ಚೇಳೂರು, ಜು.14: ಎರಡು ವರ್ಷ ಪ್ರೀತಿಸಿ ಹುಡುಗಿಗೆ ಕೈ ಕೊಟ್ಟು ಪರಾರಿಯಾಗಿದ್ದ ಹುಡುಗನನ್ನು ಪತ್ತೆ ಹಚ್ಚಿದ ಚೇಳೂರು ಪಿಎಸ್ಐ ಎಫ್.ಕೆ.ನದಾಪ್ರವರು, ಗುಬ್ಬಿ ಸಿಪಿಐ ವೆಂಕರಮಣ್ಣಪ್ಪ ಮಾರ್ಗದರ್ಶನದಲ್ಲಿ ಪ್ರೀತಿ ವಂಚಿತ ಹುಡುಗಿಯೊಂದಿಗೆ ವಿವಾಹ ಮಾಡಿಸಿದ್ದಾರೆ.
ಘಟನೆ ವಿವರ: ಚೇಳೂರು ಠಾಣೆ ವ್ಯಾಪ್ತಿಯ ಅದಲಗೆರೆ ಗ್ರಾಮ ವಾಸಿಗಳಾದ ಮಣಿಕಂಠ ಮತ್ತು ಗಾಯಿತ್ರಿ ಎಂಬುವರು ಸುಮಾರು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಅಲ್ಲಿ ಇಲ್ಲಿ ಸುತ್ತಾಡುತ್ತಿದ್ದ ಇವರಿಬ್ಬರ ಪ್ರೀತಿ ವಿವಾಹದವರೆಗೂ ಮುಂದುವರೆಯಿತು.
ಮದುವೆಯಾಗುತ್ತೇನೆಂದು ನಂಬಿಸಿದ್ದ ಹುಡುಗ ಕೊನೆಕೊನೆಗೆ ನಮ್ಮ ಮನೆಯವರು ಮದುವೆಗೆ ಒಪ್ಪುತ್ತಿಲ್ಲ, ನಾನು ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲವೆಂದು ಗಾಯಿತ್ರಿಗೆ ಶಾಕ್ ನೀಡಿ ನಾಪತ್ತೆಯಾಗಿದ್ದ. ಕಂಗಾಲಾದ ಹುಡುಗಿ ಗಾಯಿತ್ರಿ ಎರಡೂ ಕುಟುಂಬಗಳಿಗೆ ವಿಷಯ ತಿಳಿಸಿದರೂ ಪ್ರಯೋಜನವಾಗಲಿಲ್ಲ. ಏನಾದರೂ ಮಾಡಿ ಪ್ರೀತಿಸಿದವನ ಮನವೊಲಿಸೋಣವೆಂದರೆ ಹುಡುಗ ನಾಪತ್ತೆಯಾಗಿದ್ದ. ದಾರಿ ಕಾಣದ ಗಾಯಿತ್ರಿ, ನನ್ನ ಜೀವನ ಹಾಳು ಮಾಡಿ ಮದುವೆಯಾಗುವುದಾಗಿ ನಂಬಿಸಿ ಕೈ ಕೊಟ್ಟು ಪರಾರಿಯಾಗಿರುವ ಹುಡುಗನನ್ನು ಪತ್ತೆ ಹಚ್ಚಿ ಆತನ ಮನವೊಲಿಸಿ ವಿವಾಹ ಮಾಡಿಸುವ ಮೂಲಕ ನ್ಯಾಯ ಒದಗಿಸಿಕೊಡುವಂತೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು.
ಕಾರ್ಯಪ್ರವೃತ್ತರಾದ ಚೇಳೂರು ಠಾಣಾ ಪಿಎಸ್ಐ ಎಫ್.ಕೆ. ನದಾಫ್, ಸಿಬ್ಬಂದಿಗಳಾದ ವೆಂಕಟೇಶ್ ಮತ್ತು ಹುಚ್ಚಪ್ಪ ದೇವರು ಅವರಿಗೆ ಹುಡುಗನ ಪತ್ತೆಹಚ್ಚಲು ನೇಮಿಸಿ ಮಾರ್ಗದರ್ಶನ ನೀಡಿದರು. ಕೇವಲ ಎರಡೇ ದಿನಗಳಲ್ಲಿ ಪ್ರೇಮಿ ಮಣಿಕಂಠನನ್ನು ಬಂಧಿಸಿ ಠಾಣೆಗೆ ಕರೆತಂದರು. ಠಾಣಾ ಅಧಿಕಾರಿಗಳು ಎರಡೂ ಕಡೆಯವರನ್ನು ಕರೆಸಿ ಬುದ್ಧಿ ಹೇಳಿ ಹುಡುಗಿಗೆ ಅನ್ಯಾಯವಾಗುವುದನ್ನು ತಪ್ಪಿಸಿದರು. ಕೊನೆಗೆ ಎರಡೂ ಕಡೆಯ ಕುಟುಂಬಸ್ಥರೂ ಸೇರಿ ಶನೇಶ್ವರ ದೇವಾಲಯದಲ್ಲಿ ಶಾಸ್ತ್ರೋಕ್ತವಾಗಿ ಸರಳ ವಿವಾಹ ಮಾಡಿಸಿ ಸಿಹಿ ಹಂಚಿದರು. ಕೊನೆಗೂ ಪ್ರೀತಿಸಿದ ಹೃದಯಗಳು ಪೊಲೀಸ್ ಸಾರಥ್ಯದಲ್ಲಿ ಒಂದಾದವು.