ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ ಪ್ರಕರಣದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಕರ್ನಾಟಕ ಹೈಕೋರ್ಟ್ ಕ್ಲೀನ್‌ಚಿಟ್ ನೀಡಿದೆ. ಇನ್ನೇನು ರಾಜಕೀಯದಲ್ಲಿ ಜಯಲಲಿತಾ ಕಳೆದು ಹೋಗಿಬಿಟ್ಟರೆಂದು ಅಂದುಕೊಂಡವರಿಗೆ ನ್ಯಾಯಾಲಯದ ತೀರ್ಪು ಬರಸಿಡಿಲಿನಂತೆ ಅಪ್ಪಳಿಸಿದೆ.ಈ ತೀರ್ಪು ದ್ರಾವಿಡರ ನಾಡಿನಲ್ಲಿ ಹಲವು ಹೊಸ ರಾಜಕೀಯ ಬೆಳವಣಿಗೆಗಳಿಗೆ ಮುನ್ನುಡಿ ಬರೆದಿದೆ. ಇದೇ ರೀತಿ ಕರ್ನಾಟಕದಲ್ಲೂ ಅಕ್ರಮ ಹಾಗೂ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ ಆರೋಪದ ಮೇಲೆ ಘಟಾನುಘಟಿ ನಾಯಕರು ನ್ಯಾಯಾಲಯದ ತೂಗುಗತ್ತಿ ಎದುರಿಸುತ್ತಿದ್ದಾರೆ.
ನ್ಯಾಯಾಲಯ ನೀಡುವ ತೀರ್ಪಿನ ಮೇಲೆ ಇವರ ರಾಜಕೀಯ ಭವಿಷ್ಯ ತೀರ್ಮಾನವಾಗಲಿದೆ. ಈಗಾಗಲೇ ಪ್ರಕರಣ ತನಿಖಾ ಹಂತದಲ್ಲಿದ್ದು, ಯಾವ ಸಂದರ್ಭದಲ್ಲಿ ಏನಾಗುತ್ತದೆ ಎಂದು ಚಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದಾರೆ.
ಅಧಿಕಾರ ದುರುಪಯೋಗ, ಸ್ವಜನ ಪಕ್ಷಪಾತ, ಭ್ರಷ್ಟಾಚಾರಕ್ಕೆ ಸಿಲುಕಿ ರಾಜಕಾರಣ ಇರುವುದೇ ಹಣಗಳಿಸಲೆಂಬ ಹಪಹಪಿಗೆ ಬಿದ್ದವರು ನ್ಯಾಯಾಲಯಕ್ಕೆ ಅಲೆಯುವಂತಾಗಿದೆ. ಸದ್ಯಕ್ಕೆ ಜಯಲಲಿತಾ ಕಾನೂನಿನ ತೂಗುಗತ್ತಿಯಿಂದ ಪಾರಾಗಿದ್ದಾರೆ. ಉಳಿದವರ ಗತಿ ಏನಾಗಲಿದೆ ಎಂಬುದು ನ್ಯಾಯಾಲಯ ನೀಡುವ ತೀರ್ಪಿನ ಮೇಲೆ ಅವಲಂಬಿತವಾಗಿದೆ. ಅಂದಹಾಗೆ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿ ನ್ಯಾಯಾಲಯದ ಕಟಕಟೆಯಲ್ಲಿರುವವರ ವಿವರ ಈ ಕೆಳಕಂಡಂತಿದೆ:
ಬಿ.ಎಸ್.ಯಡಿಯೂರಪ್ಪ:
ದಕ್ಷಿಣ ಭಾರತದ ಮೊಟ್ಟ ಮೊದಲ ಬಿಜೆಪಿ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಲಿಯಾಸ್ ಬಿ.ಎಸ್.ಯಡಿಯೂರಪ್ಪ. ರೈತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಇವರು ಅಕ್ರಮ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಜೈಲಿಗೆ ಹೋದ ಮೊಟ್ಟ ಮೊದಲ ಕರ್ನಾಟಕದ ಮುಖ್ಯಮಂತ್ರಿ ಎಂಬ ಕುಖ್ಯಾತಿಗೂ ಪಾತ್ರರಾದವರು. ಸದ್ಯ ಶಿವಮೊಗ್ಗ ಸಂಸದರಾಗಿರುವ ಯಡಿಯೂರಪ್ಪ ಮೇಲೆ ಅಕ್ರಮ ಆಸ್ತಿ ಸಂಪಾದನೆ ಮಾಡಿರುವ ಆರೋಪವಿದೆ. ವಕೀಲ ವಿನೋದ್ ಎಂಬುವರು ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು, ವಿಚಾರಣೆ ಪ್ರಗತಿಯಲ್ಲಿದೆ.
