ಕರ್ನಾಟಕ

ತಾಕತ್ತಿದ್ದರೆ ನಡಳ್ಳಿ ಉಚ್ಚಾಟಿಸಿ : ಕಾಂಗ್ರೆಸ್‌ಗೆ ಮನೋಳಿ ಸವಾಲು

Pinterest LinkedIn Tumblr

Patil-Nadalli

ಹುಬ್ಬಳ್ಳಿ, ಏ.12- ಪ್ರತ್ಯೇಕ ರಾಜ್ಯದ ಪ್ರಸ್ತಾಪ ಮಾಡಿರುವ ದೇವರಹಿಪ್ಪರಗಿ ಶಾಸಕ ಎ.ಎಸ್.ಪಾಟೀಲ್ ನಡಳ್ಳಿ  ಅವರನ್ನು ನಿಮಗೆ ತಾಕತ್ತಿದ್ದರೆ ಪಕ್ಷದಿಂದ ಉಚ್ಛಾಟಿಸಿ  ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕ್ರಣ್ಣ ಮನೋಳಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಸವಾಲು ಹಾಕಿದ್ದಾರೆ. ಶಾಸಕ ನಡಳ್ಳಿ ಅವರನ್ನು ಪಕ್ಷದಿಂದ ಉಚ್ಛಾಟಿಸಿದರೆ  ಉತ್ತರ ಕರ್ನಾಟಕದಲ್ಲಿನ  ಕಾಂಗ್ರೆಸ್‌ನ ನಿಜವಾದ ಶಕ್ತಿ ಏನು ಎಂಬುದು  ನಾಯಕರಿಗೆ ಅರಿವಾಗಲಿದೆ ಎಂದು ಅವರು ಹೇಳಿದ್ದಾರೆ.

ಉತ್ತರ ಕರ್ನಾಟಕದ ಸೀಮೆಯಲ್ಲಿ  ಯಾವುದೇ ಅಭಿವೃದ್ಧಿ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ. ಉತ್ತರ ಕರ್ನಾಟಕ ಭಾಗ ತೀರಾ ಹಿಂದುಳಿದ ಪ್ರದೇಶವಾಗಿದೆ. ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ, ರಾಜಕೀಯವಾಗಿ ಬಹಳ ಹಿಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ವಿಭಜನೆ ಅನಿವಾರ್ಯ. ಪ್ರಾದೇಶಿಕ ಅಸಮತೋಲನವನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರತ್ಯೇಕ ರಾಜ್ಯ ಅಗತ್ಯವಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಕ್ಷೇತ್ರದ ಮತ್ತು ಉತ್ತರ ಕರ್ನಾಟಕ ಭಾಗದ ಜನತೆಯ ಪರವಾಗಿ ಶಾಸಕ ನಡಳ್ಳಿ ಅವರು ಪ್ರತ್ಯೇಕ ರಾಜ್ಯದ ಮಾತನಾಡಿದ್ದಾರೆ. ಅದರಲ್ಲಿ ಯಾವುದೇ ತಪ್ಪು ಇಲ್ಲ. ಆದರೆ ಪಕ್ಷದ ನಾಯಕರು ಅವರಿಗೆ ಶೋಕಾಸ್ ನೋಟಿಸ್ ನೀಡಿ ಕಾರಣ ಕೊಡುವಂತೆ ಕೇಳಿದ್ದಾರೆ. ಅವರಿಗೆ ಶಕ್ತಿ ಇದ್ದರೆ ನಡಳ್ಳಿ  ಅವರನ್ನು ಉಚ್ಛಾಟಿಸಿ ಆಮೇಲಿನ ಪರಿಸ್ಥಿತಿ ಏನಾಗುತ್ತದೆ ನೋಡಲಿ ಎಂದು ಹೇಳಿದ್ದಾರೆ. ಪ್ರತಿಬಾರಿಯೂ ಉತ್ತರ ಕರ್ನಾಟಕ ಮತ್ತು ಹೈದರಾಬಾದ್-ಕರ್ನಾಟಕಕ್ಕೆ ಅನ್ಯಾಯವಾಗುತ್ತಲೇ ಬಂದಿದೆ. ಹಾಗಾಗಿ  ಉತ್ತರ ಕರ್ನಾಟಕದವರನ್ನೇ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಅಗತ್ಯವಿದೆ.  ಈ ಭಾಗದ ಜನಪ್ರತಿನಿಧಿಗಳು ತಮ್ಮ ರಾಜಕೀಯ ಇಚ್ಛಾಶಕ್ತಿ ಬಳಸಿಕೊಂಡು ಈ ನಿಟ್ಟಿನಲ್ಲಿ ಮುಂದುವರೆಯಬೇಕಾಗಿದೆ. ಜನತೆಯ ಹಿತರಕ್ಷಣೆ ಮತ್ತು ಪ್ರಾದೇಶಿಕ ಅಭಿವೃದ್ಧಿಗಳನ್ನು ಗುರಿಯಾಗಿಟ್ಟುಕೊಂಡು ರಾಜ್ಯ ವಿಭಜನೆಗೆ ಮನವಿ ಮಾಡುವುದು  ತಪ್ಪಲ್ಲ  ಎಂದು ಶಂಕ್ರಣ್ಣ ಮನೋಳಿ ಅವರು ಹುಬ್ಬಳ್ಳಿಯಲ್ಲಿಂದು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು.

Write A Comment