ಧಾರವಾಡ/ಹುಬ್ಬಳ್ಳಿ, ಜು.5- ಲೋಕಾಯುಕ್ತ ಭಾಸ್ಕರ್ರಾವ್ ಪದಚ್ಯುತಿ ಅಸಾಧ್ಯ. ಅದಕ್ಕೆ ಸೆಕ್ಷನ್ 317ಕ್ಕೆ ತಿದ್ದುಪಡಿ ಆಗಬೇಕು. ನಾಳಿನ ಅಧಿವೇಶನದಲ್ಲಿ ಈ ಕುರಿತಂತೆ ಚರ್ಚೆ ನಡೆಸಲಾಗುವುದು ಎಂದು ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಭ್ರಷ್ಟಾಚಾರದ ಆರೋಪಕ್ಕೆ ಗುರಿಯಾಗಿರುವ ಲೋಕಾಯುಕ್ತರನ್ನು ಪದಚ್ಯುತಿಗೊಳಿಸಬೇಕಾದರೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಿ ವಿಧಾನಸಭೆಯಲ್ಲಿ 1/3ಭಾಗ ಬಹುಮತ ಲಭಿಸಿ ಅದಕ್ಕೆ ಸ್ಪೀಕರ್ ಒಪ್ಪಿಗೆ ಪಡೆಯಬೇಕಾಗುತ್ತದೆ ಎಂದರು. ಹೀಗಾಗಿ ನಾಳಿನ ಅಧಿವೇಶನದಲ್ಲಿ 317ರ ಕಾಯ್ದೆ ತಿದ್ದುಪಡಿ ಕುರಿತಂತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಅವಶ್ಯಕತೆ ಇದೆ ಎಂದರು.
ಭಾಸ್ಕರ್ರಾವ್ ಅವರನ್ನು ನೇಮಕ ಮಾಡುವ ಸಂದರ್ಭದಲ್ಲಿ ಅವರ ಹಿನ್ನೆಲೆಯನ್ನು ಸಮಗ್ರವಾಗಿ ಪರಿಶೀಲನೆ ಮಾಡುವ ಅವಶ್ಯಕತೆ ಇತ್ತು. ಅವರ ವಿರುದ್ಧ ಗುರುತರ ಆರೋಪಗಳಿದ್ದರೂ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಅವರನ್ನೇ ನೇಮಕ ಮಾಡಲು ತೀರ್ಮಾನಿಸಿದ್ದು ವಿಪರ್ಯಾಸ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಈ ವಿಷಯದ ಅರಿವಿತ್ತು. ಆದರೂ ಭಾಸ್ಕರ್ರಾವ್ ಅವರೇ ನೇಮಕವಾದರು. ಆದರೆ, ಇದೀಗ ಸಿದ್ದರಾಮಯ್ಯ ಅವರು ಲೋಕಾಯುಕ್ತ ಕಳಂಕದ ವಿರುದ್ಧ ಪಾರದರ್ಶಕವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು. ಭಾಸ್ಕರ್ರಾವ್ ಪುತ್ರ ಅಶ್ವಿನ್ರಾವ್ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲಾಗಿರುವುದರಿಂದ ಲೋಕಾಯುಕ್ತರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು.
ಲೋಕಾಯುಕ್ತ ಕಳಂಕ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಬರುವುದಿಲ್ಲ. ಉಭಯ ಸದನಗಳ 100ಕ್ಕೂ ಹೆಚ್ಚು ಸದಸ್ಯರು ಸಹಿ ಸಂಗ್ರಹಿಸಿ ಸ್ಪೀಕರ್ ಅವರಿಗೆ ಸಲ್ಲಿಸಿದರೂ ಲೋಕಾಯುಕ್ತರನ್ನು ಪದಚ್ಯುತ ಮಾಡಲು ಸಾಧ್ಯವಿಲ್ಲ ಎಂದು ರಾಯರೆಡ್ಡಿ ಹೇಳಿದರು. ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗಿರುವ ಭಾಸ್ಕರ್ರಾವ್ ಅವರ ನೇಮಕಕ್ಕೆ ಕಾರಣಕರ್ತರಾದ ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು ಸ್ಪಷ್ಟನೆ ನೀಡಬೇಕೆಂದು ರಾಯರೆಡ್ಡಿ ಒತ್ತಾಯಿಸಿದರು.