ಕರ್ನಾಟಕ

ಸಂಪುಟ ವಿಸ್ತರಣೆ ಕುರಿತು ಇಂದು ರಾಹುಲ್ ಜೊತೆ ಚರ್ಚೆ

Pinterest LinkedIn Tumblr

Rahul-Gandhiii

ಬೆಂಗಳೂರು: ಕೇಂದ್ರ ಸರ್ಕಾರ ಭೂ ಸ್ವಾಧೀನ ಮಸೂದೆಗೆ ತಿದ್ದುಪಡಿ ತಂದು ಸುಗ್ರೀವಾಜ್ಞೆ ಹೊರಡಿಸಿರುವುದನ್ನು ವಿರೋಧಿಸಿ ಇಂದು ನವದೆಹಲಿಯಲ್ಲಿ ನಡೆಯುವ  ಕಾಂಗ್ರೆಸ್ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿಪರಮೇಶ್ವರ್ ಸೇರಿದಂತೆ ಹಲವು ನಾಯಕರು ನವದೆಹಲಿಗೆ ತೆರಳುತ್ತಿದ್ದಾರೆ. ಕಾಂಗ್ರೆಸ್ ಕಿಸಾನ್ ಘಟಕದ ಸುಮಾರು 2 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಈಗಾಗಲೇ ರೈಲು ಮೂಲಕ ನವದೆಹಲಿ ತಲುಪಿದ್ದು, ಇಂದು ಮಧ್ಯಾಹ್ನ ಕೆಪಿಸಿಸಿ

ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ರೋಷನ್‌ಬೇಗ್, ದಿನೇಶ್‌ಗುಂಡೂರಾವ್, ಕೃಷ್ಣಭೈರೇಗೌಡ ಮತ್ತಿತರರು ತೆರಳುತ್ತಿದ್ದಾರೆ. ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿ ಪ್ರಯಾಣ ಕೈಗೊಂಡಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಕರೆ ನೀಡಿರುವ ಹೋರಾಟಕ್ಕೆ ರಾಷ್ಟ್ರಾದ್ಯಂತ ಎಲ್ಲಾ ರಾಜ್ಯಗಳಿಂದಲೂ ಕಾಂಗ್ರೆಸ್ ಮುಖಂಡರು, ರೈತರು ಭಾಗವಹಿಸುತ್ತಿದ್ದು, ನಾಳೆ ನಡೆಯುವ ಪ್ರತಿಭಟನೆಯಲ್ಲಿ ರಜಾ ಅವಧಿ ಮುಗಿಸಿಬಂದಿರುವ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ನಾಳೆ ಪ್ರತಿಭಟನೆಯ ನಂತರ ರಾಹುಲ್‌ಗಾಂಧಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಜೊತೆ ಮಾತುಕತೆ ನಡೆಸುವ ಸಾಧ್ಯತೆಗಳಿವೆ. ಸಚಿವ ಸಂಪುಟ ವಿಸ್ತರಣೆಗೆ ಕಾಂಗ್ರೆಸ್ ಹೈಕಮಾಂಡ್ ಹಸಿರು ನಿಶಾನೆ ತೋರಿಸಿದ್ದು, ಯಾರನ್ನು ಸಂಪುಟದಿಂದ ಕೈಬಿಡಬೇಕು, ಯಾರನ್ನು ಸೇರಿಸಿಕೊಳ್ಳಬೇಕು ಎಂಬ ಬಗ್ಗೆ ನಾಳೆ ರಾಹುಲ್ ಗಾಂಧಿಯವರ ಜೊತೆ ಚರ್ಚೆ ನಡೆಸುವ ನಿರೀಕ್ಷೆಗಳಿವೆ.  ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಸಂಪುಟ ವಿಸ್ತರಣೆಗೂ ಮುನ್ನ ರಾಹುಲ್‌ಗಾಂಧಿ ಅವರ ಜೊತೆ ಚರ್ಚೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದ್ದರು. ಅದರಂತೆ ರಾಜ್ಯ ಸರ್ಕಾರಕ್ಕೆ ಮೇ 13ಕ್ಕೆ ಎರಡು ವರ್ಷ ತುಂಬಲಿದ್ದು, ಆ ವೇಳೆಗೆ ಸಂಪುಟ ಪುನರ್ ರಚನೆಯಾಗಬೇಕಿದೆ. ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಸಂಪುಟ ಪುನರ್ ರಚನೆ ಮುಂದೂಡುವ ಸಾಧ್ಯತೆಗಳೂ ಇವೆ.  ಹೀಗಾಗಿ ರಾಜ್ಯ ರಾಜಕಾರಣದ ಬಗ್ಗೆ ನಾಳೆ ದೆಹಲಿ ಪ್ರವಾಸದ ವೇಳೆ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ರಾಹುಲ್‌ಗಾಂಧಿಯವರ ಜೊತೆ ಗಂಭೀರ ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Write A Comment