ಬೆಂಗಳೂರು: ದಕ್ಷ ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣದ ಕುರಿತು ಇದೇ ಮೊದಲ ಬಾರಿಗೆ ಬಹಿರಂಗವಾಗಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಮಹಿಳಾ ಐಎಎಸ್ ಅಧಿಕಾರಿ, ಸತ್ಯ ಹೊರ ಬರುವ ಕಾಲ ಸನ್ನಿಹಿತವಾಗಿದೆ. ಶೀಘ್ರವೇ ಕಪೋಲ ಕಲ್ಪಿತ ಸುದ್ದಿಗೆ ತೆರೆಬೀಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಶುಭ ಸುದ್ದಿ… ಕಡೆಗೂ ಪ್ರಕರಣ ಅಧಿಕೃತಗೊಂಡಿದೆ. ಡಿ.ಕೆ. ರವಿ ಸಾವಿನ ಬಳಿಕ ಭಾರಿ ಪ್ರಮಾಣದಲ್ಲಿ ಕಪೋಲ ಕಲ್ಪಿತ ಸುದ್ದಿಗಳನ್ನು ಮತ್ತು ಸುದ್ದಿಯ ಸೋರಿಕೆಯನ್ನು ಮಾಡಲಾಯಿತು. ಇದು ವಿಷಾದನೀಯ ಮತ್ತು ದುರದೃಷ್ಟಕರ’ ಎಂದು ಮಹಿಳಾ ಐಎಎಸ್ ಅಧಿಕಾರಿ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಜನರು ಕಾನೂನಾತ್ಮಕವಾಗಿ ಮತ್ತು ಅವರ ಆತ್ಮ ಸಾಕ್ಷಿಗನುಗುಣವಾಗಿ ಕೆಲಸ ಮಾಡಬೇಕಿತ್ತು. ಆದ್ರೆ ಅಧಿಕಾರದ ಅಮಲಿನಲ್ಲಿ ಉಹಾಪೋಹ ಮತ್ತು ವಾಸ್ತವವನ್ನು ಅರಿಯದೆ ಕಾರ್ಯನಿರ್ವಹಿಸಿದ್ದಾರೆ. ನಾವು ಇದಕ್ಕಿಂತ ಉತ್ತಮ ವ್ಯವಸ್ಥೆಯಲ್ಲಿರಬೇಕಿತ್ತು. ಆದರೆ ಸಮಾಧಾನಕರ ಸಂಗತಿ ಎಂದರೆ, ಸತ್ಯ ಹೊರಬರಲು ತುಂಬಾ ತಡವಾಗಿಲ್ಲ ಎಂದಿದ್ದಾರೆ.
ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐಗೆ ವಹಿಸಲು ಕೇಂದ್ರ ಸರ್ಕಾರ ಅಸ್ತು ಎಂದಿದ್ದು, ಇಂದಿನಿಂದ ಪ್ರಕರಣದ ತನಿಖೆ ಆರಂಭವಾಗಿದೆ. ಶೀಘ್ರದಲ್ಲೇ ರವಿ ಅವರ ನಿವಾಸ ಹಾಗೂ ಕಚೇರಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಸಾಧ್ಯತೆ ಇದೆ.