ಲಾಟರಿ ಅಕ್ರಮದ ಪ್ರಮುಖ ಆರೋಪಿಯೊಂದಿಗೆ ಸ್ನೇಹ ಹೊಂದಿದ್ದ ಆರೋಪದಲ್ಲಿ ಅಮಾನತು ಶಿಕ್ಷೆಗೆ ಒಳಗಾಗಿದ್ದ ಪಶ್ಚಿಮ ವಿಭಾಗದ ಐಜಿಪಿ ಮತ್ತು ಅಪರ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರನ್ನು ಆಂತರಿಕ ಭದ್ರತಾ ವಿಭಾಗದ ಐಜಿಪಿಯಾಗಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಲಾಟರಿ ಹಗರಣದಲ್ಲಿ ಪಾಲು ಪಡೆದಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದ ಅಲೋಕ್ ಕುಮಾರ್ ಅವರನ್ನು ಅಮಾನತ್ತುಗೊಳಿಸಿದ್ದ ಸರ್ಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿತ್ತು. ಅಲ್ಲದೇ ಹಲವು ಬಾರಿ ಅಲೋಕ್ ಕುಮಾರ್ ಅವರನ್ನು ವಿಚಾರಣೆ ನಡೆಸಿದ್ದ ಸಿಐಡಿ ತಂಡ ಹಲವು ಮಾಹಿತಿಗಳನ್ನು ಪಡೆಯಲು ಯಶಸ್ವಿಯಾಗಿತ್ತು .
ಈ ನಡುವೆ ರಾಜ್ಯ ಸರ್ಕಾರ ಶುಕ್ರವಾರ 12 ಮಂದಿ ಐಎಎಸ್ ಹಾಗೂ 4 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು ಲಾಟರಿ ಅಕ್ರಮದ ಆರೋಪಿಯ ರಕ್ಷಣೆಗೆ ನೆರವಾಗಿದ್ದರೆಂಬ ಆರೋಪದಲ್ಲಿ ಸೇವೆಯಿಂದ ಅಮಾನತುಗೊಂಡಿರುವ ಐಜಿಪಿ ಅಲೋಕ್ ಕುಮಾರ್ ಸ್ಥಾನಕ್ಕೆ ಅಪರಾಧ ತನಿಖಾ ಇಲಾಖೆಯ ಐಜಿಪಿಯಾಗಿದ್ದ ಸಿ.ಎಚ್. ಪ್ರತಾಪ್ ರೆಡ್ಡಿ ಅವರನ್ನು ನೇಮಿಸಿ ಆದೇಶ ಹೊರಡಿಸಿದೆ.