ಮಂಡ್ಯ: ಬಯಲು ಪ್ರದೇಶಗಳಲ್ಲಿ ಶೀಟಿ ಹಾಕುವ ಮೂಲಕ ಮಲ ವಿಸರ್ಜನೆ ತಡೆಯಲು ಜಿಲ್ಲಾ ಪಂಚಾಯತ್ ಮುಂದಾಗಿದ್ದು, ಇಂದು ಮುಂಜಾನೆ 5 ಗಂಟೆಗೆ ಗ್ರಾಮ ಕಣ್‌ಗಾವಲು ಸಮಿತಿ ನೆರವಿನಲ್ಲಿ ಬಯಲು ಶೌಚಾಲಯ ಮುಕ್ತ ಜಿಲ್ಲೆ ಮಾಡಲು ಮುಂದಾಯಿತು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಇತರೆ ಅಧಿಕಾರಿಗಳು ತಾಲ್ಲೂಕಿನ ಹಳುವಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪುರ, ಹಳುವಾಡಿ, ಕಗ್ಗಹಳ್ಳಿ ಗ್ರಾಮಗಳಲ್ಲಿ ಸಂಚರಿಸಿ ಸ್ವಚ್ಛ ಭಾರತ್ ಮಿಷನ್ ಅಡಿ ಜುಲೈ ತಿಂಗಳ ಅಂತ್ಯಕ್ಕೆ ಬಯಲು ಶೌಚಾಲಯ ಮುಕ್ತ ಜಿಲ್ಲೆಯನ್ನಾಗಿಸಲು ಚಾಲನೆ ನೀಡಿದರು.
ಇದಕ್ಕಾಗಿ 15 ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ಜಿಲ್ಲೆಯಾದ್ಯಂತ ಸಂಚರಿಸಿ ಜಾಗೃತಿ ಮೂಡಿಸಲಿದೆ. ಒಂದು ತಂಡದ ರೋಹಿಣಿ ಸಿಂಧೂರಿ, ಉಪಕಾರ್ಯದರ್ಶಿ ಎನ್.ಡಿ. ಪ್ರಕಾಶ್ ಸೇರಿದಂತೆ ವಿವಿಧ ಅಧಿಕಾರಿಗಳನ್ನೊಳಗೊಂಡ 15 ತಂಡ ರಚಿಸಲಾಗಿದೆ. ಈ ಎಲ್ಲ ತಂಡಗಳು ಮುಂಜಾನೆ ಹಾಗೂ ಸಂಜೆ ಕಾರ್ಯಕ್ಕಿಳಿದು ಜನರ ಮನವೊಲಿಸಿ ಬಯಲು ಬಹಿರ್ದೆಸೆಗೆ ಹೋಗದಂತೆ ತಿಳುವಳಿಕೆ ನೀಡಲಿವೆ. ಶೌಚಾಲಯ ನಿರ್ಮಾಣದಲ್ಲಿ ದೇಶದಲ್ಲೇ ಮಂಡ್ಯ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಶೇ.225ರಷ್ಟು ಗುರಿ ಮುಟ್ಟಿದೆ. ಹಾಗಾಗಿ ರೋಹಿಣಿ ಸಿಂಧೂರಿಯವರನ್ನು ಸ್ವಚ್ಚ ಭಾರತ್ ನಿರ್ಮಾಣ್ ಅಭಿಯಾನದ ತರಬೇತಿದಾರರ ಸಂಪನ್ಮೂಲ ವ್ಯಕ್ತಿಯಾಗಿ ಕೇಂದ್ರ ಸರ್ಕಾರ ನೇಮಿಸಿರುವುದು ವಿಶೇಷ.