ಬೆಂಗಳೂರು, ಏ.4- ಐತಿಹಾಸಿಕ ಮಹತ್ವದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಇಂದು ವಿಧ್ಯುಕ್ತ ತೆರೆ ಬಿದ್ದು , ಪ್ರಧಾನಿ ನರೇಂದ್ರ ಮೋದಿ ಅವರ ವಾಗ್ಝರಿಯೇ ಎಲ್ಲೆಲ್ಲೂ ಪ್ರತಿಧ್ವನಿಸುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಕಳೆದ ಮೂರು ದಿನಗಳಿಂದ ನಗರದಲ್ಲಿ ವಾಸ್ತವ್ಯ ಹೂಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ಭೀಷ್ಮ ಲಾಲ್ ಕೃಷ್ಣ ಅಡ್ವಾಣಿ ಸೇರಿದಂತೆ ಪಕ್ಷದ ರಾಷ್ಟ್ರೀಯ ಮುಖಂಡರು ಹಾಗೂ ಕೇಂದ್ರ ಸಚಿವರು ದೆಹಲಿಗೆ ಪ್ರಯಾಣ ಬೆಳೆಸಿದರು.
ರಾಜಕೀಯ ಹಾಗೂ ಆರ್ಥಿಕ ನಿರ್ಣಯ ಕೈಗೊಳ್ಳುವ ಮೂಲಕ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು. ಅಮಿತ್ ಷಾ ಅವರು ಕಾರ್ಯಕಾರಿಣಿ ಸಭೆ ಉದ್ಘಾಟನಾ ಭಾಷಣ ಮಾಡಿದರೆ , ಮೋದಿಯವರು ಕಾರ್ಯಕಾರಿಣಿ ಸಭೆಯ ಸಮಾರೋಪ ಭಾಷಣ ಮಾಡಿದರು.
ಬುಧವಾರ ರಾತ್ರಿ ಆಗಮಿಸಿದ ಅಮಿತ್ ಷಾ ಅವರು ಗುರುವಾರ ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ನಡೆಸಿ ಕಾರ್ಯಕಾರಿಣಿ ಸಭೆಯ ಪೂರ್ವ ಸಿದ್ಧತೆ ಕಾರ್ಯ ಕೈಗೊಂಡಿದ್ದರು. ನಿನ್ನೆ ಇಡೀ ದಿನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗಿತ್ತು. ಇಂದು ನಿರ್ಣಯಗಳನ್ನು ಕೈಗೊಳ್ಳಲಾಯಿತು. ನಿನ್ನೆ ಸಂಜೆ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮೋದಿಯವರು ಭಾಷಣ ಮಾಡಿದ್ದರು. ಇದರಿಂದ ಬಿಜೆಪಿಯ ಶಕ್ತಿ ಪ್ರದರ್ಶನ ಮತ್ತು ಮೋದಿಯವರ ವರ್ಚಸ್ಸಿನ ಪ್ರದರ್ಶನವೂ ನಡೆಯಿತು. ಈ ನಡುವೆ ಮೋದಿಯವರು ಶಾಸಕರು, ಸಂಸದರು, ಮಾಜಿ ಶಾಸಕರು, ಮಾಜಿ ಸಂಸದರೊಂದಿಗೆ ಔತಣ ಕೂಟದಲ್ಲಿ ಪಾಲ್ಗೊಂಡು ಸಂವಾದ ಕೂಡ ನಡೆಸಿದರು. ಕರ್ನಾಟಕವನ್ನು ಕೇಂದ್ರೀಕರಿಸಿಕೊಂಡು ದಕ್ಷಿಣ ಭಾರತದಲ್ಲಿ ಬಿಜೆಪಿ ಪ್ರಾಬಲ್ಯ ವೃದ್ಧಿಸುವುದು ಕಾರ್ಯಕಾರಿಣಿಯ ಪ್ರಮುಖ ಉದ್ದೇಶವಾಗಿತ್ತು.
ದುರ್ಬಲವಾಗಿರುವ ರಾಜ್ಯಗಳಲ್ಲಿಯೂ ಬಿಜೆಪಿ ಬೇರುಗಳನ್ನು ಗಟ್ಟಿಗೊಳಿಸಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕಾರ್ಯತಂತ್ರವನ್ನು ರೂಪಿಸಲಾಗಿದೆ. ಜತೆಗೆ ಏಪ್ರಿಲ್ ಅಂತ್ಯದ ವೇಳೆಗೆ ಸದಸ್ಯತ್ವ ಅಭಿಯಾನವನ್ನು ಮುಕ್ತಾಯಗೊಳಿಸಿ ಕನಿಷ್ಟ 10 ಕೋಟಿ ಸದಸ್ಯರನ್ನು ನೋಂದಾವಣೆ ಮಾಡುವ ಬಗ್ಗೆಯೂ ಸಭೆಯಲ್ಲಿ ಚಿಂತನ-ಮಂಥನ ನಡೆಸಲಾಗಿತ್ತು.