ಕರ್ನಾಟಕ

ಮೌಲ್ಯಮಾಪನದಲ್ಲಿ ಲೋಪದೋಷಗಳಾಗಿಲ್ಲ : ಎಚ್.ಡಿ.ಕುಮಾರಸ್ವಾಮಿ

Pinterest LinkedIn Tumblr

HDK-In-POU-Board

ಬೆಂಗಳೂರು, ಮೇ 22- ಪಿಯು ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲಿ ಯಾವುದೇ ಲೋಪದೋಷಗಳಾಗಿಲ್ಲ. ಅನಗತ್ಯವಾಗಿ ಗೊಂದಲ ಉಂಟು ಮಾಡಿ  ಸಂಸ್ಥೆಯನ್ನು ಹಾಳು ಮಾಡಬೇಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಭಟನಾನಿರತ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಬೆಳಗ್ಗೆ ಪದವಿ ಪೂರ್ವ ಶಿಕ್ಷಣ ಮಂಡಳಿಗೆ ಭೇಟಿ ನೀಡಿದ ಅವರು,   ಅಧಿಕಾರಿಗಳ ಜತೆ ಸುದೀರ್ಘ ಚರ್ಚೆ ನಡೆಸಿದ ನಂತರ ಹೊರ ಬಂದು ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು. ಸರ್ಕಾರ ನಿನ್ನೆಯವರೆಗೂ ಸಮಸ್ಯೆಯನ್ನು ಬಗೆಹರಿಸಲಿದೆ ಎಂಬ ವಿಶ್ವಾಸದಿಂದ ನಾವು ಸುಮ್ಮನಿದ್ದೆವು. ಇಂದು  ನಮ್ಮ ಪಕ್ಷದ ಶಾಸಕರಾದ ಜಮೀರ್‌ಅಹಮ್ಮದ್ ಖಾನ್, ಶರವಣ, ಬಿಜೆಪಿ ಶಾಸಕರಾದ ಸುರೇಶ್‌ಕುಮಾರ್, ಅಶ್ವತ್ಥನಾರಾಯಣ, ಎಎಪಿ ಮುಖಂಡ ರವಿಕೃಷ್ಣಾರೆಡ್ಡಿ ಅವರ ಜತೆ ಮಂಡಳಿ ಅಧಿಕಾರಿಗಳ ಜತೆ ಚರ್ಚೆ ನಡೆಸಿದ್ದೇನೆ. ಈ ಸಂದರ್ಭದಲ್ಲಿ ಒಂದಿಬ್ಬರು ವಿದ್ಯಾರ್ಥಿಗಳು ಹಾಗೂ ಪೋಷಕರು ನಮ್ಮ ಜತೆಗಿದ್ದರು. ಈವರೆಗೂ ಕೇಳಿಬಂದಿರುವ ದೂರುಗಳು ಹಾಗೂ ನಮಗೆ ಸಿಕ್ಕಿರುವ ಮಾಹಿತಿಯನ್ನು ಪರಿಶೀಲಿಸಲಾಗಿದೆ. ಗಣಿತದಲ್ಲಿ 9ಹೆಚ್ಚು ಅಂಕ ಕೊಡುವುದರಲ್ಲಿ ಲೋಪವಾಗಿದೆ ಎಂಬ ಆರೋಪ ಸುಳ್ಳು. ನಾವು ಪರಿಶೀಲಿಸಿದ ಎಲ್ಲಾ ಉತ್ತರ ಪತ್ರಿಕೆಗಳ ಮೌಲ್ಯಮಾಪನವು ಸರಿಯಾಗಿವೆ. ನಮಗೆ ದೂರು ನೀಡಿದ ವಿದ್ಯಾರ್ಥಿಗಳ ಎಲ್ಲ ಉತ್ತರ ಪತ್ರಿಕೆಗಳನ್ನು ಖುದ್ದಾಗಿ ಪರಿಶೀಲಿಸಿದ್ದೇವೆ ಎಂದು ವಿವರಿಸಿದರು.ಈ ಸಂದರ್ಭದಲ್ಲಿ ಕುಮಾರಸ್ವಾಮಿ ಅವರ ಮಾತುಗಳಿಗೆ ವಿರೋಧ ವ್ಯಕ್ತಪಡಿಸಿದ ಪೋಷಕರು ಹಾಗೂ ವಿದ್ಯಾರ್ಥಿಗಳು, ಏರಿದ ಧ್ವನಿಯಲ್ಲಿ ಕೂಗಿದರು.

