ಬೆಂಗಳೂರು, ಜು.5- ಸರ್ಕಾರಿ ಅಧಿಕಾರಿಗಳು ದೂರುಗಳೊಂದಿಗೆ ಬರುವ ಸಾರ್ವಜನಿಕರ ಜತೆ ಆತ್ಮೀಯವಾಗಿ ಮಾತನಾಡಿ, ಸ್ನೇಹದಿಂದ ವರ್ತಿಸಿದರೆ ಅವರ ಕಷ್ಟಗಳು ಅರ್ಧ ಪರಿಹಾರವಾಗುತ್ತದೆ. ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಸೇವಾವಧಿಯಲ್ಲಿ ಒಳ್ಳೆಯ ಹೆಜ್ಜೆಯ ಗುರುತುಗಳನ್ನು
ಉಳಿಸಿಕೊಳ್ಳಬೇಕೆಂದು ಕೆಇಆರ್‌ಸಿ ನೂತನ ಅಧ್ಯಕ್ಷ ಶಂಕರಲಿಂಗೇಗೌಡ ಸಲಹೆ ನೀಡಿದರು. ನಗರದ ಗಾಂಧಿಭವನದಲ್ಲಿಂದು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಅಧಿಕಾರಿಗಳು ಯಾರಿಗೂ ಹೆಚ್ಚು ಆದ್ಯತೆ ನೀಡಬಾರದು. ಅನಗತ್ಯವಾಗಿ ವ್ಯಕ್ತಿಗಳನ್ನು ಗಂಟೆಗಟ್ಟಲೆ ಕಚೇರಿಯಲ್ಲಿ ಕೂರಿಸಿಕೊಂಡು ಮಾತನಾಡಿಸುವುದರಿಂದ ಕೆಳಹಂತದ ಸಿಬ್ಬಂದಿಗಳಿಂದಲೇ ತಪ್ಪು ಸಂದೇಶ ರವಾನೆಯಾಗುತ್ತದೆ. ಈ ವಿಷಯದಲ್ಲಿ ಎಚ್ಚರಿಕೆಯಿಂದಿರುವುದು ಅಧಿಕಾರಿಗಳ ಯಶಸ್ಸಿನ ಮೊದಲ ಗುಟ್ಟು ಎಂದು ಹೇಳಿದರು.
ತಾವು ಐಎಎಸ್ ಅಧಿಕಾರಿಯಾಗಿದ್ದಾಗ ಮಾಡಿದ ಬಹಳಷ್ಟು ಕೆಲಸಗಳನ್ನು ಸ್ಮರಿಸಿಕೊಳ್ಳುತ್ತಾ, ಜನಸಾಮಾನ್ಯರ ವಿಷಯದಲ್ಲಿ ಹೆಚ್ಚು ಮೃದು ಮತ್ತು ಆತ್ಮೀಯತೆಯಿಂದ ವರ್ತಿಸಬೇಕು. ಅನಗತ್ಯವಾಗಿ ರಾಜಕಾರಣಿಗಳಿಗೆ ಆಪ್ತರಾಗುವ ಪ್ರಯತ್ನ ಮಾಡಬಾರದು. ಧಾರವಾಡದಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ಅಲ್ಲಿ ಸಚಿವರಾಗಿದ್ದ ಕೆ.ಎಚ್.ಪಾಟೀಲ್ ಅವರ ಬಗ್ಗೆ ಅಧಿಕಾರಿಗಳಲ್ಲಿ ಅಪಾರ ಭಯವಿತ್ತು. ಪಾಟೀಲರನ್ನು ಹುಲಿ ಎಂದು ಬಿಂಬಿಸಲಾಗಿತ್ತು. ನಾನು 2-3 ತಿಂಗಳು ನನ್ನದೇ ಶೈಲಿಯಲ್ಲಿ ಕೆಲಸ ಮಾಡಿದೆ. ಅದನ್ನು ಕಂಡು ನನ್ನನ್ನು ಪ್ರವಾಸಿಮಂದಿರಕ್ಕೆ ಕರೆಸಿಕೊಂಡ ಪಾಟೀಲರು, ಯಾರಿಗೂ ಹೆದರುವ ಅಗತ್ಯವಿಲ್ಲ. ನಿಮ್ಮ ಕೆಲಸವನ್ನು ಮುಂದುವರೆಸಿ ಎಂದು ಸಲಹೆ ನೀಡಿದ್ದರು. ಅನಂತರ ರಾಜಕಾರಣಿಗಳ ಬಗ್ಗೆ ನನಗಿದ್ದ ಸಣ್ಣಪುಟ್ಟ ಆತಂಕಗಳು ನಿವಾರಣೆಯಾದವು. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಯಾರಿಗೂ ಹೆದುರುವ ಅಗತ್ಯವಿಲ್ಲ ಎಂಬುದು ಸ್ಪಷ್ಟವಾಯಿತು ಎಂದು ತಿಳಿಸಿದರು. ಗಾಂಧಿಭವನದ ಅಭಿವೃದ್ಧಿ ಕೆಲಸ ಕೈಗೊಂಡ ಸಂದರ್ಭಗಳನ್ನು ಇದೇ ವೇಳೆ ಅವರು ಸ್ಮರಿಸಿದರು.
