ಕರ್ನಾಟಕ

ನಗರ ಪೊಲೀಸ್ ಆಯುಕ್ತರ ನೇಮಕ : ರೆಡ್ಡಿ-ಮಹಾಪಾತ್ರ ಕೆಸರೆರಚಾಟ; ರೆಡ್ಡಿ ವಿರುದ್ಧವೇ ಭ್ರಷ್ಟಾಚಾರದ ಆರೋಪ

Pinterest LinkedIn Tumblr

M.N.REDDY

ಬೆಂಗಳೂರು, ಜು.14: ನಗರ ಪೊಲೀಸ್ ಆಯುಕ್ತರ ನೇಮಕ ಸಂದರ್ಭದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಒಬ್ಬರ ಮೇಲೆ ಮತ್ತೊಬ್ಬರು ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುವುದು ಸಹಜ ಪ್ರಕ್ರಿಯೆಯಾಗಿದೆ. ಬಾರಿಯೂ ಅಂತಹ ವರ್ತನೆ ಮರುಕಳಿಸಿದ್ದು, ಎಂ.ಎನ್.ರೆಡ್ಡಿ ಬಡ್ತಿ ನಂತರ ತೆರವಾಗುವ ಆಯುಕ್ತರ ಹುದ್ದೆ ಮೇಲೆ ಕಣ್ಣಿಟ್ಟಿರುವ ಕರ್ನಾಟಕ ಪೊಲೀಸ್ ವಸತಿ ಮಹಾನಿಗಮದ ಎಡಿಜಿಪಿ ಸುಶಾಂತ್ ಮಹಾಪಾತ್ರ ಹಾಲಿ ಆಯುಕ್ತರ ವಿರುದ್ಧವೇ ಭ್ರಷ್ಟಾಚಾರದ ಆರೋಪ ಹೊರಿಸಿದ್ದಾರೆ.

ಆಯುಕ್ತ ಎಂ.ಎನ್.ರೆಡ್ಡಿ ವಸತಿ ನಿಗಮದ ಎಡಿಜಿಪಿಯಾಗಿದ್ದ ಸಂದರ್ಭದಲ್ಲಿ ಹೊಸ ಠಾಣೆ ಹಾಗೂ ವಸತಿ ಸಮುಚ್ಛಯ ನಿರ್ಮಾಣದ ಸಂದರ್ಭದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ. ರೆಡ್ಡಿಯವರ ಅವ್ಯವಹಾರ ಕುರಿತಂತೆ ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಹಾಗೂ ಹಣಕಾಸು ಇಲಾಖೆಯ ಗಮನಕ್ಕೆ ತಂದಿದ್ದೇನೆ. ಆದರೆ, ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ನಾನು ರೆಡ್ಡಿ ಅವ್ಯವಹಾರ ಕುರಿತಂತೆ ಉಪ ಲೋಕಾಯುಕ್ತ ಸುಭಾಷ್ ಬಿ.ಆಡಿ ಅವರಿಗೆ ದೂರು ಸಲ್ಲಿಸಿದ್ದೇನೆ ಎಂದು ಸುಶಾಂತ್ ಮಹಾಪಾತ್ರ ತಿಳಿಸಿದ್ದಾರೆ.

ಮಹಾಪಾತ್ರ ಅವರ ಈ ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಆಯುಕ್ತ ಎಂ.ಎನ್.ರೆಡ್ಡಿ ನನ್ನ ಕಾಲಾವಧಿಯಲ್ಲಿ ವಸತಿ ನಿಗಮದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮಹಾಪಾತ್ರ ವಿನಾಕಾರಣ ನನ್ನ ಮೇಲೆ ಏಕೆ ಆರೋಪ ಮಾಡುತ್ತಿದ್ದಾರೆ ಎಂದು ತಿಳಿದಿಲ್ಲ. ಆದರೆ, ಅವರು ಯಾವ ಆಧಾರದ ಮೇಲೆ ದೂರು ನೀಡಿದ್ದಾರೆ ಎಂಬುದನ್ನು ಪರಿಶೀಲಿಸಿ ನಂತರ ಮಾತನಾಡುತ್ತೇನೆ ಎಂದಿದ್ದಾರೆ. ಎಂ.ಎನ್.ರೆಡ್ಡಿಯವರಿಂದ ತೆರವಾಗುವ ಆಯುಕ್ತರ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿರುವ ಸುಶಾಂತ್ ಮಹಾಪಾತ್ರ ಹಾಲಿ ಆಯುಕ್ತರ ವಿರುದ್ಧವೇ ಅವ್ಯವಹಾರದ ಆರೋಪ ಹೊರಿಸಿರುವುದು ಪೊಲೀಸ್ ಇಲಾಖೆಯನ್ನು ಬೆಚ್ಚಿ ಬೀಳಿಸಿದೆ.

Write A Comment