ಬೆಂಗಳೂರು, ಮೇ 22- ಸದಾ ಕುಡಿದು ಬಂದು ಜಗಳ ಮಾಡುತ್ತಿದ್ದ ಪತಿಯನ್ನು ಪತ್ನಿಯೇ ತಲೆಗೆ ಕಲ್ಲಿನಿಂದ ಹೊಡೆದು ಸಾಯಿಸಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಆಂಧ್ರ ಪ್ರದೇಶದವನಾದ ವಿಜಯ್ ಅಲಿಯಾಸ್ ವಿಜಯ್‌ಕುಮಾರ್ (45) ಕೊಲೆಯಾಗಿರುವ ವ್ಯಕ್ತಿ. ವಿವರ: ಗಾರೆ ಕೆಲಸ ಮಾಡುತ್ತಿದ್ದ ವಿಜಯ್‌ಕುಮಾರ್ ಲಗ್ಗೆರೆ ಸರ್ವೀಸ್ ರಸ್ತೆ, ಸಾಯಿಬಾಬಾ ದೇವಸ್ಥಾನದ ಹಿಂಭಾಗದಲ್ಲಿ ಪತ್ನಿ ಮಲ್ಲೇಶ್ವರಿ ಮತ್ತು ಮೂರು ಮಕ್ಕಳೊಂದಿಗೆ ವಾಸವಿದ್ದ. ಈತ ಪ್ರತಿದಿನ ಕುಡಿದು ಬಂದು ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದ. ನಿನ್ನೆ ಸಂಜೆ ಸಹ ಜಗಳವಾಡಿ ರಂಪ ಮಾಡಿದ್ದ. ಅಕ್ಕಪಕ್ಕದವರು ಬಂದು ಜಗಳ ಬಿಡಿಸಿ ಈತನನ್ನು ಹೊರಗೆ ಕಳುಹಿಸಿದ್ದರು.
ಆದರೆ, ರಾತ್ರಿ ಮನೆಗೆ ಬಂದ ವಿಜಯ್, ಮತ್ತೆ ಜಗಳ ತೆಗೆದಿದ್ದಾನೆ. ಮುಂಜಾನೆ 3 ಗಂಟೆವರೆಗೂ ಜಗಳ ನಡೆದಿದೆ. ರೋಸಿಹೋದ ಪತ್ನಿ ಕಲ್ಲಿನಿಂದ ಪತಿಯ ತಲೆಗೆ ಹೊಡೆದು ಸಾಯಿಸಿ ನಂತರ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಮಕ್ಕಳನ್ನು ಕರೆದುಕೊಂಡು ಪರಾರಿಯಾಗಿದ್ದಾಳೆ. ಬೆಳಗ್ಗೆ ಯಾರೂ ಓಡಾಡದಿರುವುದನ್ನು ಕಂಡು ಅನುಮಾನಗೊಂಡು ಅಕ್ಕಪಕ್ಕದವರು ಮನೆಯೊಳಗೆ ಹೋಗಿ ನೋಡಿದಾಗ ವಿಜಯ್ ರಕ್ತದ ಮಡುವಿನಲ್ಲಿ ಬಿದ್ದಿರುವುದು, ಅರೆಬರೆ ಸುಟ್ಟಿರುವುದು ಕಂಡು ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ.
ವಿಜಯ್ ಪತ್ನಿ ಮಕ್ಕಳೊಂದಿಗೆ ನಾಪತ್ತೆಯಾಗಿರುವುದನ್ನು ಕಂಡು ಈಕೆಯೇ ಕೊಲೆ ಮಾಡಿರಬಹುದೆಂದು ರಾಜಗೋಪಾಲನಗರ ಠಾಣೆ ಪೊಲೀಸರು ಶಂಕಿಸಿದ್ದು, ಆಕೆಯ ಬಂಧನಕ್ಕೆ ಬಲೆ ಬೀಸಿದ್ದಾರೆ. ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿರಿಸಲಾಗಿದ್ದು, ರಾಜಗೋಪಾಲನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.