ಇದರಿಂದ ಸಿಡಿಮಿಡಿಗೊಂಡ ಕುಮಾರಸ್ವಾಮಿ ಅವರು, ಸುಮ್ಮನೆ ಕೂಗಾಡುವುದಲ್ಲ. ನಾನು ಇಲ್ಲಿ ಸರ್ಕಾರದ ಪರವಾಗಿ ರಾಜಿಸಂಧಾನಕ್ಕೆ ಬಂದಿಲ್ಲ. ವಿದ್ಯಾರ್ಥಿಗಳು ಹಾಗೂ ಪೋಷಕರ ಹಿತರಕ್ಷಣೆಗೆ ನನ್ನ ಆದ್ಯತೆ. ನಿಮಗೆ ಅನುಮಾನಗಳಿದ್ದರೆ ನನ್ನ ಜತೆ ಬನ್ನಿ ಉತ್ತರ ಪತ್ರಿಕೆ ತೆಗೆಸಿ ಪರಿಶೀಲನೆ ಮಾಡೋಣ. ನಾನು ಈವರೆಗೆ ನೋಡಿರುವುದರಲ್ಲಿ ತಪ್ಪುಗಳು ಕಂಡು ಬಂದಿಲ್ಲ. ನಿಮಗೆ ತಪ್ಪುಗಳು ಕಂಡು ಬಂದಿದ್ದರೆ ಸಾಬೀತು ಪಡಿಸಿ ಎಂದು ಖಾರವಾಗಿ ಹೇಳಿದರು. ನಂತರ ಮಾತು ಮುಂದುವರೆಸಿದ ಎಚ್‌ಡಿಕೆ,  ದೂರವಾಣಿಯಲ್ಲಿ ಶಿಕ್ಷಣ ಸಚಿವರ ಜತೆ ಮಾತನಾಡಿದ್ದೇನೆ. ಸಿಇಟಿ ಫಲಿತಾಂಶ ಪ್ರಕಟವನ್ನು  ಮುಂದೆ ಹಾಕುವಂತೆ ನಾನು ನೀಡಿರುವ ಸಲಹೆಯನ್ನು ಸಚಿವರು  ಒಪ್ಪಿದ್ದು, ಮರುಮೌಲ್ಯಮಾಪನ ಮುಗಿಯುವವರೆಗೂ 8 ದಿನಗಳ ಮಟ್ಟಿಗೆ ಸಿಇಟಿ ಫಲಿತಾಂಶ ಪ್ರಕಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಉತ್ತರ ಪತ್ರಿಕೆಯ ಮರು ಮೌಲ್ಯಮಾಪನವನ್ನು ಸಂಪೂರ್ಣ ಉಚಿತ ಮಾಡಿಕೊಡುವಂತೆ  ಒತ್ತಾಯಿಸಿದ್ದೇನೆ. ಕಳೆದ ವರ್ಷ ಉತ್ತರ ಪತ್ರಿಕೆ ನಕಲು ಪಡೆಯಲು 36ಸಾವಿರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇದರಿಂದ 1.9 ಕೋಟಿ ಶುಲ್ಕ ವಸೂಲಿಯಾಗಿತ್ತು. ಮರುಮೌಲ್ಯಮಾಪನದಿಂದ 2 ಕೋಟಿ ರೂ. ಹಣ ಬಂದಿದೆ. ಈ ವರ್ಷ ಮರುಮೌಲ್ಯಮಾಪನದ ಶುಲ್ಕ ರದ್ದು ಮಾಡಿ ಎಂದು ಸಲಹೆ ನೀಡಿದ್ದೆ. ಆದರೆ, ಆ ರೀತಿ ಮಾಡಿದರೆ ಅನುತ್ತೀರ್ಣರಾಗಿರುವ 2ಲಕ್ಷಕ್ಕೂ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳು  ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುತ್ತಾರೆ. ಇದರಿಂದ ಗೊಂದಲವಾಗಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಸಚಿವರು ವಿವರಣೆ ನೀಡಿದ್ದಾರೆ ಎಂದರು. ಸರ್ಕಾರ ಈ ಸಮಸ್ಯೆಯನ್ನು ಆರಂಭದಲ್ಲೇ ಬಗೆಹರಿಸಬಹುದಿತ್ತು. ಅನ್ಯಾಯವಾಗಿದೆ ಎಂದು ಹೇಳುವ ಪೋಷಕರ ಜತೆ ಚರ್ಚೆ ಮಾಡಿದ್ದರೆ ಎಲ್ಲವೂ ಇತ್ಯರ್ಥವಾಗುತ್ತಿತ್ತು. ಆದರೆ, ಸರ್ಕಾರ ನಿರ್ಲಕ್ಷ್ಯ ತೋರಿದೆ. ಸಚಿವರು ಇಲ್ಲಿ ಬಂದು ಸಭೆ ಮಾಡುವ ಬದಲು ವಿಧಾನಸೌಧದಲ್ಲಿ ಅಧಿಕಾರಿಗಳ ಜತೆ ಚರ್ಚಿಸುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಶಾಸಕ ಸುರೇಶ್‌ಕುಮಾರ್ ಮಾತನಾಡಿ, ಮರುಮೌಲ್ಯಮಾಪನದಿಂದ ಬರುವ ಅಂಕಗಳನ್ನು ದ್ವಿತೀಯ ಪ್ರಯತ್ನ ಎಂದು ಪರಿಗಣಿಸಲಾಗುತ್ತದೆ ಎಂಬ ಆತಂಕವಿದ್ಯಾರ್ಥಿಗಳಲ್ಲಿದೆ. ಅಧಿಕರಿಗಳು ನಮಗೆ ಸ್ಪಷ್ಟನೆ ನೀಡಿದ್ದಾರೆ. ಮರುಮೌಲ್ಯಮಾಪನದಲ್ಲಿ ಬರುವ ಅಂಕಗಳನ್ನು ಈಗಾಗಲೇ ಪ್ರಕಟಿತ ಫಲಿತಾಂಶದ ಜತೆ ವಿಲೀನ ಮಾಡಿ ಮೊದಲ ಪ್ರಯತ್ನವೆಂದೇ ಪರಿಗಣಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಯಾರೂ ಗೊಂದಲಕ್ಕೊಳಗಾಗುವುದು ಬೇಡ ಎಂದು ವಿಶ್ವಾಸ ತುಂಬಿದರು.