ಡಿ.ವಿ.ಸದಾನಂದಗೌಡ:
ನಿರೀಕ್ಷೆ ಮಾಡದ ರೀತಿಯಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾದವರು ದೇವರಗುಂಡ ವೆಂಕಟಪ್ಪ ಸದಾನಂದಗೌಡ ಅಲಿಯಾಸ್ ಡಿ.ವಿ.ಸದಾನಂದಗೌಡ. ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ಇವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ರಾಜಕೀಯ ಜೀವನ ಆರಂಭಿಸಿದ ಅವರು, ಶಾಸಕರಾಗಿ, ಸಂಸದರಾಗಿಯೂ ಆಯ್ಕೆಯಾಗಿದ್ದರು. ಇದೇ ಮೊದಲ ಬಾರಿಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕೇಂದ್ರದಲ್ಲಿ ಮೊದಲ ಬಾರಿಗೆ ರೈಲ್ವೆ ಖಾತೆ ಸಚಿವರಾಗಿದ್ದರು. ನಂತರ ಅವರಿಗೆ ಕಾನೂನು ಖಾತೆ ನೀಡಲಾಗಿದೆ. 2014ರ ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ಆಯೋಗಕ್ಕೆ 9.88 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದ ಗೌಡರ ಆಸ್ತಿ ಒಂದೇ ವರ್ಷದಲ್ಲಿ 21 ಕೋಟಿಗೆ ಏರಿಕೆಯಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ:
ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ವಿಶಿಷ್ಟ ವ್ಯಕ್ತಿತ್ವ ಮತ್ತು ಪಕ್ಷನಿಷ್ಠೆಗೆ ಹೆಸರಾದವರೆಂದರೆ ಮಲ್ಲಿಕಾರ್ಜುನ ಖರ್ಗೆ. ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಹೇಳದ ಮಾತಿಲ್ಲ ಎಂಬ ನಾಣ್ಣುಡಿಯಂತೆ ಖರ್ಗೆ ಮುಖ್ಯಮಂತ್ರಿ ಪದವಿ ಹೊರತುಪಡಿಸಿ ಎಲ್ಲ ಇಲಾಖೆಗಳಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಸತತ 9 ಬಾರಿ ಗುಲ್ಬರ್ಗ ಜಿಲ್ಲೆಯ ಗುರುಮಟ್ಕಲ್ ಕ್ಷೇತ್ರದ ಶಾಸಕರಾಗಿದ್ದ ಅವರು 2008ರ ಬಳಿಕ ಕೇಂದ್ರದತ್ತ ಚಿತ್ತ ಹರಿಸಿದರು. ಗುಲ್ಬರ್ಗ ಮೀಸಲು ಲೋಕಸಭಾ ಕ್ಷೇತ್ರದಿಂದ ಸತತ ಎರಡು ಬಾರಿ ಸಂಸದರಾಗಿರುವ ಖರ್ಗೆ ಸೋಲಿಲ್ಲದ ಸರದಾರರಂತೆ ಖ್ಯಾತಿಯಾಗಿದ್ದಾರೆ. ಸಮಾಜ ಪರಿವರ್ತನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಿ.ರತ್ನಾಕರ್ ಅವರು ಖರ್ಗೆ ಅವರ ಪುತ್ರ ಪ್ರಿಯಾಂಕ ಖರ್ಗೆ ಸೇರಿದಂತೆ ಕುಟುಂಬದ ಸದಸ್ಯರು ಅಕ್ರಮ ಆಸ್ತಿ ಸಂಪಾದಿಸಿದ್ದಾರೆಂದು ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ.
ಎಚ್.ಡಿ.ಬಾಲಕೃಷ್ಣ:
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಹಿರಿಯ ಪುತ್ರ ಎಚ್.ಡಿ.ಬಾಲಕೃಷ್ಣಗೌಡರ ಮೇಲೆಯೂ ಅಕ್ರಮ ಆಸ್ತಿ ಸಂಪಾದನೆ ದೂರು ದಾಖಲಾಗಿದೆ. ಮೂಲತಃ ಕೆಎಎಸ್ ಅಧಿಕಾರಿಯಾಗಿದ್ದ ಬಾಲಕೃಷ್ಣ ಅವರು ಅಧಿಕಾರ ದುರುಪಯೋಗಪಡಿಸಿಕೊಂಡು ಸಾಕಷ್ಟು ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆಂದು ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.
