ಕರ್ನಾಟಕ

ಬಿಬಿಎಂಪಿ ಮಹಾಸಮರ : ಕಳಂಕಿತರಿಗಿಲ್ಲ ಬಿಜೆಪಿ ಟಿಕೆಟ್

Pinterest LinkedIn Tumblr

BBMP-Election-15ಬೆಂಗಳೂರು, ಜೂ.26-ಪ್ರತಿಷ್ಠೆಯ ಕಣವಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯಲ್ಲಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಕಳಂಕಿತರಿಗೆ ಟಿಕೆಟ್ ನೀಡದಿರಲು ಬಿಜೆಪಿ ತೀರ್ಮಾನಿಸಿದೆ. ಜುಲೈ 28 ರಂದು ನಡೆಯಲಿರುವ ಬಿಬಿಎಂಪಿ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ

ಆಯ್ಕೆ ಸಂಬಂಧ ಮಾನದಂಡವನ್ನು ರಚಿಸಿದೆ.  ಇದರ ಜೊತೆಗೆ ಹಿರಿಯ ಸದಸ್ಯರನ್ನೊಳಗೊಂಡ ಸಮನ್ವಯ ಸಮಿತಿ ಟಿಕೆಟ್ ಹಂಚಿಕೆ ಮಾಡಲಿದೆ. ಈ ಬಾರಿಯ ಚುನಾವಣೆಯಲ್ಲಿ ಎಎಪಿ ಸ್ಪರ್ಧಿಸುತ್ತಿರುವುದು ಬಿಜೆಪಿಯನ್ನು ನಿದ್ದೆಗೆಡುವಂತೆ ಮಾಡಿದೆ. ಪ್ರತಿಯೊಬ್ಬ ಅಭ್ಯರ್ಥಿಯ ಹಿನ್ನೆಲೆ, ಜಾತಕವನ್ನು ಜನ್ಮ ಜಾಲಾಡುತ್ತಿರುವುದರಿಂದ ಕಳಂಕಿತರಿಗೆ ಕೋಕ್ ನೀಡುವಂತೆ ಸಂಘ ಪರಿವಾರದ ನಾಯಕರು ಸೂಚಿಸಿದ್ದಾರೆ.

ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸುತ್ತಿದ್ದಂತೆ ಬಿಜೆಪಿ ಬಿಬಿಎಂಪಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಪಾಲಿಕೆಯಲ್ಲಿ 2ನೇ ಬಾರಿಗೆ ಸ್ವಂತ ಬಲದ ಮೇಲೆ ಅಧಿಕಾರ ಗದ್ದುಗೆ ಹಿಡಿಯುವುದು ಕಮಲ ಪಡೆಯ ಗುರಿ. ಹೀಗಾಗಿ ಈ ಬಾರಿ ಹಣಬಲ, ತೋಳ್ಬಲ, ಗಾಡ್‌ಫಾದರ್‌ಗಳ ಬೆಂಬಲ ಇತ್ಯಾದಿಗಳು  ಟಿಕೆಟ್ ಹಂಚಿಕೆಗೆ ಅನ್ವಯವಾಗುವುದಿಲ್ಲ.  ಸಮನ್ವಯ ಸಮಿತಿ ರಚನೆ: 198 ವಾರ್ಡ್‌ಗಳಿಗೆ ಟಿಕೆಟ್ ಹಂಚಿಕೆ ಸಂಬಂಧ  ಬಿಜೆಪಿ ಸಮನ್ವಯ ಸಮಿತಿಯನ್ನು ರಚಿಸಿದೆ. ಇದರಲ್ಲಿ ಕೇಂದ್ರ ಸಚಿವರಾದ ಅನಂತ್‌ಕುಮಾರ್, ಡಿ.ವಿ.ಸದಾನಂದಗೌಡ, ಸಂಸದ ಪಿ.ಸಿ.ಮೋಹನ್, ಮುಖಂಡರಾದ ಆರ್.ಅಶೋಕ್, ಅರವಿಂದ ಲಿಂಬಾವಳಿ, ಮುನಿರಾಜು, ಸುಬ್ಬಣ್ಣ ಸದಸ್ಯರಾಗಿದ್ದಾರೆ. ಈ ಸಮಿತಿಯು ಎಲ್ಲಾ ವಾರ್ಡ್‌ಗಳಿಗೆ ಟಿಕೆಟ್ ನೀಡಲು ಸ್ಥಳೀಯ ಮುಖಂಡರ ಅಭಿಪ್ರಾಯಪಡೆದು ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ.

