ಬೆಂಗಳೂರು,ಏ.12: ವರನಟ ಡಾ.ರಾಜ್‌ಕುಮಾರ್ ಭೌತಿಕವಾಗಿ ನಮ್ಮನ್ನಗಲಿ 9 ವರ್ಷಗಳಾದರೂ ಮಾನಸಿಕವಾಗಿ ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಮನೆ ಮಾಡಿದ್ದಾರೆ. ದಾದಾ ಫಾಲ್ಕೆ ಪ್ರಶಸ್ತಿ ವಿಜೇತ ಡಾ.ರಾಜ್‌ಕುಮಾರ್‌ರವರ ಪುಣ್ಯಭೂಮಿ ಇರುವ ಕಂಠೀರವ ಸ್ಟುಡಿಯೋಗೆ ಇಂದು ರಾಜ್ಯದ ಮೂಲೆ ಮೂಲೆಗಳಿಂದ ರಾಜ್ ಅಭಿಮಾನಿಗಳು ಆಗಮಿಸಿ ನಮನ ಸಲ್ಲಿಸಿದರು. ಪುಣ್ಯ ಸ್ಮರಣೆಯ ಅಂಗವಾಗಿ ಪಾರ್ವತಮ್ಮ ರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ಶಿವರಾಜ್‌ಕುಮಾರ್, ಪುನೀತ್ ರಾಜ್‌ಕುಮಾರ್ ಕುಟುಂಬದವರು, ಎಲ್ಲ ಬಂಧುಮಿತ್ರರು ಇಂದು ಪುಣ್ಯಭೂಮಿಯ ಬಳಿ ಬಂದು ವರನಟನಿಗೆ ಪೂಜೆ ಸಲ್ಲಿಸಿದರು.
ಅಣ್ಣಾವ್ರ ಅಭಿಮಾನಿಗಳಿಂದ ರಕ್ತದಾನ ಶಿಬಿರ, ಅನ್ನದಾನ ಏರ್ಪಡಿಸಲಾಗಿತ್ತು. ಡಾ.ರಾಜ್‌ಕುಮಾರ್ ನಮ್ಮನ್ನಗಲಿ 9 ವರ್ಷಗಳಾದರೂ ಅವರ ನೆನಪು ಹೆಚ್ಚಾಗುತ್ತಲೇ ಇದೆ. ಅವರ ಅಭಿಮಾನಿಗಳ ಹಿಂಡು ಅವರ ಪುಣ್ಯಭೂಮಿಗೆ ಪ್ರತಿವರ್ಷ ಅಗಣಿತವಾಗಿ ಧಾವಿಸುತ್ತಲೇ ಇದೆ. ಇಂದು ಕೂಡ ಸಹಸ್ರ ಸಂಖ್ಯೆಯಲ್ಲಿ ಬಂದು ಅಣ್ಣಾವ್ರಿಗೆ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು.
ಅಣ್ಣಾವ್ರ ಪುಣ್ಯಭೂಮಿಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಅವರ ಕುಟುಂಬದವರು ಅವರ ನೆಚ್ಚಿನ ತಿಂಡಿತಿನಿಸುಗಳನ್ನು ಇಟ್ಟು ಪೂಜೆ ಸಲ್ಲಿಸಿದರು. ಕುಟುಂಬ ವರ್ಗದವರಿಗೆ ದುಃಖ, ಅಭಿಮಾನ ಎರಡೂ ಒಮ್ಮೆಲೆ ಮೂಡಿಬಂತು. ಅಣ್ಣಾವ್ರು ಇಲ್ಲದ ದುಃಖ ಒಂದೆಡೆಯಾದರೆ, ಅಭಿಮಾನಿಗಳನ್ನು ಕಂಡು ಹೃದಯ ತುಂಬಿಬಂತು. ರಾಘವೇಂದ್ರ ರಾಜ್‌ಕುಮಾರ್ ಮಾತನಾಡಿ, ಅಪ್ಪಾಜಿಯವರಿಗೆ ರಾಜ್ಯದ ಜನತೆ ತೋರಿಸುತ್ತಿರುವ ಅಭಿಮಾನಕ್ಕೆ ನಾವೆಂದೂ ಚಿರಋಣಿಯಾಗಿದ್ದೇವೆ. ಇಂದು ಅವರ ಹೆಸರನ್ನು ಬಿಬಿಎಂಪಿ ರಸ್ತೆಗಿಡುತ್ತಿರುವುದಕ್ಕೆ ನಾವು ಕೃತಜ್ಞರಾಗಿದ್ದೇವೆ. ಅಪ್ಪಾಜಿಯವರ ಕಲಾಸೇವೆಯನ್ನು ನಮ್ಮ ಕುಟುಂಬ ಕೈಲಾದಷ್ಟು ಮುಂದುವರೆಸಿಕೊಂಡು ಹೋಗುವುದರ ಮೂಲಕ ಅಭಿಮಾನಿಗಳ ಋಣ ತೀರಿಸುತ್ತೇವೆ ಎಂದು ಹೇಳಿದರು. ‘ಶಿವರಾಜ್‌ಕುಮಾರ್ ಮಾತನಾಡಿ, ಕರ್ನಾಟಕದ ಕಲಾ ಅಭಿಮಾನಿಗಳು ರಾಜ್‌ಕುಮಾರ್ ಹಾಗೂ ನಮ್ಮ ಕುಟುಂಬದವರ ಮೇಲೆ ಇಟ್ಟಿರುವ ಅಭಿಮಾನಕ್ಕೆ ಕೃತಜ್ಞರಾಗಿದ್ದೇನೆ ಎಂದರು.
ಪುನೀತ್‌ರಾಜ್‌ಕುಮಾರ್ ಮಾತನಾಡಿ, ಪ್ರತಿ ವರ್ಷ ಜನ ಜಾತ್ರೆಯಂತೆ ಸೇರುತ್ತಿರುವುದನ್ನು ನೋಡಿದರೆ ನಮ್ಮ ಉತ್ಸಾಹ ಇಮ್ಮಡಿಯಾಗುತ್ತದೆ. ನಮ್ಮ ಕಲಾಸೇವೆಗೆ ಸ್ಫೂರ್ತಿ ಸಿಗುತ್ತದೆ. ಕಂಠೀರವ ಸ್ಟುಡಿಯೋದಲ್ಲಿರುವ ರಾಜ್‌ಕುಮಾರ್ ಪುಣ್ಯಭೂಮಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಇನ್ನುಳಿದ ಅಭಿವೃದ್ಧಿ ಕೆಲಸಗಳು ತ್ವರಿತಗತಿಯಲ್ಲಿ ನಡೆಯಲಿ ಎಂದರು. ನಿರ್ಮಾಪಕ ಕೆ.ಸಿ.ಎನ್.ಚಂದ್ರಶೇಖರ್, ನಿರ್ದೇಶಕ ದೊರೆಭಗವಾನ್, ಕಂಠೀರವ ಸ್ಟುಡಿಯೋ ಅಧ್ಯಕ್ಷೆ ವಿಜಯಲಕ್ಷ್ಮಿ ಅರಸ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್ ಡಿಸೋಜ, ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್, ಹಿರಿಯ ನಟ ಶಿವರಾಂ, ಕುಟುಂಬ ಸದಸ್ಯರು , ನಟ-ನಟಿಯರು ಮುಂತಾದವರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.