ತ್ಯಾಗ, ಸೇವೆ, ಪ್ರಾಮಾಣಿಕತೆಗೆ ಹೆಸರಾದ ಉನ್ನತ ವ್ಯಕ್ತಿತ್ವವೊಂದು ಚಿಗುರುತ್ತಿರುವ ಸಮಯದಲ್ಲೇ ಅಗಲಿದ ನೋವು ಈಡೀ ರಾಜ್ಯದವರನ್ನೇ ಕಾಡುತ್ತಿದೆ. ದಕ್ಷ ಅಧಿಕಾರಿ ಡಿ.ಕೆ. ರವಿ ಸಾವಿಗೆ ಸಂಪೂರ್ಣ ನಾಡೇ ಕಣ್ಣೀರುಗರೆದರೆ ಕೋಲಾರದ ಜನತೆ ತುಸು ಹೆಚ್ಚೇ ಗೋಳಾಡಿತ್ತು. ಆಕ್ರೋಶ ವ್ಯಕ್ತಪಡಿಸಿತ್ತು. ತಮ್ಮ ಮೆಚ್ಚಿನ ಅಧಿಕಾರಿಗೆ ಅವರು ತೋರುತ್ತಿರುವ ಅಭಿಮಾನಕ್ಕೆ ದೇಶವೇ ದಂಗಾಗಿತ್ತು.
ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಅಭಿಮಾನಿಗಳು ಡಿಕೆ ರವಿಯವರನ್ನು ದೇವರನ್ನಾಗಿಸಿದ್ದಾರೆ. ತಮ್ಮ ನೆಚ್ಚಿನ ಜಿಲ್ಲಾಧಿಕಾರಿಯ ಹೆಸರಿನಲ್ಲಿ ದೇವಾಲಯವೊಂದನ್ನು ಅವರು ಕಟ್ಟಿದ್ದಾರೆ. ಕೋಲಾರ ತಾಲೂಕು ವೆಲಗಲಬುರ್ರೆ ಗ್ರಾಮಸ್ಥರು ರವಿಯವರ ದೇವಾಲಯ ನಿರ್ಮಾಣ ಮಾಡಿದ್ದು ನಿತ್ಯ ಪೂಜೆ ಸಲ್ಲಿಸಲು ಪ್ರಾರಂಭಿಸಿದ್ದಾರೆ.
ಡಿ.ಕೆ.ರವಿಯವರ ಆದರ್ಶ, ಪ್ರಾಮಾಣಿಕತೆಗಳು ಇತರ ಐಎಎಸ್ ಅಧಿಕಾರಿಗಳು, ಯುವ ಜನಾಂಗ ಜತೆಗೆ ಪ್ರತಿಯೊಬ್ಬ ಸರಕಾರಿ ಅಧಿಕಾರಿಗಳಿಗೆ ಸ್ಪೂರ್ತಿಯಾಗಲಿ ಎಂಬ ಉದ್ದೇಶದಿಂದ ದೇವಸ್ಥಾನ ನಿರ್ಮಿಸಿರುವುದಾಗಿ ಗ್ರಾಮಸ್ಥರು ಹೇಳುತ್ತಿದ್ದಾರೆ. ಜತೆಗೆ ರವಿಯವರ ಹೆಸರಿನಲ್ಲಿ ಉಚಿತ ಆಂಬ್ಯುಲೆನ್ಸ್ ಸೇವೆಯನ್ನು ಕೂಡ ಆರಂಭಿಸಲಾಗಿದೆ.