ಕರ್ನಾಟಕ

ಡಿ.ಕೆ.ರವಿ ನಿಗೂಢ ಸಾವು ಆತ್ಮಹತ್ಯೆ; ಸಿಬಿಐನ ಪ್ರಾಥಮಿಕ ತನಿಖೆಯಿಂದ ಸಾಬೀತು ? ಸದ್ಯಕ್ಕೆ ಮಧ್ಯಂತರ ವರದಿ ಇಲ್ಲ

Pinterest LinkedIn Tumblr

Protest in Bengaluru

ಬೆಂಗಳೂರು, ಮೇ 15: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬುಡವನ್ನೇ ಅಲುಗಾಡಿಸಿದ್ದ ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವು ಆತ್ಮಹತ್ಯೆ ಎಂದು ಸಿಬಿಐನ ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ. ಕಳೆದ ಹಲವು ದಿನಗಳಿಂದ ಸಿಬಿಐ ಅಧಿಕಾರಿಗಳ ತಂಡ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಡಿ.ಕೆ.ರವಿ ಸಾವು ಆತ್ಮಹತ್ಯೆಯಿಂದಲೇ ನಡೆದಿದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ರವಿ ಸಾವಿನ ಕುರಿತು ಸಿಬಿಐ ಸದ್ಯಕ್ಕೆ ಮಧ್ಯಂತರ ವರದಿ ಇಲ್ಲವೆ ಅಂತಿಮ ವರದಿ ನೀಡದಿರಲು ತೀರ್ಮಾನಿಸಿದೆ.

ತಜ್ಞ ವೈದ್ಯರಿಂದ ಮರು ಮರಣೋತ್ತರ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ. ಅಂತಿಮ ವರದಿ ಬಂದ ನಂತರ ಈ ನಿಗೂಢ ಸಾವಿನ ಪ್ರಕರಣವನ್ನು ಬಹಿರಂಗಪಡಿಸಲಿದ್ದಾರೆ ಎಂದು ಸಿಬಿಐ ಮೂಲಗಳು ಖಚಿತಪಡಿಸಿವೆ. ದೆಹಲಿಯ ಏಮ್ಸ್ ವೈದ್ಯಕೀಯ ತಂಡ ರವಿ ಮರು ಮರಣೋತ್ತರ ಶವ ಪರೀಕ್ಷೆ ನಡೆಸಲಿದೆ. ಈಗಾಗಲೇ ಈ ಮೊದಲು ರವಿ ಶವ ಪರೀಕ್ಷೆ ನಡೆಸಲಾಗಿದ್ದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರಿಂದ ಸಿಬಿಐ ತನಿಖಾ ತಂಡ ಅಗತ್ಯ ಮಾಹಿತಿ ಪಡೆದಿದೆ.

ಸಿಬಿಐನ ಹಿರಿಯ ಅಧಿಕಾರಿ ಉಮೇಶ್ ದತ್ತ, ಎಸ್‌ಪಿ ಕೃಷ್ಣಮೂರ್ತಿ ನೇತೃತ್ವದ ತಂಡ ಈಗಾಗಲೇ ಹಲವರನ್ನು ವಿಚಾರಣೆಗೆ ಒಳಪಡಿಸಿತ್ತು. ವಿಕ್ಟೋರಿಯಾ ಆಸ್ಪತ್ರೆ ವೈದ್ಯರು, ಬೆಂಗಳೂರು ಪೊಲೀಸರು, ಡಿ.ಕೆ.ರವಿ ಮಾವ ಹನುಮಂತರಾಯಪ್ಪ, ಪತ್ನಿ ಕುಸುಮಾ, ರವಿ ತಂದೆ-ತಾಯಿ-ಸಹೋದರ, ಸ್ನೇಹಿತರು, ಸಂಬಂಧಿಕರಿಂದಲೂ ಮಾಹಿತಿ ಪಡೆಯಲಾಗಿತ್ತು. ಎಲ್ಲ ದೃಷ್ಟಿಯಿಂದ ತನಿಖೆ ನಡೆಸಿರುವ ತನಿಖಾಧಿಕಾರಿಗಳಿಗೆ ರವಿ ಯಾವ ಕಾರಣಕ್ಕೆ ಸಾವನ್ನಪ್ಪಿದರು ಎಂಬುದು ನಿಗೂಢ ಪ್ರಶ್ನೆಯಾಗಿತ್ತು.

ಸುಳಿವು ನೀಡಿದ ಮೊಬೈಲ್:
ಹೀಗೆ ಜಟಿಲವಾಗಿದ್ದ ಪ್ರಕರಣವನ್ನು ಬೆನ್ನುಹತ್ತಿದ ತನಿಖಾಧಿಕಾರಿಗಳಿಗೆ ರವಿ ಉಪಯೋಗಿಸುತ್ತಿದ್ದ ಮೊಬೈಲ್, ಲ್ಯಾಪ್‌ಟಾಪ್, ಐ-ಪಾಡ್‌ಗಳಿಂದ ಮಹತ್ವದ ಸುಳಿವು ಲಭ್ಯವಾಗಿವೆ. ರವಿ ಕಳುಹಿಸಿದ್ದ ಎಸ್‌ಎಂಎಸ್ ಸಂದೇಶಗಳಿಂದ ತನಿಖಾಧಿಕಾರಿಗಳಿಗೆ ಈ ಪ್ರಕರಣ ಭೇದಿಸಲು ಸಾಧ್ಯವಾಗಿದೆ ಎಂದು ಮೂಲಗಳು ಖಚಿತಪಡಿಸಿವೆ. ತನ್ನ ಮೊಬೈಲ್‌ನಿಂದ ಡಿ.ಕೆ.ರವಿ ಹತ್ತು ಸಾವಿರಕ್ಕೂ ಹೆಚ್ಚು ಎಸ್‌ಎಂಎಸ್‌ಗಳನ್ನು ಕಳುಹಿಸಿರುವುದನ್ನು ಸಿಬಿಐ ಪತ್ತೆ ಮಾಡಿದೆ. ಮಹಿಳಾ ಐಎಎಸ್ ಅಧಿಕಾರಿಯೊಬ್ಬರಿಗೆ ರವಿ ಎಸ್‌ಎಂಎಸ್ ಕಳುಹಿಸಿದ್ದಾರೆ. ಕೊನೆಯ ಎಸ್‌ಎಂಎಸ್‌ನಲ್ಲಿ ನೀನಿಲ್ಲದ ಈ ಜೀವನ ನಶ್ವರ ಎಂದು ಎಸ್‌ಎಂಎಸ್ ಮಾಡಿ ನನ್ನ ಸಾವಿಗೆ ನಾನೇ ಕಾರಣ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಮುಂದಿನ ಜನ್ಮದಲ್ಲಿ ಭೇಟಿಯಾಗೋಣ ಎಂದು ಹೇಳಿದ್ದಾರೆ.

