ಕುಷ್ಟಗಿ (ಕೊಪ್ಪಳ); ಒಬ್ಬರ ಮುಖ ಮತ್ತೊಬ್ಬರು ನೋಡದೇ ಈ ಜೋಡಿ ಮನಸಾರೆ ಪ್ರೀತಿಸಿತ್ತು. ಇವರಿಬ್ಬರ ಪ್ರೀತಿಗೆ ನಾಂದಿಯಾಗಿದ್ದು ಒಂದೇ ಒಂದು ಮಿಸ್ಡ್‌ಕಾಲ್. ಕೆಲವೇ ದಿನಗಳಲ್ಲಿ ಅಂಕುರಗೊಂಡಿದ್ದ ಪ್ರೇಮ, ವೈವಾಹಿಕ ಸಂಬಂಧ ಬೆಸೆಯುವ ಹಂತದಲ್ಲಿ ಮುರಿದುಬಿದ್ದಿದೆ. ಪಾಲಕರು ನೀಡಿದ ದೂರಿನ ಹಿನ್ನೆಲೆಯಲ್ಲಿ ಈ ಜೋಡಿ ಹಕ್ಕಿಗಳು ಸದ್ಯ ತಮ್ಮ ತಮ್ಮ ಗೂಡು ಸೇರಿವೆ.
ಒಂದೂವರೆ ವರ್ಷದ ಹಿಂದೆ, ಹೂವಿನಹಡಗಲಿ ತಾಲೂಕು ಕುಮಾರನಾಯಕನಹಳ್ಳಿ ತಾಂಡಾದ ಯುವತಿಯ ಮೊಬೈಲ್‌ನಿಂದ ಕುಷ್ಟಗಿಯ ಯುವಕನೊಬ್ಬನಿಗೆ ಅದ್ಹೇಗೊ ಮಿಸ್ಡ್‌ಕಾಲ್ ಬಂದಿದೆ. ಯುವಕ ಈ ಮಿಸ್ಡ್‌ಕಾಲ್‌ಗೆ ಕುತೂಹಲದಿಂದ ಪ್ರತಿಕ್ರಿಯಿಸಿದ. ನಂತರ ಇಬ್ಬರ ನಡುವೆ ಮೊಬೈಲ್ ಮೂಲಕ ಸಂಭಾಷಣೆ ಶುರುವಾಯಿತು. ಸತತ ಒಂದೂವರೆ ವರ್ಷ ಇಬ್ಬರೂ ಮೊಬೈಲ್‌ನಲ್ಲೇ ಮಾತು, ಹರಟೆ ಮುಂದುವರಿಸಿದ್ದಾರೆ. ಈ ಹಂತದಲ್ಲಿ ಮಾತು ಪ್ರೇಮಕ್ಕೆ ತಿರುಗಿತು. ಒಬ್ಬರ ಮುಖ ಮತ್ತೊಬ್ಬರು ನೋಡದೇ ಮೇಘಸಂದೇಶ (ಮೆಸೇಜ್) ರವಾನೆಯಾಗಿದ್ದು ವಿಶೇಷ.
ಜೋಡಿ ಹಕ್ಕಿಗಳ ಹಾರಾಟ: ಕೊನೆಗೆ ಒಂದೂವರೆ ತಿಂಗಳ ಹಿಂದೆ ಯುವತಿ, ಯುವಕನ ಮುಂದೆ ಮದುವೆ ವಿಷಯ ಪ್ರಸ್ತಾಪಿಸಿದಳು. ಯುವಕನೂ ಅದಕ್ಕೆ ಒಪ್ಪಿದ. ಖಾಸಗಿ ವಾಹನವೊಂದರ ಚಾಲಕನಾಗಿರುವ ಯುವಕ, ತಿಂಗಳ ಹಿಂದೆ ಯುವತಿ ಇರುವ ಸ್ಥಳಕ್ಕೆ ಬರುವುದಾಗಿ ಹೇಳಿದ. ಇಬ್ಬರೂ ಪರಸ್ಪರ ಭೇಟಿಯಾದರು. ಕೆಲ ದಿನಗಳವರೆಗೆ ಅಲ್ಲಲ್ಲಿ ಜೋಡಿಯಾಗಿ ತಿರುಗಾಡಿದರು. ತಿಂಗಳ ಹಿಂದೆ ಯುವಕ ಇಲ್ಲಿನ ತನ್ನ ಮನೆಗೆ ಯುವತಿಯನ್ನು ಕರೆತಂದ. ಮದುವೆಯಾಗುವುದಾಗಿ ಯುವಕ ತನ್ನ ಮನೆಯಲ್ಲಿ ವಿಷಯ ಪ್ರಸ್ತಾಪಿಸಿದ. ಈ ಸಂದರ್ಭದಲ್ಲಿ ಯುವಕ ಹಾಗೂ ಯುವತಿ ಜತೆಯಾಗಿಯೇ ಇದ್ದರು. ಆಗ ಅವರಿಬ್ಬರ ಧರ್ಮ ಬೇರೆಯಾಗಿರುವುದು ಗಂಭೀರ ಚರ್ಚೆಗೆ ಗ್ರಾಸವಾಯಿತು. ಯುವತಿ ಹಿಂದೂ ಧರ್ಮಕ್ಕೆ ಸೇರಿದ್ದರೆ, ಯುವಕ ಮುಸ್ಲಿಂ ಧರ್ಮಕ್ಕೆ ಸೇರಿದ್ದಾನೆ.
