ಕರ್ನಾಟಕ

ಬಿಬಿಎಂಪಿಗೆ ಜುಲೈ ಎರಡನೆ ವಾರ ಚುನಾವಣೆ

Pinterest LinkedIn Tumblr

BBMP-Election

ಬೆಂಗಳೂರು, ಮೇ 22- ಜುಲೈ ಎರಡನೆ ವಾರದಲ್ಲಿ ಬಿಬಿಎಂಪಿ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಮೀಸಲಾತಿ ಪಟ್ಟಿಯನ್ನು ಸಿದ್ಧಗೊಳಿಸಲಾಗಿದೆ.  ನಗರ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿಯವರು ಜೂನ್ ಮೊದಲ ವಾರ ಮೀಸಲಾತಿ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಿದ್ದಾರೆ.

ನಂತರ ಬಿಬಿಎಂಪಿ ಚುನಾವಣೆ ಅಧಿಸೂಚನೆ ಪ್ರಕಟವಾಗಲಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ. ಜುಲೈ ಎರಡನೆ ವಾರದಲ್ಲಿ ಚುನಾವಣೆ ನಡೆಯಲಿದ್ದು, ಸರ್ಕಾರ ಹೊಸ ಮೀಸಲಾತಿ ಪಟ್ಟಿ ಸಲ್ಲಿಸಲಿರುವುದರಿಂದ ಹಾಲಿ ಬಿಜೆಪಿ, ಜೆಡಿಎಸ್ ಸದಸ್ಯರಿಗೆ ಸ್ಥಾನ ಕೈ ತಪ್ಪುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಸಲ್ಲಿಸಿದ್ದ ಮೀಸಲಾತಿ ಪಟ್ಟಿಯಲ್ಲಿ ಶೇ.70ಕ್ಕೂ ಹೆಚ್ಚು ಸದಸ್ಯರಿಗೆ ಕೈ ತಪ್ಪುವ ಸಾಧ್ಯತೆ ಇದೆ. ಕಾಂಗ್ರೆಸ್ ಸದಸ್ಯರಿಗೆ ಅನುಕೂಲ ಕಲ್ಪಿಸುವ ಮೀಸಲಾತಿ ಪಟ್ಟಿ ಸಿದ್ಧತೆ ಮಾಡಲಾಗಿದೆ. ಹಾಲಿ ಇರುವ ಬಿಜೆಪಿ, ಜೆಡಿಎಸ್ ಸದಸ್ಯರು ಯಾರೂ ಗೆಲ್ಲಬಾರದು ಎಂಬ ನಿಟ್ಟಿನಲ್ಲಿ ಮೀಸಲಾತಿ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸಲು ಸರ್ಕಾರ ತಂತ್ರ ರೂಪಿಸಿದೆ. ಇದು ಪ್ರತಿಪಕ್ಷಗಳಿಗೆ ಮಗ್ಗಲು ಮುಳ್ಳಾಗಲಿದೆ.

ಜೂ.6 ಅಥವಾ 7ರಂದು ಚುನಾವಣಾ ಆಯೋಗಕ್ಕೆ ಮೀಸಲಾತಿ ಪಟ್ಟಿ ಸಲ್ಲಿಸುವ ಸಾಧ್ಯತೆಯಿದೆ. ಅಲ್ಲಿಯವರೆಗೆ ಬಹಿರಂಗ ಮಾಡದಂತೆ ಗೌಪ್ಯತೆ ಕಾಪಾಡಿಕೊಳ್ಳಬೇಕೆಂದು ಸೂಚನೆ ನೀಡಲಾಗಿದೆ. ಬಹಿರಂಗಗೊಂಡರೆ ಯಾರಾದರೂ ನ್ಯಾಯಾಲಯಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ಮೀಸಲಾತಿ ಪಟ್ಟಿ ಸಲ್ಲಿಸಿದ ನಂತರ ನ್ಯಾಯಾಲಯಕ್ಕೆ ಹೋದರೂ ತಡೆ ಸಿಗುವ ಸಾಧ್ಯತೆ ಕಡಿಮೆಯಿದೆ.  ಸುಪ್ರೀಂಕೋರ್ಟ್ ಆದೇಶದನ್ವಯ ಮೂರು ತಿಂಗಳೊಳಗೆ ಚುನಾವಣೆ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದು, ಜುಲೈ ಎರಡನೆ ವಾರದಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.

Write A Comment