ಮಹಿಳಾ ಅಧಿಕಾರಿಣಿ ವಿಚಾರಣೆ: ಹೀಗೆ ರವಿ ಕಳುಹಿಸಿದ್ದ ಎಸ್‌ಎಂಎಸ್ ಆಧಾರದ ಮೇಲೆ ಹಾಲಿ ಸೇವೆಯಲ್ಲಿರುವ ಮಹಿಳಾ ಐಎಎಸ್ ಅಧಿಕಾರಿಯೊಬ್ಬರನ್ನು ಸಿಬಿಐ ತಂಡ ವಿಚಾರಣೆಗೊಳಪಡಿಸಿತು. ಇಬ್ಬರ ನಡುವೆ ಇದ್ದದ್ದು ಸ್ನೇಹವೇ ಹೊರತು ಬೇರೇನೂ ಇಲ್ಲ. ನನ್ನ ಬಳಿ ಕೆಲವು ಬಾರಿ ವೈಯಕ್ತಿಕ ವಿಷಯ ಪ್ರಸ್ತಾಪಿಸಿದಾಗ ಅವರಿಗೆ ತಿಳಿ ಹೇಳಿದ್ದೆ. ಆತ್ಮಹತ್ಯೆ ಮಾಡಿಕೊಳ್ಳುವಂತಹ ದುಡುಕಿನ ನಿರ್ಧಾರ ಕೈಗೊಳ್ಳದಂತೆ ಸಲಹೆ ಮಾಡಿದ್ದೆ. ಆದರೆ, ಕೊನೆಯ ಎಸ್‌ಎಂಎಸ್‌ನಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದೇನೆ ಎಂದು ರವಿ ಹೇಳಿದಾಗ ಗಂಭೀರವಾಗಿ ಪರಿಗಣಿಸಲಿಲ್ಲ. ಇದು ತಮಾಷೆಯಾಗಿ ಹೇಳಿರಬಹುದು ಎಂದು ಭಾವಿಸಿದ್ದೆ. ಆದರೆ, ರವಿ ಇಂತಹ ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಾರೆಂದು ನಾನು ಭಾವಿಸಿರಲಿಲ್ಲ ಎಂಬುದಾಗಿ ಈ ಅಧಿಕಾರಿಣಿ ಮಾಹಿತಿ ನೀಡಿದ್ದಾರೆ. ಅಂತಿಮವಾಗಿ ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಿದ ಸಿಬಿಐ ಇದು ಆತ್ಮಹತ್ಯೆ ಎಂದೇ ಷರಾ ಬರೆಯಲು ಮುಂದಾಗಿದೆ.

ವೈಯಕ್ತಿಕ ಕಾರಣ:
ವೃತ್ತಿಯಲ್ಲಿ ದಕ್ಷ ಎಂದೇ ಗುರುತಿಸಿಕೊಂಡಿದ್ದ ಡಿ.ಕೆ.ರವಿ ಆತ್ಮಹತ್ಯೆ ಮಾಡಿಕೊಳ್ಳಲು ವೈಯಕ್ತಿಕ ಕಾರಣ ಎಂಬುದು ಸಿಬಿಐ ಹೇಳಿಕೆಯಾಗಿದೆ. ಕಳೆದ ಮಾ.16ರಂದು ಬೆಂಗಳೂರಿನ ಕೋರಮಂಗಲದ ತಾವರೆಕೆರೆ ಮುಖ್ಯರಸ್ತೆಯಲ್ಲಿರುವ ಸೆಂಟ್‌ಜಾನ್‌ವುಡ್ ಅಪಾರ್ಟ್‌ಮೆಂಟ್‌ನಲ್ಲಿ ಡಿ.ಕೆ.ರವಿ ಫ್ಯಾನಿಗೆ ನೇಣು ಹಾಕಿಕೊಂಡು ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಭಾರೀ ಕೋಲಾಹಲವನ್ನೇ ಸೃಷ್ಟಿಸಿತ್ತು. ಸರ್ಕಾರ ಸಿಐಡಿ ತನಿಖೆಗೆ ಆದೇಶ ಮಾಡಿತ್ತು. ಆದರೆ, ಸಾರ್ವಜನಿಕರ ಪ್ರತಿಭಟನೆ, ರಾಜಕೀಯ ಪಕ್ಷಗಳ ಒತ್ತಡ, ಪೋಷಕರ ಆಗ್ರಹಕ್ಕೆ ಮಣಿದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಬಿಐ ತನಿಖೆಗೆ ಆದೇಶ ನೀಡಿದ್ದರು.

(ಈಸಂಜೆ)

Write A Comment