಿ ರಾಷ್ಟ್ರದ ಅಭ್ಯುದಯದ ಗುರಿಯೊಂದಿಗೆ ರಾಜಕೀಯ ನಿರ್ಣಯ ಕೈಗೊಂಡಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ವಾಣಿಜ್ಯ ಸಚಿವ ನಿರ್ಮಲ ಸೀತಾರಾಮನ್, ಬಿಜೆಪಿ ಕಾರ್ಯಕಾರಿಣಿಯಲ್ಲಿ ಕೇವಲ ಚುನಾವಣೆ ಗೆಲ್ಲುವ ಮೂಲಕ ಕಾಂಗ್ರೆಸ್ ಮುಕ್ತ ಮಾಡುವುದಲ್ಲ. ರಾತ್ರೋರಾತ್ರಿ ಇಂತಹ ಯಾವುದೇ ಪವಾಡ ನಡೆಯುವುದಿಲ್ಲ. ಆದರೆ ಸರ್ವಾಂಗೀಣ ಅಭಿವೃದ್ದಿಗೆ ಒತ್ತು, ಪಾರದರ್ಶಕ ಆಡಳಿತದ ಮೂಲಕ ಉತ್ತಮ ನಾಯಕತ್ವದೊಂದಿಗೆ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾನ ನಮ್ಮ ಉದ್ದೇಶ ಎಂಬ ವಿಷಯ ಮಂಡಿಸಲಾಗಿದೆ ಎಂದರು. ಗೃಹ ಸಚಿವ ರಾಜನಾಥ್ ಸಿಂಗ್ ಕಾರ್ಯಕಾರಣಿಯಲ್ಲಿ ನಿರ್ಣಯ ಮಂಡಿಸಿದ್ದು, ಸಚಿವ ಅರುಣ್ ಜೇಟ್ಲಿ ಅನುಮೋದಿಸಿದರೂ ಚರ್ಚೆಯ ನಂತರ ಮುಖಂಡರ ಸಲಹೆಸೂಚನೆ ಮೇರೆಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ದೇಶದಲ್ಲಿ ರೂಢಿಯಾಗಿರುವ ರೀತಿ-ರಿವಾಜು, ನಡವಳಿಕೆ ಬದಲಾವಣೆ ಪರಿಣಾಮಕಾರಿ ಸಿದ್ಧಾಂತಗಳನ್ನು ಮುಂದುವರೆಸುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸು ವೃದ್ಧಿ, ನಾಯಕತ್ವದ ಪ್ರತಿಪಾದನೆ ಬಗ್ಗೆ ಚರ್ಚೆ ನಡೆಸಲಾಯಿತು. ಭೂ ಸುಧಾರಣಾ ವಿಧೇಯಕ ಸೇರಿದಂತೆ ಭಾರತದ ಹಿಂದಿನ ಆರ್ಥಿಕ ಸ್ಥಿತಿಗತಿಯೊಂದಿಗೆ ಇಂದಿನ ಸ್ಥಿತಿಗತಿಯ ಅವಲೋಕನ ನಡೆಸಿ ತೀವ್ರಗತಿಯಲ್ಲಿ ದೇಶ ಆರ್ಥಿಕಾಭಿವೃದ್ದಿ ಹೊಂದುತ್ತಿರುವುದನ್ನು ತಿಳಿಸಲಾಯಿತು. ಸ್ಕಿಲ್ ಇನ್ ಇಂಡಿಯ, ಮೇಕ್ ಇನ್ ಇಂಡಿಯ, ಡಿಜಿಟಲ್ ಇಂಡಿಯದಂತಹ ಅತ್ಯಾಧುನಿಕ ಮಾದರಿಯ ಯೋಜನೆಗಳಿಂದ ಯುವ ಸಮುದಾಯ ಉದ್ಯೋಗಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಿರುವುದು ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಬಡತನ ನಿರ್ಮೂಲನೆಗಾಗಿ ಜನದನ್ ಯೋಜನೆ, ಹಣ ವರ್ಗಾವಣೆಯಂತಹ ನೀತಿ ಜಾರಿಗೊಳಿಸಲಾಗಿದೆ. ಜನರಿಗೆ ಕೊಟ್ಟ ಭರವಸೆಯಂತೆ ಯೋಜನೆ ರೂಪಿಸಿ ಕಾರ್ಯಗತಗೊಳಿಸಲಾಗುತ್ತಿದೆ ಎಂದರು.

ಆದರೆ ಈ ನಡುವೆ ವಿನಾಕಾರಣ ಅಪಪ್ರಚಾರ ಮಾಡಲಾಗುತ್ತಿದೆ ಎಂದ ಅವರು, ನಮ್ಮ ಗುರಿ ದೇಶದ ಅಭ್ಯುದಯ. ಈ ನಿಟ್ಟಿನಲ್ಲಿ ಭೂಸ್ವಾಧೀನ ಕಾಯ್ದೆಗೆ ತಂದಿರುವ ತಿದ್ದುಪಡಿಯಿಂದ ರೈತರಿಗೆ ಯಾವುದೇ ಅನಾನುಕೂಲತೆ ಇಲ್ಲ. ಈ ಬಗ್ಗೆ ಮನವರಿಕೆ ಮಾಡಿಕೊಡಲು ಮುಂದಾಗಿದ್ದೇವೆ ಎಂದು ನುಡಿದರು.

ಸಮರ್ಥನೆ: ನಿನ್ನೆ ನಡೆದ ಕಾರ್ಯಕಾರಿಣಿಯಲ್ಲಿ ಎಲ್.ಕೆ.ಅಡ್ವಾಣಿ ಅವರನ್ನು ಸನ್ಮಾನಿಸದ ಬಗ್ಗೆ ಕೇಳಿದ ಪ್ರಶ್ನೆಗೆ ಅಡ್ವಾಣಿಯವರು ನಮ್ಮೆಲ್ಲರ ಹಿರಿಯ ನಾಯಕ. ಪ್ರತಿ ವೇದಿಕೆಯು ಅವರ ಮಾರ್ಗದರ್ಶನದಲ್ಲಿ ಮುಂದುವರೆಯುತ್ತದೆ ಎಂದು ಸಮರ್ಥಿಸಿಕೊಂಡರು. ಮೋದಿ ಭೇಟಿ: ಮೇಯರ್ ಶಾಂತಕುಮಾರಿ ನೇತೃತ್ವದ ನಿಯೋಗ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿತು.

Write A Comment