ಗಾಂಧಿಭವನ ನಗರದ ಕೇಂದ್ರ ಭಾಗದಲ್ಲಿದ್ದರೂ, ಇದು ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಇಂತಹ ಸಂದರ್ಭದಲ್ಲಿ ಗಾಂಧೀಜಿ ಅವರ ಆದರ್ಶಗಳು, ಹೋರಾಟಗಳನ್ನು ಯುವ ಜನರಿಗೆ ಮನದಟ್ಟು ಮಾಡಿಕೊಡುವ ಸಲುವಾಗಿ ಗಾಂಧಿಭವನದ ಅಭಿವೃದ್ಧಿಗೆ ಕ್ರಿಯಾಯೋಜನೆಗಳನ್ನು ರೂಪಿಸಲಾಯಿತು. ಇಂದು ಗಾಂಧಿಭವನ ಹೆಚ್ಚು ಜನಪ್ರಿಯವಾಗಿದೆ ಎಂದರು. ಐಎಎಸ್ ಸೇವೆಗೆ ಕರ್ನಾಟಕದ 32 ಇಲಾಖೆಗಳ ಪೈಕಿ ಬೇರೆ ಬೇರೆ ಇಲಾಖೆಗಳಿಂದಲೂ ಅಧಿಕಾರಿಗಳು ಆಯ್ಕೆಯಾಗಿದ್ದಾರೆ. ವಾರ್ತಾ ಇಲಾಖೆಯಿಂದ ಮೊಟ್ಟ ಮೊದಲ ಬಾರಿಗೆ ಡಾ.ಮಮತಾ ಆಯ್ಕೆಯಾಗಿದ್ದು, ಅದರಲ್ಲೂ ತುಮಕೂರು ಜಿಲ್ಲೆಗೆ ಸಿಇಒ ಆಗಿ ನೇಮಕವಾಗಿರುವುದು ಹೆಮ್ಮೆಯ ವಿಷಯ.
ಅಭಿವೃದ್ಧಿ ಇಲಾಖೆಗಳಲ್ಲಿ ಕೆಲಸ ಮಾಡುವ ಮೂಲಕ ಆಡಳಿತಾತ್ಮಕ ಅನುಭವಗಳನ್ನು ಹೆಚ್ಚು ಗಳಿಸಲು ಸಾಧ್ಯ. ತುಮಕೂರು ಜಿಲ್ಲೆ ಸ್ನೇಹಮಯ ವಾತಾವರಣ ಹೊಂದಿದೆ. ಉತ್ತಮ ಅನುಭವಗಳನ್ನು ಕಟ್ಟಿಕೊಡಲಿದೆ. ಒಳ್ಳೆಯ ಕೆಲಸಗಳನ್ನು ಮಾಡಲು ಹೆಚ್ಚು ಅನುಕೂಲಕರವಾದ ವಾತಾವರಣ ಹೊಂದಿದೆ ಎಂದು ಅಭಿಪ್ರಾಯಪ್ಟರು. ವಾರ್ತಾ ಇಲಾಖೆಯಿಂದ ಐಎಎಸ್ ಸೇವೆಗೆ ನೇಮಕವಾದ ಮಮತಾ ಅವರು ಅಭಿನಂದನೆ ಸ್ವೀಕರಿಸಿ ಮಾತನಾಡಿ, ನನ್ನ ಜೀವನದಲ್ಲಿ ಎಲ್ಲವೂ ಅನಿರೀಕ್ಷಿತ ಅವಕಾಶಗಳು. ವೈದ್ಯಳಾಗಬೇಕು ಎಂದು ಬಯಸಿದ್ದ ನಾನು, ಪತ್ರಕರ್ತೆಯಾದೆ. ಅನಂತರ ವಿಪ್ರೋ ಸಂಸ್ಥೆಯಲ್ಲಿ ಕೆಲಸ ಮಾಡಿದೆ. ವಾರ್ತಾ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವಾಗ ಐಎಎಸ್ ಆಯ್ಕೆ ಪ್ರಕ್ರಿಯೆಯ ಸಂದರ್ಶನದಲ್ಲಿ ಭಾಗವಹಿಸಿ ಈಗ ಭಾರತೀಯ ಆಡಳಿತ ಸೇವೆಗೆ ಸೇರಿದ್ದೇನೆ. ನಾನು ಕೆಲಸ ಮಾಡಿದ ಎಲ್ಲಾ ಹುದ್ದೆಗಳನ್ನು ಪ್ರೀತಿಸಿದ್ದೇನೆ. ಗೌರವಪೂರ್ವಕವಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ.