ಕರ್ನಾಟಕ

ಆಟೊ ಬಾಡಿಗೆ ವಿಚಾರ; ಚಾಲಕನ್ನನ್ನು ಚೂರಿಯಿಂದ ಇರಿದು ಹತ್ಯೆ

Pinterest LinkedIn Tumblr

knife

ಬೆಂಗಳೂರು: ಪೀಣ್ಯ ಎರಡನೇ ಹಂತದ ಬಸ್‌ ನಿಲ್ದಾಣದಲ್ಲಿ ಸೋಮವಾರ ರಾತ್ರಿ ಆಟೊ ಚಾಲಕ ಮಣಿ (28) ಎಂಬುವರನ್ನು ಅವರ ಸ್ನೇಹಿತರು ಚಾಕುವಿ ನಿಂದ ಇರಿದು ಕೊಲೆ ಮಾಡಿದ್ದಾರೆ.

ಲಗ್ಗೆರೆ ನಿವಾಸಿಯಾದ ಮಣಿ, ರಾತ್ರಿ 9.30ರ ಸುಮಾರಿಗೆ ಪೀಣ್ಯ ಎರಡನೇ ಹಂತದ ಬಸ್‌ ನಿಲ್ದಾಣದಲ್ಲಿ ಆಟೊ ನಿಲ್ಲಿಸಿಕೊಂಡಿದ್ದರು. ಈ ವೇಳೆ ಸಹಚರರ ಜತೆ ಆಟೊದಲ್ಲಿ ಬಂದ ವಿನೋದ್ ಹಾಗೂ ಅಪ್ಪು, ‘ನಾವು ಮೊದಲು ಬಾಡಿಗೆ ಹೋಗಬೇಕು. ನಂತರ ನೀನು ಹೋಗು’ ಎಂದು ಜಗಳ ತೆಗೆದಿದ್ದಾರೆ. ಇದಕ್ಕೆ ಒಪ್ಪದ ಮಣಿ, ‘ಅರ್ಧ ಗಂಟೆಯಿಂದ ಬಾಡಿಗೆಗೆ ಕಾಯುತ್ತಿದ್ದೇನೆ. ನನ್ನ ನಂತರ ನೀವು ಪ್ರಯಾಣಿಕರನ್ನು ಕರೆದುಕೊಂಡು ಹೋಗಿ’ ಎಂದಿದ್ದಾರೆ.

ಈ ವಿಚಾರವಾಗಿ ಆರೋಪಿಗಳು ಮತ್ತು ಮಣಿ ನಡುವೆ ಮಾತಿಗೆ ಮಾತು ಬೆಳೆದಿದೆ. ಆಗ ಚಾಕುವಿನಿಂದ ಹೊಟ್ಟೆಗೆ ಇರಿದು ಪರಾರಿಯಾಗಿದ್ದಾರೆ. ಗಾಯಾಳುವನ್ನು ಇತರೆ ಆಟೊ ಚಾಲಕರು ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮಣಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದರು. ‘ವಿನೋದ್ ಮತ್ತು ಅಪ್ಪು ತಾವರೆಕೆರೆ ನಿವಾಸಿಗಳು. ಅವರು ಸಹ ಆಟೊ ಚಾಲಕರು. ವಾರದ ಹಿಂದೆ ಕೂಡ ಅದೇ ಸ್ಥಳದಲ್ಲಿ ಬಾಡಿಗೆ ವಿಚಾರವಾಗಿ ಮಣಿ ಜತೆ ಜಗಳವಾಡಿಕೊಂಡಿದ್ದರು. ಆ ದ್ವೇಷದಿಂದ ಕೊಲ್ಲುವ ಉದ್ದೇಶ ಇಟ್ಟುಕೊಂಡೇ ರಾತ್ರಿ ಮಣಿ ಜತೆ ಜಗಳ ತೆಗೆದಿದ್ದಾರೆ’ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment