ಬೆಂಗಳೂರು, ಜು.5 – ಹೈಕಮಾಂಡ್ ಸೂಚನೆ ಮೇರೆಗೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮಶತಮಾನೋತ್ಸವ ಅಂಗವಾಗಿ ಕಾಂಗ್ರೆಸ್ ಪಕ್ಷ ಆಯೋಜಿಸಲು ಉದ್ದೇಶಿಸಿರುವ ಬೃಹತ್ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ.
ಎಐಸಿಸಿ ಸೂಚನೆ ಮೇರೆಗೆ ಆಗಮಿಸಿರುವ ರಾಜ್ಯಸಭೆಯ ಪ್ರತಿ ಪಕ್ಷದ ನಾಯಕ ಗುಲಾಂನಭಿ ಆಜಾದ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಕಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿ ಅಂಬೇಡ್ಕರ್ ಜನ್ಮಶತಮಾನೋತ್ಸವ ಆಚರಣೆ ಕುರಿತು ಚರ್ಚೆ ನಡೆಸಿದರು. ಬಿಜೆಪಿಗೆ ಸಡ್ಡು ಹೊಡೆಯುವ ಸಲುವಾಗಿ ಕಾಂಗ್ರೆಸ್ ಅಂಬೇಡ್ಕರ್ ಅವರ ಆಶಯಗಳ ಕುರಿತು ವರ್ಷಪೂರ್ತಿ ಅವರ 125ನೇ ಜನ್ಮ ಶತಮಾನೋತ್ಸವವನ್ನು ಆಚರಿಸಲು ತೀರ್ಮಾನಿಸಿದೆ.
ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ನೇತೃತ್ವದಲ್ಲಿ ಇದಕ್ಕಾಗಿ ಪ್ರತ್ಯೇಕ ಸಮಿತಿ ರಚನೆ ಮಾಡಿದ್ದು ರಾಹುಲ್‌ಗಾಂಧಿ ಅವರನ್ನೂ ಸಹ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಗುಲಾಮ್‌ನಭಿ ಆಜಾದ್ ದಕ್ಷಿಣ ಭಾರತದ ಸಂಚಾಲಕರಾಗಿದ್ದು, 6 ರಾಜ್ಯಗಳಲ್ಲಿ ಪ್ರವಾಸ ಕೈಗೊಂಡು ಕಾರ್ಯಕ್ರಮಗಳ ಆಯೋಜನೆ ಕುರಿತು ಪರಿಶೀಲನಾ ಸಭೆ ನಡೆಸಲಿದ್ದಾರೆ. ಕರ್ನಾಟಕದ ಜಿಲ್ಲಾ ಮಟ್ಟಗಳಲ್ಲಿ ಅಂಬೇಡ್ಕರ್ ಅವರ ಆಶಯಗಳ ಕುರಿತ ವಿಚಾರ ಸಂಕಿರಣ, 4 ಕಂದಾಯ ವಿಭಾಗಗಳಲ್ಲಿ ಬೃಹತ್ ಸಮಾವೇಶಗಳನ್ನು ನಡೆಸಲು ನಿರ್ಧರಿಸಿ ಪಕ್ಷದಿಂದ ದೂರವಾಗುತ್ತಿರುವ ದಲಿತ, ಹಿಂದುಳಿದ ವರ್ಗಗಳ ಮತದಾರರನ್ನು ಸೆಳೆಯುವ ಪ್ರಯತ್ನ ನಡೆದಿದೆ. ಬಿಜೆಪಿಯ ಬಲಪಂಥಿಯ ಸಿದ್ಧಾಂತಕ್ಕೆ ಅಂಬೇಡ್ಕರ್ ಚಿಂತನೆಗಳಲ್ಲಿ ತಕ್ಕ ಉತ್ತರಗಳಿದ್ದು ಅಹಂದಾ ವರ್ಗವನ್ನು ಜಾಗೃತಗೊಳಿಸಲು ಸಾಧ್ಯವಿದೆ. ಮೋದಿಯವರ ಅಬ್ಬರದ ಪ್ರಚಾರಕ್ಕೆ ಅಂಬೇಡ್ಕರ್ ಅವರ ತತ್ವಸಿದ್ಧಾಂತಗಳ ಮೂಲಕ ತಿರುಗೇಟು ನೀಡಿ, ಕೇಂದ್ರ ಸರ್ಕಾರ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದೆ ಎಂಬುದನ್ನು ಪ್ರಚಾರಮಾಡುವ ತಂತ್ರಗಾರಿಕೆ ಕಾಂಗ್ರೆಸ್ಸಿನದಾಗಿದೆ.
ಈ ಹಿನ್ನೆಲೆಯಲ್ಲಿ ವರ್ಷಪೂರ್ತಿ ಮಹಾತ್ಮಾಗಾಂಧೀಜಿ, ಅಂಬೇಡ್ಕರ್ ಹಾಗೂ ಜವಾಹರಲಾಲ್ ನೆಹರೂ ಅವರ ತತ್ವಸಿದ್ಧಾಂತ ಸಾರುವ ಹಾಗೂ ಜಾತ್ಯಾತೀತ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯಕ್ರಮವನ್ನು ಆಯೋಜಿಸುವ ತಯಾರಿ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಕಾರ್ಯಕ್ರಮ ಆಯೋಜನೆಗೆ ಸಹಮತ ವ್ಯಕ್ತಪಡಿಸಿದ್ದು, ದಿನಾಂಕ ಹಾಗೂ ಸ್ಥಳ ನಿಗದಿ ಮಾಡಿ ಮಾಹಿತಿ ನೀಡುವ ಭರವಸೆ ನೀಡಿದ್ದಾರೆ. ಕಾರ್ಯಕ್ರಮಕ್ಕೆ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಆಗಮಿಸುವ ನಿರೀಕ್ಷೆ ಇರುವುದರಿಂದ ಕರ್ನಾಟಕದಲ್ಲಿ ಪಕ್ಷವನ್ನು ಕಟ್ಟಲು ಇನ್ನಷ್ಟು ಶ್ರಮ ಹಾಕುವ ಭರವಸೆಯನ್ನು ಇಂದಿನ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ನೀಡಿದ್ದಾರೆ. ನಿನ್ನೆ ಸಂಜೆ ಬೆಂಗಳೂರಿಗೆ ಆಗಮಿಸಿದ ಗುಲಾಮ್‌ನಭಿ ಆಜಾದ್ ಇಂದು ಬೆಳಗ್ಗೆ ಮುಖ್ಯಮಂತ್ರಿ ಹಾಗೂ ಪರಮೇಶ್ವರ್ ಅವರೊಂದಿಗೆ ಸ್ಥಳೀಯ ರಾಜಕೀಯ ವಿಷಯಗಳು ಹಾಗೂ ಅಂಬೇಡ್ಕರ್ ಶತಮಾನೋತ್ಸವ ಕಾರ್ಯಕ್ರಮ ಕುರಿತು ಮಹತ್ವದ ಮಾತುಕತೆ ನಡೆಸಿದರು.