ರಾಯಚೂರು, ಜು.16-ಬಿಸಿಲೂರು ರಾಯಚೂರಿನಲ್ಲಿ ಬೀದಿ ಕಾಮಣ್ಣನ ಹಾವಳಿ ಜಾಸ್ತಿಯಾಗಿದೆ. ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿನಿಯರಿಗೆ ಕೆಲ ಪುಂಡ ಹುಡುಗರ ಕಾಟ ಹೆಚ್ಚಾಗಿದೆ. ಇದರಿಂದ ಬೇಸತ್ತ ವಿದ್ಯಾರ್ಥಿನಿಯರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ.
ಜಿಲ್ಲೆಯ ಕೇಂದ್ರ ಪ್ರದೇಶದಲ್ಲಿ ಹಾಡಹಗಲೇ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡುತ್ತಿದ್ದು ಆತಂಕದ ಮಧ್ಯೆ ಕಾಲೇಜಿಗೆ ತೆರಳುತ್ತಿದ್ದಾರೆ. ರಾಯಚೂರು ನಗರಕ್ಕೆ ನಿತ್ಯ ವಿದ್ಯೆ ಕಲಿಯಲು ನಗರದಲ್ಲಿನ ವಿವಿಧ ಸರ್ಕಾರಿ ಹಾಗೂ ಖಾಸಗಿ ಕಾಲೇಜಿಗೆ ವಿದ್ಯಾರ್ಥಿನಿಯರು ತೆರಳುತ್ತಿದ್ದು, ಕೆಲ ಪ್ರದೇಶದಲ್ಲಿ ಬೀದಿ ಕಾಮಣ್ಣರ ಹಾವಳಿ ಹೆಚ್ಚಾಗಿರುವುದರಿಂದ ವಿದ್ಯಾರ್ಥಿನಿಯರು ರೋಸಿ ಹೋಗಿದ್ದಾರೆ. ನಗರದ ವಿದ್ಯಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹಲವು ದಿನಗಳಿಂದ ಕೆಲ ಪುಂಡ ಹುಡುಗರ ಹಾವಳಿ ಹೇಳತೀರದಾಗಿದ್ದು, ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ಇಲ್ಲದಂತಾಗಿದೆ. ಮೊಬೈಲ್ ನಂಬರ್ ನೀಡುವಂತೆ ಪೀಡಿಸುವುದು, ಹುಡುಗಿಯರ ಹಿಂದೆ ಓಡಾಡುವುದನ್ನು ಪುಂಡರು ಮಾಡುತ್ತಿದ್ದರೆ, ಹಲವು ದಿನಗಳಿಂದ ಈ ಬಗ್ಗೆ ದೂರು ನೀಡಿದ್ದರೂ ಯಾರೂ ಕ್ಯಾರೆ ಎನ್ನುತ್ತಿಲ್ಲ.
ಇದರಿಂದ ರೊಚ್ಚಿಗೆದ್ದ ಸಾವಿರಾರು ವಿದ್ಯಾರ್ಥಿನಿಯರು ನಗರದ ಮಾಣಿಕ್ಯ ಪ್ರಭು ದೇವಾಲಯದಿಂದ ಸದರಬಜಾರ್ ಪೊಲೀಸ್ ಠಾಣೆಗೆ ಬೃಹತ್ ರ್ಯಾ ಲಿ ನಡೆಸಿ ಎಸ್ಪಿಗೆ ಮನವಿ ಸಲ್ಲಿಸಿ ರಕ್ಷಣೆಗೆ ಕೋರಿದ್ದಾರೆ. ಹೆಣ್ಣೊಂದು ವಿದ್ಯೆ ಕಲಿತರೆ, ಶಾಲೆಯೊಂದು ತೆರೆದಂತೆ ಎಂದು ಹೇಳಲಾಗುತ್ತದೆ. ಆದರೆ ರಾಯಚೂರು ಜಿಲ್ಲೆ ಕೇಂದ್ರ ಪ್ರದೇಶದಲ್ಲಿ ಹಾಡುಹಗಲೇ ಬೀದಿ ಕಾಮಣ್ಣರು ವಿದ್ಯಾರ್ಥಿನಿಯರು ಹಾಗೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ಪ್ರಶ್ನಿಸುವಂತಾಗಿದೆ. ಗ್ರಾಮೀಣ ಭಾಗದಲ್ಲಿ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡುತ್ತದೆಯೇ ಎಂದು ಕಾದುನೋಡಬೇಕಾಗಿದೆ.