ಕೆ.ಎಸ್.ಈಶ್ವರಪ್ಪ:
ಬಾಯಿ ಬಿಟ್ಟರೆ ವಿವಾದದ ಸರಮಾಲೆಯನ್ನೇ ಸೃಷ್ಟಿಸುವ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮೇಲೆಯೂ ಅಕ್ರಮ ಆಸ್ತಿ ಸಂಪಾದನೆಯ ದೂರು ದಾಖಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈಶ್ವರಪ್ಪ ಉಪಮುಖ್ಯಮಂತ್ರಿಯಾದ ವೇಳೆ ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿದ್ದಾರೆಂದು ವಕೀಲರೊಬ್ಬರು ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ಈಶ್ವರಪ್ಪ ಅವರ ಪುತ್ರ ಕಾಂತರಾಜ್ ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮ ಆಸ್ತಿ ಸಂಪಾದಿಸಿದ್ದಾರೆಂಬ ಆರೋಪವಿದೆ.
ಎಂ.ಪಿ.ರೇಣುಕಾಚಾರ್ಯ:
ತನ್ನ ವಿವಾದಾತ್ಮಕ ನಡೆಯಿಂದಲೇ ರಾಜ್ಯ ರಾಜಕಾರಣದಲ್ಲಿ ಬಹುಬೇಗನೆ ಕೀರ್ತಿ ಮತ್ತು ಅಪಕೀರ್ತಿಯನ್ನು ಗಳಿಸಿದ ರಾಜಕಾರಣಿ ಎಂದರೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಾನಸ ಪುತ್ರ ಎಂದೇ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡಿರುವ ರೇಣುಕಾಚಾರ್ಯ ಅಕ್ರಮ ಆಸ್ತಿ ಸಂಪಾದಿಸಿದ್ದಾರೆಂದು ದೂರು ದಾಖಲಿಸಲಾಗಿದೆ. ಆರ್‌ಟಿಐ ಕಾರ್ಯಕರ್ತ ಹಿರೇಮಠ್ ಎಂಬುವರು ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ. ಈಗಾಗಲೇ ರೇಣುಕಾಚಾರ್ಯ ಮತ್ತು ಅವರ ಸಹೋದರರ ವಿರುದ್ಧ ದಾವಣಗೆರೆ ಲೋಕಾಯುಕ್ತ ನ್ಯಾಯಾಲಯ ಎಫ್‌ಐಆರ್ ದಾಖಲಿಸಿದೆ.
ವರ್ತೂರು ಪ್ರಕಾಶ್:
ಕೋಲಾರ ಜಿಲ್ಲೆಯ ಪಕ್ಷೇತರ ವಿಧಾನಸಭಾ ಕ್ಷೇತ್ರ ಶಾಸಕರಾಗಿರುವ ವರ್ತೂರು ಪ್ರಕಾಶ್ ಮೇಲೆ ಇದೆ ಎಂಬ ಆರೋಪವಿದೆ. ಎದುರಿಸಿದ ಮೊದಲ ಚುನಾವಣೆಯಲ್ಲೇ ಸಚಿವರಾಗಿದ್ದ ವರ್ತೂರು ಪ್ರಕಾಶ್ ಬೆನ್ನಿಗೆ ವಿವಾದಗಳ ಸಾಲೇ ಇದೆ. ಅಧಿಕಾರಿಗಳಿಗೆ ಧಮಕಿ ಹಾಕಿದ ಪ್ರಕರಣ ಅವರನ್ನು ತೀವ್ರ ಇರಿಸು-ಮುರಿಸು ಉಂಟುಮಾಡಿತ್ತು. ವರ್ತೂರು ಪ್ರಕಾಶ್ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆಂಬ ಆರೋಪವಿದೆ.
ಬಿ.ವೈ.ರಾಘವೇಂದ್ರ:
ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರರಾಗಿರುವ ಬಿ.ವೈ.ರಾಘವೇಂದ್ರ ಶಿಕಾರಿಪುರ ವಿಧಾನಸಭಾ ಕ್ಷೇತ್ರದ ಶಾಸಕರೂ ಹೌದು. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಮೇಲೆ ರಾಘವೇಂದ್ರ ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮ ಆಸ್ತಿ ಸಂಪಾದಿಸಿದ್ದಾರೆಂದು ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ.