ಧಾರವಾಡ, ಜು.14- ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಆಂತರಿಕ ಕಚ್ಚಾಟದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ತಲುಪಿದೆ ಎಂದು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ಪ್ರಲ್ಹಾದ ಜೋಶಿ ಹೇಳಿದರು. ಧಾರವಾಡ ಜಿ.ಪಂ. ಸಭಾ ಭವನದಲ್ಲಿ ನಡೆದ ಕೇಂದ್ರ ಪುರಸ್ಕೃತ ಗ್ರಾಮಾಭಿವೃದ್ಧಿ ಕಾರ್ಯಕ್ರಮಗಳ
ಜನಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಈಗಾಗಲೇ ಬಂಡಾಯದ ಬಿರುಗಾಳಿ ಎದ್ದಿದೆ. ಅವರವರೇ ಹೊಡದಾಡಿ ಒಂದು ಗುಂಪು ಹೊರಬರಲಿದೆ. ತನ್ನಿಂದ ತಾನೇ ಬಿದ್ದು ಹೋಗುವ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಸೂಚಿಸಿ, ಕೆಟ್ಟ ಹೆಸರು ತಂದುಕೊಳ್ಳಲು ಬಿಜೆಪಿ ಮುಂದಾಗುವುದಿಲ್ಲ ಎಂದರು.
ಸರಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೈಗೊಳ್ಳುವ ಪ್ರತಿಯೊಂದು ಸಂಗತಿಗಳಿಗೂ ಬಿಜೆಪಿ ಬೆಂಬಲವಿದೆ. ಅವಿಶ್ವಾಸ ಮಂಡಿಸುವಷ್ಟು ಸಂಖ್ಯಾಬಲ ಎರಡೂ ಪಕ್ಷಗಳು ಹೊಂದಿಲ್ಲ. ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಹೋರಾಟಕ್ಕೆ ಹಲವಾರ ಮಾರ್ಗಗಳಿವೆ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ನಿರಂತರ ಎಂದರು. ಸಾಲಬಾಧೆ ತಾಳಲಾರದೆ ರಾಜ್ಯಾದ್ಯಂತ ಆತ್ಮಹತ್ಯೆಗೆ ಶರಣಾದ ರೈತರ ಮನೆಗಳಿಗೆ ಬಿಜೆಪಿ ತಂಡಗಳು ಜುಲೈ 30 ರೊಳಗೆ ಭೇಟಿ ನೀಡಲಿವೆ. ಸೂಕ್ತ ಮಾಹಿತಿ ಕಲೆ ಹಾಕುವ ಮೂಲಕ ರೈತರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣಗಳೇನು, ಪರಿಹಾರಗಳೇನು ಎಂಬುದರ ಕುರಿತು ಮಾಹಿತಿ ಸಂಗ್ರಹಸಲಿದೆ. ರೈತರು, ಬಡವರು ವಿರೋಧಿ ಯಾಗಿದ್ದು, ಅದರ ತಪ್ಪುಗಳನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು. ಸಿದ್ಧರಾಮಯ್ಯ ಅಹಿಂದ ವಿರೋಧಿ : ಹಿಂದುಳಿದ ಜಾತಿ, ಜನಾಂಗದ ಅಭಿವೃದ್ಧಿಗಾಗಿ ಕೇಂದ್ರ ಬಿಡುಗಡೆ ಮಾಡಿದ್ದ ಅನುದಾನ ಸದ್ಬಳಕೆಯಾಗಿಲ್ಲ. ಖರ್ಚು ಮಾಡದೇ ಉಳಿದ ಹಣ ಕೇಂದ್ರ ಸರಕಾರದ ಖಜಾನೆ ಸೇರುವಂತಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಕೊಲೆಯಾದ ವ್ಯಕ್ತಿ ದಲಿತನಾಗಿದ್ದಾನೆ. ಈ ಕೊಲೆ ಮಾಡದ ಆರೋಪಿಯನ್ನು ಬಂಧಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ದೂರಿದರು.