* ಎಲ್ಲವೂ ಸರಿಯಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ವಿರೋಧ
ಬೆಂಗಳೂರು, ಮೇ 22- ಪಿಯುಸಿ ಉತ್ತರ ಪತ್ರಿಕೆ ಮೌಲ್ಯಮಾಪನದಲ್ಲಿ ಎಲ್ಲವೂ ಸರಿಯಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಗೆ ವಿದ್ಯಾರ್ಥಿಗಳಾದ ಸಿಂಚನಾ ಮತ್ತು ವೈಷ್ಣವಿ ವಿರೋಧ ವ್ಯಕ್ತಪಡಿಸಿದ್ದಾರೆ. ಕುಮಾರಸ್ವಾಮಿ ಅವರು ಮಾತನಾಡಿ ಹೋದ ನಂತರ ಸುದ್ದಿಗಾರರ ಜತೆ  ಮಾತನಾಡಿದ ಈ ಇಬ್ಬರು ವಿದ್ಯಾರ್ಥಿಗಳು, ಮಂಡಳಿಯ ಕಚೇರಿ ಒಳಗೆ ಕುಮಾರಸ್ವಾಮಿ ಅವರು ಉತ್ತರ ಪತ್ರಿಕೆ ಪರಿಶೀಲನೆ ಮಾಡಿದ ವೇಳೆ ನಾವಿಬ್ಬರೂ ಹಾಜರಿದ್ದೆವು. ಗಣಿತದಲ್ಲಿ ತಪ್ಪು ಪ್ರಶ್ನೆಗಳಿಗೆ ಉತ್ತರ ಬರೆಯಲು ಪ್ರಯತ್ನಿಸಿದ ವಿದ್ಯಾರ್ಥಿಗಳಿಗೆ 9 ಹೆಚ್ಚುವರಿ ಅಂಕಗಳನ್ನು ನೀಡಬೇಕು ಎಂಬ ಸರ್ಕಾರದ ಆದೇಶವನ್ನು ಸರಿಯಾಗಿ ಪಾಲಿಸಿಲ್ಲ. ಕೆಲವು ವಿದ್ಯಾರ್ಥಿಗಳಿಗೆ ಹೆಚ್ಚುವರಿ ಅಂಕ ನೀಡಲಾಗಿದೆ. ಇನ್ನು ಕೆಲವರಿಗೆ ಕೊಟ್ಟಿಲ್ಲ ಎಂದರು. ಆರಂಭದಲ್ಲಿ ಅಧಿಕಾರಿಗಳು ಹೇಳುತ್ತಿದ್ದ ಉತ್ತರವೇ ಈಗಲೂ ಮುಂದುವರೆದಿದೆ ಎಂದು ಸಿಂಚನಾ ಕಿಡಿಕಾರಿದರು. ವೈಷ್ಣವಿ ಮಾತನಾಡಿ, ನಾನು ಬರೆದ ಗಣಿತದ ಉತ್ತರ ಸಂಪೂರ್ಣ ಸರಿಯಿದೆ.  ಪಠ್ಯಪುಸ್ತಕವನ್ನು ತೆಗೆದು ನೋಡಿದರೂ ಉತ್ತರ ತಾಳೆಯಾಗುತ್ತದೆ. ಆದರೆ, 5 ಅಂಕ ನೀಡುವ ಬದಲು ಸೊನ್ನೆ ನೀಡಲಾಗಿದೆ. ಪ್ರಶ್ನೆ ಮಾಡಿದರೆ  ಉತ್ತರ ಪತ್ರಿಕೆಯ ನಕಲು ಪಡೆದು ಅಧ್ಯಾಪಕರಿಂದ ಮೌಲ್ಯಮಾಪನ ಮಾಡಿಸಿ ಆಮೇಲೆ ಬಂದು ಮಾತನಾಡಿ ಎಂದು ಹೇಳುತ್ತಿದ್ದಾರೆ. ಮಂಡಳಿಗೆ ಗೊಂದಲಗಳನ್ನು ನಿವಾರಣೆ ಮಾಡುವ ಮನಸ್ಸಿಲ್ಲ ಎಂದು ಹತಾಶೆಯಿಂದ ನುಡಿದರು.

Write A Comment