ಮಧುಗಿರಿ, ಜು.31- ಮಧುಗಿರಿಯ ಐತಿಹಾಸಿಕ ಬೆಟ್ಟವನ್ನು ಏರಿ ದಾರಿ ತಿಳಿಯದೆ ಸಿಲುಕಿಕೊಂಡ ಮಾನಸಿಕ ಅಸ್ವಸ್ತೆಯನ್ನು ಸುರಕ್ಷಿತವಾಗಿ ಕೆಳಗಿಳಿಸಿ ಪ್ರಸಂಗ ನಡೆದಿದೆ. ತಾಲೂಕಿನ ಆಚೇನಹಳ್ಳಿಯ ವೃದ್ಧೆ ಜಯಮ್ಮ (60) ಬುಧವಾರ ಬೆಳಿಗ್ಗೆ ಮನೆ ಬಿಟ್ಟಿದ್ದು, ಅದೇ ದಿನ ರಾತ್ರಿ ಬೆಟ್ಟ್ನ ಏರಿ ಬೆಟ್ಟದಲ್ಲಿರುವ ಕಪ್ಪೆ ಬಾವಿಯ ಕೆಳಭಾಗಕ್ಕೆ ಬಂದಾಗ ದಾರಿ ತಪ್ಪಿ ಕಲ್ಲು ಗುಂಡುಗಳ ನಡುವೆ ಸಿಲುಕಿಕೊಂಡು ರಾತ್ರಿಯಲ್ಲಾ ಬೆಟ್ಟದಲ್ಲೇ ಕಳೆದಿದ್ದರು.
ನಿನ್ನೆ ಬೆಳಗ್ಗೆ ಇದನ್ನು ಗಮನಿಸಿದ ಪಟ್ಟಣದ ಯುವಕರು ತಂಡೋಪ ತಂಡವಾಗಿ ಅಲ್ಲಿಗೆ ತೆರಳಿ ವೃದ್ದೆಯನ್ನು ರಕ್ಷಿಸಿ ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು.
ಈಕೆ ಮಾನಸಿಕ ಅಸ್ವಸ್ತೆಯಾಗಿದ್ದು, ಎರಡನೇ ಬಾರಿ ಮನೆ ತೊರೆದು ಬಂದಿದ್ದಾರೆ ಎಂದು ಜಯಮ್ಮನ ಪತಿ ಬಸವರಾಜು ತಿಳಿಸಿದ್ದಾರೆ. ಈ ಕಾರ್ಯಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಕಾಂತರಾಜು, ಯುವಕರಾದ ಪರಶುರಾಮ, ರಮೇಶ್, ಚಂದ್ರ, ಮಂಜುನಾಥ್, ರಘು, ರಂಗ ಸಹಕರಿಸಿದರು.
ಭದ್ರತೆಯಿಲ್ಲ : ಮಧುಗಿರಿ ಬೆಟ್ಟಕ್ಕೆ ಏರಿದವರು ದಾರಿ ತಪ್ಪುವ ಪ್ರಸಂಗಗಳು ಹಲವಾರು ಬಾರಿ ನಡೆಯುತ್ತಿದ್ದರೂ, ತಾಲೂಕು ಆಡಳಿತ ಎಚ್ಚೆತ್ತು ಕೊಂಡಿಲ್ಲ. ಕಳೆದ ವರ್ಷ ಇದೇ ರೀತಿ ಬೆಟ್ಟವನ್ನೇರಿದ ಐಟಿ ಉದ್ಯೋಗಿಯೊಬ್ಬರು ದಾರಿ ತಪ್ಪಿ ತೊಂದರೆಗೆ ಸಿಲುಕಿಕೊಂಡಿದ್ದರು. ಈ ಸಂದರ್ಭದಲ್ಲಿ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಬೆಟ್ಟಕ್ಕೆ ಏರುವವರ ಮಾಹಿತಿ ಪಡೆಯಲು ಒಬ್ಬ ಪೊಲೀಸ್ ಪೇದೆಯನ್ನು ಸ್ಥಳದಲ್ಲಿ ನಿಯೋಜಿಸುವುದಾಗಿ ಭರವಸೆ ನೀಡಿದ್ದರು ಆದರೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.