ಕರ್ನಾಟಕ

‘ಕನ್ನಡದ ಮೇರು ನಟ ರಾಜಣ್ಣರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ಲಭಿಸಲಿ’

Pinterest LinkedIn Tumblr

Raj-Varanata

ಬೆಂಗಳೂರು, ಏ.12: ವರನಟ ಡಾ.ರಾಜ್‌ಕುಮಾರ್ ಅವರಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ಲಭಿಸಲಿದೆ ಎಂದು ಮೇಯರ್ ಶಾಂತಕುಮಾರಿ ಇಂದಿಲ್ಲಿ ಭವಿಷ್ಯ ನುಡಿದರು. ನಾಯಂಡಹಳ್ಳಿ ವೃತ್ತದಿಂದ ಪೀಣ್ಯವರೆಗಿನ ವರ್ತುಲ ರಸ್ತೆಗೆ ಡಾ.ರಾಜ್‌ಕುಮಾರ್ ಪುಣ್ಯಭೂಮಿ ರಸ್ತೆ ನಾಮಕರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವರನಟ ಡಾ.ರಾಜ್‌ಕುಮಾರ್ ಅವರಿಗೆ ಭಾರತರತ್ನ ಪ್ರಶಸ್ತಿ ಕೊಡಿಸುವುದಾಗಿ ಕೇಂದ್ರ ಸಚಿವ ಅನಂತ್‌ಕುಮಾರ್ ಅವರು ಭರವಸೆ ನೀಡಿದ್ದಾರೆ. ಕೇಂದ್ರದ ಮೋದಿ ಸರ್ಕಾರ ತಮ್ಮ ಅವಧಿಯಲ್ಲಿ ಕನ್ನಡದ ಮೇರು ನಟ ರಾಜಣ್ಣ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ರಾಜ್‌ಕುಮಾರ್ ಅವರಂತಹ ಮೇರುನಟ ನಮ್ಮ ನಾಡಿನಲ್ಲಿ ಜನಿಸಿರುವುದು ನಮ್ಮೆಲ್ಲರ ಪುಣ್ಯ. ಅಂತಹ ಮಹಾನ್ ವ್ಯಕ್ತಿಗೆ ಭಾರತರತ್ನ ನೀಡಬೇಕೆಂದು ನಾನೂ ಕೂಡ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.

ಇಡೀ ದಕ್ಷಿಣ ಭಾರತದಲ್ಲಿ ಚೆನ್ನೈನ ಅತಿ ಉದ್ದದ ಸೆಂಟ್ ಮಾರ್ಕ್ಸ್ ರಸ್ತೆಗೆ ಚಿತ್ರ ನಟರೊಬ್ಬರ ಹೆಸರಿಟ್ಟಿರುವುದನ್ನು ಹೊರತುಪಡಿಸಿದರೆ, ನಾಯಂಡಹಳ್ಳಿ ವೃತ್ತದಿಂದ ಪೀಣ್ಯವರೆಗಿನ ಅತಿ ಉದ್ದದ ರಸ್ತೆಗೆ ರಾಜ್‌ಕುಮಾರ್ ಅವರ ಹೆಸರಿಡುತ್ತಿರುವುದು ಇದೇ ಮೊದಲು ಎಂದರು.

ನಾನೂ ಕೂಡ ರಾಜಣ್ಣ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದುಬಂದವರು. ಅಂಥಹ ಮಹಾನ್ ವ್ಯಕ್ತಿಯ ಹೆಸರನ್ನು ನನ್ನ ಅವಧಿಯಲ್ಲಿ ರಸಯೊಂದಕ್ಕೆ ನಾಮಕರಣ ಮಾಡುತ್ತಿರುವುದು ನನಗೆ ಸಂತಸ ತಂದಿದೆ ಎಂದರು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಶಿವರಾಜ್‌ಕುಮಾರ್ ಮಾತನಾಡಿ, ಅಪ್ಪಾಜಿ ಅವರ 9ನೇ ಪುಣ್ಯತಿಥಿ ಸಂದರ್ಭದಲ್ಲೇ ಅತಿ ಉದ್ದದ ರಸ್ತೆಗೆ ಅವರ ಹೆಸರನ್ನು ನಾಮಕರಣ ಮಾಡುತ್ತಿರುವುದು ಸಂತಸ ತಂದಿದೆ. ಇಂತಹ ಕಾರ್ಯಕ್ಕೆ ಮುಂದಾದ ಬಿಬಿಎಂಪಿಗೆ ನಮ್ಮ ಕುಟುಂಬ ಚಿರಋಣಿಯಾಗಿರುತ್ತದೆ ಎಂದರು.

ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್ ಮಾತನಾಡಿ, ನಾನು ಅಪ್ಪಟ ರಾಜ್ ಅಭಿಮಾನಿ. ಅವರ ಕಸ್ತೂರಿ ನಿವಾಸ ಮಾದರಿಯ ಪ್ರತಿಮೆಯನ್ನು ನನ್ನ ವಾರ್ಡಿನಲ್ಲಿ ಸ್ಥಾಪನೆ ಮಾಡಲಾಗಿದೆ. ಈಗಾಗಲೇ ರಾಜಾಜಿನಗರದ ರಸ್ತೆಯೊಂದಕ್ಕೆ ರಾಜ್‌ಕುಮಾರ್ ಹೆಸರಿಟ್ಟಿರುವುದರಿಂದ ಅಣ್ಣಾವ್ರ ಸಮಾಧಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಗೆ ರಾಜ್‌ಕುಮಾರ್ ಪುಣ್ಯಭೂಮಿ ರಸ್ತೆ ಎಂದು ನಾಮಕರಣ ಮಾಡಲು ಬಿಬಿಎಂಪಿ ತೀರ್ಮಾನಿಸಿದೆ. ಇಂತಹ ಮಹಾನ್ ಕಾರ್ಯದಲ್ಲಿ ನಾನೂ ಕೂಡ ಪಾಲ್ಗೊಳ್ಳುತ್ತಿರುವುದು ಸಂತಸ ಉಂಟು ಮಾಡಿದೆ ಎಂದರು. ರಾಜ್ ಪುತ್ರರಾದ ರಾಘವೇಂದ್ರ ರಾಜ್‌ಕುಮಾರ್, ಪುನೀತ್‌ರಾಜ್‌ಕುಮಾರ್, ಕೇಂದ್ರ ರಾಸಾಯನಿಕ ಸಚಿವ ಅನಂತ್‌ಕುಮಾರ್, ಶಾಸಕರಾದ ಕೆ.ಗೋಪಾಲಯ್ಯ, ಪ್ರಿಯಾಕೃಷ್ಣ, ಉಪಮೇಯರ್ ಕೆ.ರಂಗಣ್ಣ, ಬಿಬಿಎಂಪಿ ಸದಸ್ಯರಾದ ರಾಜೇಶ್ವರಿ ಮತ್ತಿತರರು ಹಾಜರಿದ್ದರು.

Write A Comment