ಅಂತರಾಷ್ಟ್ರೀಯ

ಲಿಬಿಯಾದಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ ನಾಲ್ವರು ಭಾರತೀಯರ ಅಪಹರಿಸಿದ ಇಸಿಸ್‌

Pinterest LinkedIn Tumblr

islamic state

ಟ್ರಿಪೋಲಿ: ರಾಯಚೂರು ಹಾಗೂ ಬೆಂಗಳೂರು ಮೂಲದ ಇಬ್ಬರು ಕನ್ನಡಿಗರು ಸೇರಿದಂತೆ ನಾಲ್ವರು ಭಾರತೀಯರನ್ನು ಲಿಬಿಯಾದ ಸಿರ್ತೆ ನಗರದಲ್ಲಿ ಅಪಹರಿಸಲಾಗಿದ್ದು, ಐಸಿಸ್‌ ಉಗ್ರರ ಕೃತ್ಯವಿದು ಎನ್ನಲಾಗಿದೆ.

ಗುರುವಾರ ಸಂಜೆ ಅಪಹರಣ ನಡೆದಿರುವುದನ್ನು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್‌ ಸ್ವರೂಪ್‌ ಖಚಿತಪಡಿಸಿದ್ದಾರೆ. ಅಪಹೃತರ ಪೈಕಿ ಮೂವರು ಸಿರ್ತೆ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿದ್ದಾರೆ. ಒಬ್ಬರು ವಿವಿಯ ಸಿಬ್ಬಂದಿಯಾಗಿ ದುಡಿಯುತ್ತಿದ್ದಾರೆ. ನಾಲ್ವರಲ್ಲಿ ಇಬ್ಬರು ಹೈದರಾಬಾದ್‌ ಹಾಗೂ ಇನ್ನಿಬ್ಬರು ಕರ್ನಾಟಕ ಮೂಲದವರು ಎಂದು ವಿಕಾಸ್‌ ಸ್ವರೂಪ್‌ ಹೇಳಿದ್ದಾರೆ.

ಕನ್ನಡಿಗರಲ್ಲಿ ಒಬ್ಬರನ್ನು ಲಕ್ಷ್ಮಿಕಾಂತ್‌ ಎಂದು ಗುರುತಿಸಲಾಗಿದೆ. ಅಪಹರಣಕ್ಕೊಳಗಾದವರ ಕುಟುಂಬದವರ ಜತೆ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಘಟನೆ ಸಂಬಂಧ ಚರ್ಚೆ ನಡೆಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಶುಕ್ರವಾರ ಭೇಟಿಯಾಗಿದ್ಧಾರೆ.

2014ರ ಜೂನ್‌ನಲ್ಲಿ ಇರಾಕ್‌ನ ಮೊಸುಲ್‌ನಲ್ಲಿ 39 ಭಾರತೀಯರನ್ನು ಅಪಹರಿಸಲಾಗಿತ್ತು, ಅವರನ್ನೆಲ್ಲ ಐಸಿಸ್‌ ಉಗ್ರರೇ ಅಪಹರಿಸಿದ್ದರು. ಬಹುತೇಕರು ಪಂಜಾಬ್‌ನ ಕಾರ್ಮಿಕರಾಗಿದ್ದಾರು. ಅವರೆಲ್ಲರ ಕತೆ ಏನಾಯಿತು ಎಂದು ಈವರೆಗೂ ಪತ್ತೆಯಾಗಿಲ್ಲ. ಬದುಕಿದ್ಧಾರೆ ಎಂಬ ಮಾಹಿತಿಯಷ್ಟೇ ಸರಕಾರದ ಜತೆಗಿದೆ.

ಈ ಹಿನ್ನೆಲೆಯಲ್ಲಿ ಲಿಬಿಯಾದಲ್ಲಿರುವ ಭಾರತೀಯರು ಕೂಡಲೇ ವಾಪಸ್‌ ಆಗುವಂತೆ ಕೇಂದ್ರ ಸರಕಾರ ಅಲ್ಲಿರುವ ಭಾರತೀಯರಿಗೆ ಎಚ್ಚರಿಕೆ ನೀಡಿತ್ತು.

ತಾಲಿಬಾನ್‌ ಜತೆಗೂಡಿ ಭಾರತದಲ್ಲಿ ಉಗ್ರ ಕೃತ್ಯಗಳನ್ನು ನಡೆಸಿ ಭಯೋತ್ಪಾದನೆ ನಡೆಸಲು ಐಸಿಸ್‌ ಸಂಚು ರೂಪಿಸುತ್ತಿದೆ ಎಂಬ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸರಕಾರಕ್ಕೆ ಆತಂಕ ತಂದಿದೆ. ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ತಾಲಿಬಾನ್‌ ಸಂಘಟನೆಗಳ ಜತೆ ಸೇರಿ ಭಾರತವನ್ನು ಬಗ್ಗು ಬಡಿಯಲು ಐಸಿಸ್‌ ನಡೆಸುತ್ತಿರುವ ಯತ್ನದ ಸುಳುವನ್ನು ಅಮೆರಿಕದ ಪತ್ರಿಕೆಯೊಂದು ಬಹಿರಂಗಪಡಿಸಿದೆ.

Write A Comment