ಯುವತಿ ಕಾಣೆ ದೂರು: ಈ ನಡುವೆ ಯುವತಿಯ ತಂದೆ, ತಮ್ಮ ಗ್ರಾಮ ವ್ಯಾಪ್ತಿಗೆ ಬರುವ ಹೂವಿನಹಡಗಲಿ ಠಾಣೆಗೆ ಮಗಳು ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದರು. ಮಗಳು ಕುಷ್ಟಗಿಯಲ್ಲಿ ಇರುವುದು ಗೊತ್ತಾಗುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದರು. ಹೂವಿನಹಡಗಲಿ ಠಾಣೆ ಪೊಲೀಸರು, ಗುರುವಾರ ಇಲ್ಲಿಗೆ ಬಂದು ಯುವತಿ ಇದ್ದ ಮನೆಗೆ ತೆರಳಿ, ಇಬ್ಬರನ್ನೂ ಇಲ್ಲಿನ ಠಾಣೆಗೆ ಕರೆತಂದರು. ಸ್ಥಳೀಯ ಪೊಲೀಸರ ಗಮನಕ್ಕೆ ತಂದು ಹೂವಿನಹಡಗಲಿಗೆ ಕರೆದೊಯ್ಯುವುದಾಗಿ ಹೇಳಿ, ಅಗತ್ಯ ಕಂಡು ಬಂದರೆ ಯುವಕನನ್ನು ಅಲ್ಲಿಗೇ ಕರೆಯಿಸುವುದಾಗಿ ಹೇಳಿದರು. ಯುವತಿಗೆ ಇಲ್ಲಿಂದ ಹೋಗಲು ಮನಸ್ಸಿಲ್ಲದಿದ್ದರೂ ಠಾಣೆಯಲ್ಲಿ ದೂರು ದಾಖಲಾಗಿದ್ದಕ್ಕೆ ಹಾಗೂ ಪಾಲಕರ ಒತ್ತಡಕ್ಕೆ ಮಣಿದು ಸ್ವಗ್ರಾಮಕ್ಕೆ ತೆರಳಿದಳು.
ಜೋಡಿಯ ಆಶಾಭಾವ: ಇಬ್ಬರ ಧರ್ಮ ಬೇರೆ ಬೇರೆಯಾಗಿದ್ದರೂ ಯುವಕ ತಮ್ಮ ಧರ್ಮದ ಪದ್ಧತಿಯಂತೆ ಮದುವೆ ಮಾಡಿಕೊಳ್ಳುವ ತಯಾರಿ ನಡೆಸಿದ್ದಾಗಲೇ ಇಬ್ಬರೂ ದೂರವಾಗಬೇಕಾಯಿತು. ”ಪರಸ್ಪರ ಒಪ್ಪಿಗೆಯಿಂದಲೇ ಮದುವೆಯಾಗಲು ನಿರ್ಧರಿಸಿದ್ದೆವು. ಹೂವಿನಹಡಗಲಿ ಠಾಣೆಯಲ್ಲಿ ವಿಚಾರಣೆ ಮುಗಿದ ಮೇಲೆ ಪೊಲೀಸರು ಯುವತಿಯನ್ನು ಮತ್ತೇ ಇಲ್ಲಿಗೆ ಕಳುಹಿಸಲು ಒಪ್ಪಿದ್ದಾರೆ. ಬಂದ ಮೇಲೆ ಮದುವೆಯಾಗುತ್ತೇವೆ” ಎಂದು ಯುವಕ, ಆಶಾಭಾವ ವ್ಯಕ್ತಪಡಿಸಿದ.