ಅದರ ಆತ್ಮತೃಪ್ತಿ ನನಗಿದೆ. ಹಿರಿಯರ ಮಾರ್ಗದರ್ಶನದಲ್ಲಿ ಮುಂದೆ ಇನ್ನಷ್ಟು ಉತ್ತಮಕೆಲಸ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರದ ಅಧ್ಯಕ್ಷತೆ ವಹಿಸಿದ್ದ ಗಾಂಧಿಭವನದ ಅಧ್ಯಕ್ಷ ಹೋ.ಶ್ರೀನಿವಾಸಯ್ಯ ಮಾತನಾಡಿ,ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಗಾಂಧಿಭವನಕ್ಕೆ ಭೇಟಿ ನೀಡಿದ್ದರು. ಒಂದು ಕಡೆ ಮಾಳಿಗೆ ಸೋರುತ್ತಿತ್ತು. ಅದಕ್ಕೆ ಕುಮಾರಸ್ವಾಮಿ ಅವರು ಕಾರಣ ಕೇಳಿದರು. ರಾಧಾಕೃಷ್ಣ ಅವರ ಕಾಲದಲ್ಲಿ ಕಟ್ಟಡ ಉದ್ಘಾಟನೆಯಾಗಿದೆ. ನಿಮ್ಮ ಕಾಲದಲ್ಲಿ ಬಿದ್ದು ಹೋಗಬಹುದು ಎಂದೇ. ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ಬಿಡಿಎ, ಬಿಬಿಎಂಪಿ, ವಾರ್ತಾ ಇಲಾಖೆ ಮುಖ್ಯಸ್ಥರನ್ನು ಕರೆದು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದರು. ನಿರೀಕ್ಷೆಗೂ ಮೀರಿ ಹಣಸಹಾಯ ಮಾಡಿದರು. ಈಗ ಸುಸಜ್ಜಿತ ಅತಿಥಿಗೃಹ,ಸಭಾಂಗಣ, ವಸ್ತು ಸಂಗ್ರಹಾಲಯಗಳು ನಿರ್ಮಾಣವಾಗಿವೆ. ಇದಕ್ಕೆ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ, ಸದಾನಂದಗೌಡ ಮತ್ತಿತರರ ಕೊಡುಗೆ ಇದೆ. ಗಾಂಧಿ ಭವನದ ಅಭಿವೃದ್ಧಿಗೆ ವಾರ್ತಾ ಇಲಾಖೆ ಅಧಿಕಾರಿಗಳಾದ ದಿನೇಶ್, ಮಮತಾ ಅವರುಗಳು ಪ್ರೇರಣೆಯಾಗಿದ್ದು, ಹಿರಿಯ ಐಎಎಸ್ ಅಧಿಕಾರಿಯಾಗಿದ್ದ ಶಂಕರಲಿಂಗೇಗೌಡರು ಗಾಂಧಿಭವನದ ಕೆಲಸ ಸಾರ್ವಜನಿಕರ ಕೆಲಸ ಎಂದು ಆದ್ಯತೆ ಮೇರೆಗೆ ಕಡತಗಳಿಗೆ ಸಹಿ ಹಾಕಿಕೊಟ್ಟರು ಎಂದು ವಿವರಿಸಿದರು. ಐಎಎಸ್ ಅಧಿಕಾರಿ ಕೃಷ್ಣಯ್ಯ, ಗಾಂಧಿಭವನದ ಶಿವರಾಜ್, ಟಿ.ತಿಪ್ಪಣ್ಣಗೌಡ, ವಾರ್ತಾ ಇಲಾಖೆಯ ದಿನೇಶ್ ಮತ್ತಿತರರು ಕಾರ್ಯಕ್ರಮದಲ್ಲಿ ಮಾತನಾಡಿ, ಇದೊಂದು ಕುಟುಂಬದ ಆತ್ಮೀಯ ಸಮಾರಂಭ. ಗಾಂಧಿಭವನದ ಅಭಿವೃದ್ಧಿಗೆ ಶ್ರಮಿಸಿದ ಶಂಕರಲಿಂಗೇಗೌಡ ಮತ್ತು ಮಮತಾ ಅವರ ಪದನ್ನೋತಿ ನಮಗೆ ಹೆಮ್ಮೆಯ ವಿಷಯ ಎಂದು ಶ್ಲಾಘಸಿಸಿದರು.