ಕೋಲಾರ, ಜು.30: ಮುಂದೆ ಚಲಿಸುತ್ತಿದ್ದ ವಾಹನಕ್ಕೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸೇರಿ ಮೂವರು ಸಾವನ್ನಪ್ಪಿ ಮಗು ಹಾಗೂ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಂಭವಿಸಿದೆ.
ಮೂಲತಃ ತಿರುಪತಿಯವರಾದ ಕಾರು ಚಾಲಕ ಬಾಬು (30), ಚಲಪತಿ(40) ಮತ್ತು ಗೀತಾಂಜಲಿ(40) ಎಂಬುವರು ಮೃತಪಟ್ಟಿದ್ದಾರೆ. ರಾಜೇಶ್ವರಿ(35) ಹಾಗೂ ಒಂದೂವರೆ ವರ್ಷದ ಅನುಷಾ ಎಂಬ ಮಗು ಗಂಭೀರವಾಗಿ ಗಾಯಗೊಂಡಿದ್ದು, ಇಲ್ಲಿನ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಇವರೆಲ್ಲರು ಇಂದು ನಸುಕಿನ ವೇಳೆ ವಾಪಸ್ ತಿರುಪತಿಗೆ ತೆರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಜಾನೆ 5.30ರ ಸುಮಾರಿನಲ್ಲಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ಕೊಲ್‌ಮನ್ ಕಾರ್ಖಾನೆ ಬಳಿ ಮುಂದೆ ಚಲಿಸುತ್ತಿದ್ದ ವಾಹನಕ್ಕೆ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಚಲಪತಿ ಮತ್ತು ಗೀತಾಂಜಲಿ ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಚಾಲಕ ಬಾಬು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರಿನಲ್ಲಿದ್ದ ರಾಜೇಶ್ವರಿ ಹಾಗೂ ಮಗು ಅನುಷಾ ಅವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ವೇಮಗಲ್ ಠಾಣೆ ಇನ್ಸ್‌ಪೆಕ್ಟರ್ ಯಶವಂತ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ಕಾರ್ಯ ಕೈಗೊಂಡರು. ವೇಮಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.