ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ತಮಿಳರ ನೆಚ್ಚಿನ ಅಮ್ಮ ನಿರ್ದೋಷಿ ಎಂದು ನ್ಯಾಯಾಧೀಶರು ಪ್ರಕಟಿಸುತ್ತಿದ್ದಂತೆ ಇಲ್ಲಿನ ಉಚ್ಚ ನ್ಯಾಯಾಲಯದ ಆವರಣದಲ್ಲಿ ಜಮಾಯಿಸಿದ್ದ ಅಮ್ಮನ ಅಭಿಮಾನಿಗಳು ಸಂಭ್ರಮ-ಸಂತೋಷಗಳಿಂದ ಹುಚ್ಚೆದ್ದು ಕುಣಿದರು.ಇಂದು ಮುಂಜಾನೆಯಿಂದಲೇ ನ್ಯಾಯಾಲಯದ ಆವರಣದಲ್ಲಿ ಸೇರಿದ್ದ ಅಭಿಮಾನಿಗಳು ತಮ್ಮ ಪ್ರೀತಿಯ ಅಮ್ಮನ ಭವಿಷ್ಯದ ಬಗ್ಗೆ ತೀರಾ ಆತಂಕಿತರಾಗಿದ್ದರು. ಅಮ್ಮನಿಗೆ ಎಲ್ಲಿ ಜೈಲು ಶಿಕ್ಷೆ ಖಾಯಂ ಆಗುವುದೋ ಎಂದು ಆತಂಕದಿಂದ್ದ ಜನ ಇಂದಿನ ಈ ತೀರ್ಪಿನಿಂದ ತಮ್ಮ ಕಿವಿಗಳನ್ನೇ ನಂಬದಷ್ಟು ಸಂತೋಷದಲ್ಲಿ ಮುಳುಗಿದ್ದರು.
ಜಯಲಲಿತಾ ಅವರ ಪರ ಘೋಷಣೆಗಳು ಮುಗಿಲು ಮುಟ್ಟಿದ್ದವು. ಭಾರೀ ಪ್ರಮಾಣದ ಪಟಾಕಿ ಸಿಡಿಸಿದ್ದರಿಂದ ಇಡೀ ನ್ಯಾಯಾಲಯದ ಆವರಣದಲ್ಲಿ ಸ್ವಲ್ಪ ಸಮಯ ಒಬ್ಬರಿಗೊಬ್ಬರು ಕಾಣದಷ್ಟು ಹೊಗೆ ತುಂಬಿಕೊಂಡಿತ್ತು. ಕೆಲ ಅಭಿಮಾನಿಗಳಂತೂ ಜಯಾ ಪರ ವಾದಿಸಿದ್ದ ವಕೀಲರನ್ನು ಹೊತ್ತುಕೊಂಡು ಕೋರ್ಟ್ ಆವರಣದಲ್ಲಿ ಕುಣಿದರು. ಮೆರವಣಿಗೆ ಮಾಡಿದರು. ಜಯ ಲಲಿತಾ ಫೋಟೋಗಳನ್ನು ಹಿಡಿದು ಸಂಭ್ರಮದಿಂದ ಪರಸ್ಪರ ಹಸ್ತಲಾಘವ ನೀಡಿ ಆನಂದಿಸಿದರು.
ತಮಿಳುನಾಡಿನಲ್ಲಿ ಮುಗಿಲು ಮುಟ್ಟಿದ ಹರ್ಷ:
ಅತ್ತ ತಮಿಳು ನಾಡಿನಲ್ಲಂತೂ ಜನರ ಹರ್ಷ ಮುಗಿಲು ಮುಟ್ಟಿತ್ತು. ಅಮ್ಮನ ಪರ ತೀರ್ಪು ಹೊರ ಬೀಳುತ್ತಿದ್ದಂತೆಯೇ ಅಲ್ಲಿಯೂ ಅಭಿಮಾನಿಗಳು ಪಟಾಕಿ ಹಚ್ಚಿ ಸಂಭ್ರಮಿಸಿದರು. ಕೆಲವರಂತೂ ಆನಂದ ತಡೆಯಲಾರದೆ ಬಿಕ್ಕಿ ಬಿಕ್ಕಿ ಅತ್ತದ್ದೂ ಆಯ್ತು. ಇಡೀ ತಮಿಳುನಾಡಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ವಿಶ್ವ ಅಮ್ಮಂದಿರ ದಿನದ ಬೆನ್ನಲ್ಲೇ ತಮ್ಮ ನೆಚ್ಚಿನ ಅಮ್ಮನಿಗೆ ಜೈಲು ತಪ್ಪಿದ್ದು ಅಭಿಮಾನಿಗಳು ಸಂಭ್ರಮಾತಿರೇಕದಿಂದ ಕುಣಿದಾಡಿದರು. ಕುಣಿದು ಕುಪ್ಪಳಿಸಿದ ಸಚಿವರು:ತಮಿಳುನಾಡು ಸರ್ಕಾರದ ಸಚಿವರು ಜಯಲಲಿತಾ ನಿರ್ದೋಷಿ ಎಂದು ಪ್ರಕಟಿಸುತ್ತಿದ್ದಂತೆ ಕಾರ್ಯಕರ್ತರ ನಡುವೆ ಬಂದು ಸಂಭ್ರಮಾಚರಣೆಯಲ್ಲಿ ಕುಣಿದು ಕುಪ್ಪಳಿಸಿದರು. ಸಾಮಾನ್ಯ ಕಾರ್ಯಕರ್ತರಂತೆ ಸಚಿವರು ಪಟಾಕಿ ಸಿಡಿಸಿ, ಸಿಹಿ ಹಂಚಿ, ವಾದ್ಯ ಮೇಳಗಳಿಗೆ ಹೆಜ್ಜೆ ಹಾಕಿದರು. ಇತ್ತ ಬೆಂಗಳೂರು ಹೈಕೋರ್ಟ್‌ನಲ್ಲೂ ಜಯಪರ ವಕೀಲರು ನ್ಯಾಯಾಲಯದ ಆವರಣದಲ್ಲೇ ಸಿಹಿ ಹಂಚಿ ತಮ್ಮ ಅಭಿಮಾನದ ಉತ್ತುಂಗ ಸ್ಥಿತಿಯನ್ನು ಪ್ರದರ್ಶಿಸಿದರು.