ಭ್ರಷ್ಟರಿಗೆ ಕೋಕ್:
ಈ ಹಿಂದೆ 2010ರ ಬಿಬಿಎಂಪಿ ಚುನಾವಣೆಯಲ್ಲಿ ಗೆದ್ದು  ಹಗರಣಗಳನ್ನು ಸೃಷ್ಟಿಸಿದ್ದ ಭ್ರಷ್ಟರಿಗೆ ಮತ್ತೇ ಮಣೆ ಹಾಕದಿರಲು ಪಕ್ಷ ತೀರ್ಮಾನಿಸಿದೆ.  ಇದರಿಂದ ಟಿಕೆಟ್ ನಿರೀಕ್ಷೆಯಲ್ಲಿ ರಿಯಲ್ ಎಸ್ಟೇಟ್ ಕುಳಗಳು, ಮಾಫಿಯಾಗಳು, ಕ್ರಿಮಿನಲ್ ಹಿನ್ನೆಲೆ ಉಳ್ಳವರು, ಭ್ರಷ್ಟರಿಗೆ ಭಾರೀ ನಿರಾಸೆಯಾಗಿದೆ.  ಮಾಜಿ ಸದಸ್ಯರು ಎಷ್ಟೇ ಪ್ರಭಾವಿಗಳಾಗಿದ್ದರೂ ಭ್ರಷ್ಟಾಚಾರ ಆರೋಪ  ಇಲ್ಲವೆ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದರೆ ಟಿಕೆಟ್ ಕೊಡಬಾರದೆಂದು ರಾಷ್ಟ್ರೀಯ ನಾಯಕರು ಸೂಚನೆ ಕೊಟ್ಟಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಸಂಘ ಪರಿವಾರದ ಸೂಚನೆಯಂತೆ ಟಿಕೆಟ್ ನೀಡಿ ಚುನಾವಣೆಯಲ್ಲಿ ಗೆದ್ದಿದ್ದ   ಅನೇಕ ಕಾರ್ಪೋರೇಟರ್‌ಗಳ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ವಾರ್ಡ್ ಮಟ್ಟದ ಕಾಮಗಾರಿ, ಕಸವಿಲೇವಾರಿ, ಭೂ ಒತ್ತುವರಿ, ನಕಲಿ ಬಿಲ್ ಸೃಷ್ಟಿ ಸೇರಿದಂತೆ ಹಲವಾರು ಆರೋಪಗಳು ಕೇಳಿಬಂದಿದ್ದರಿಂದ ಪಕ್ಷವೂ ಸಹ ಮುಜುಗರಕ್ಕೀಡಾಗಿತ್ತು.

ಎಎಪಿ ಮೊದಲ ಬಾರಿಗೆ ಸ್ಪರ್ಧಿಸುತ್ತಿರುವುದರಿಂದ ಭ್ರಷ್ಟರು, ಕ್ರಿಮಿನಲ್ ಹಿನ್ನೆಲೆ ಉಳ್ಳವರು ಗೆದ್ದು ಬಂದರೆ ಪಕ್ಷಕ್ಕೆ ಮತ್ತೆ ಮುಖಭಂಗ ಉಂಟಾಗಬಹುದೆಂಬ ಭೀತಿ ಬಿಜೆಪಿಯನ್ನು ಕಾಡುತ್ತಿದೆ. ಹೀಗಾಗಿ ಕಳಂಕಿತರನ್ನು ಸಂಪೂರ್ಣವಾಗಿ ಪಕ್ಷದಿಂದಲೇ ದೂರವಿಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. ಉತ್ತಮ ಹಿನ್ನೆಲೆ, ಸಮಾಜಮುಖಿ ಕೆಲಸ ಮಾಡಿ ಪಕ್ಷಕ್ಕೆ ಹೆಸರು ತರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಈಗಾಗಲೇ ಬಿಜೆಪಿ ಶೋಧ ಕಾರ್ಯ ಪ್ರಾರಂಭಿಸಿದೆ.

Write A Comment