ಕರ್ನಾಟಕ

ನಿಮ್ಮ ಮಕ್ಕಳ ಮೇಷ್ಟ್ರು ಅಂದದ್ದಕ್ಕೆ ಬಿಟ್ರು: ಕನ್ನಡಿಗರ ಅನುಭವ ಕಥನ

Pinterest LinkedIn Tumblr

ISIS-abduct-newಬೆಂಗಳೂರು: ನಮ್ಮ ಮಕ್ಕಳಿಗೆ ಪಾಠ ಮಾಡಿದ್ದೀರಾ, ಅದಕ್ಕೆ ನಿಮ್ಮನ್ನು ಬಿಡುತ್ತಿದ್ದೇವೆ. ಭಾರತಕ್ಕೆ ಹೋಗಿ ಇಸ್ಲಾಂ ಧರ್ಮ ಅನುಸರಿಸಿ! ವಿಶ್ವದ ಅತ್ಯುಗ್ರ ಭಯೋತ್ಪಾದಕ ಸಂಘಟನೆ ಐಸಿಸ್‌ ಉಗ್ರರ ಕಪಿಮುಷ್ಟಿಗೆ ಸಿಲುಕಿ ಪ್ರಾಣ ಭೀತಿಯಿಂದ ನಲುಗಿ ಅಂತಿಮವಾಗಿ ಬಿಡುಗಡೆ ಭಾಗ್ಯ ಪಡೆದ ಇಬ್ಬರು ಕನ್ನಡಿಗರಿಗೆ ಪ್ರಾಣ ಭಿಕ್ಷೆ ನೀಡುವ ಮುನ್ನ ಉಗ್ರರ ಕಟ್ಟಾಜ್ಞೆಯಿದು.

ಐಸಿಸ್‌ ಉಗ್ರರಿಂದ ಬಿಡುಗಡೆಯಾದ ಕೆಲ ಗಂಟೆಗಳ ನಂತರ “ಉದಯವಾಣಿ’ ಜತೆ ದೂರವಾಣಿ ಮೂಲಕ ಮಾತನಾಡಿದ ಕನ್ನಡಿಗರಾದ ರಾಯಚೂರಿನ ಡಾ|ಲಕ್ಷ್ಮೀಕಾಂತ್‌ ಮತ್ತು ಕೋಲಾರ ಜಿಲ್ಲೆ ಬಂಗಾರ ಪೇಟೆಯ ಡಾ|ವಿಜಯ್‌ ಕುಮಾರ್‌ ಅವರ ಧ್ವನಿ ಉಗ್ರರ ಕಪಿಮುಷ್ಟಿಯಲ್ಲಿದ್ದ 24 ಗಂಟೆಗಳ ಅವಧಿಯನ್ನು ನೆನೆಯುವಾಗ ಕಂಪಿಸುತ್ತಿತ್ತು. ಉಗ್ರರು ಈ ಇಬ್ಬರನ್ನು ಬಿಡುಗಡೆ ಮಾಡುವ ಮುನ್ನ ಇಸ್ಲಾಂ ಸಂಪ್ರದಾಯದ ಬಗೆಗಿರುವ ಮಾಹಿತಿ ಹಾಗೂ ನಮಾಜ್‌ ಮಾಡುವುದು ಗೊತ್ತಿದೆಯೇ ಎಂಬುದನ್ನು ಪರೀಕ್ಷಿಸಿದ್ದಾರೆ. ಭಾರತಕ್ಕೆ ಹಿಂತಿರುಗಿದ ನಂತರ ಇಸ್ಲಾಂ ಅನುಸರಿಸಬೇಕೆಂದು ಭರವಸೆ ಪಡೆದಿದ್ದಾರೆ ಮತ್ತು ನಮ್ಮ ಮಕ್ಕಳಿಗೆ ಪಾಠ ಮಾಡಿದ್ದೀರಾ ಎಂಬ ಏಕೈಕ ಕಾರಣಕ್ಕೆ ನಿಮ್ಮನ್ನು ಬಿಡುತ್ತಿದ್ದೇವೆ ಎಂದು ಹೇಳಿ ಇಬ್ಬರು ಕನ್ನಡಿಗರನ್ನು ಬಿಡುಗಡೆ ಮಾಡಿದ್ದಾರೆ.

ಅಪಹರಣ ಘಟನೆಯನ್ನು ಲಕ್ಷ್ಮೀಕಾಂತ್‌ ಹಾಗೂ ವಿಜಯಕುಮಾರ್‌ ಭೀತಿಯಿಂದಲೇ ನೆನೆಯುತ್ತಾರೆ.

ಇಸ್ಲಾಂ ಕಲಿಯುತ್ತೇವೆ, ಬಿಡಿ…: ನಾವು ಲಿಬಿಯಾದಲ್ಲಿ ಇರುವಾಗ ಇಲ್ಲಿನ ಸಂಪ್ರದಾಯದಂತೆಯೇ (ಮುಸ್ಲಿಂ ಸಂಪ್ರದಾಯ) ನಡೆದುಕೊಂಡೆವು. ಇಲ್ಲಿ ಶಿಕ್ಷಕ ವೃತ್ತಿ ಮಾಡಲು ಬಂದಿದ್ದೇವೆ. ನಿಮ್ಮ (ಉಗ್ರರ) ಮಕ್ಕಳಿಗೆ ಪಾಠ ಮಾಡಿದ್ದೇವೆ. ನೀವು (ಉಗ್ರರು) ಕಲಿಸಿದರೆ ಇಸ್ಲಾಂ ಅನ್ನು ಕಲಿಯುತ್ತೇವೆ. ದಯಮಾಡಿ ಬಿಡುಗಡೆ ಮಾಡಿ. ನಮ್ಮನ್ನು ಕೊಲ್ಲಬೇಡಿ ಎಂದು ಬೇಡಿಕೊಂಡೆವು. ನಮ್ಮ ಬೇಡಿಕೆ ಬಗ್ಗೆ ದಿನವಿಡೀ ಚರ್ಚೆ ನಡೆಸಿದ ನಂತರ ನಮ್ಮನ್ನು ಬಿಡುಗಡೆ ಮಾಡಲು ಅವರು ನಿರ್ಧರಿಸಿದರು ಎಂದು ಲಕ್ಷ್ಮೀಕಾಂತ್‌ ಹಾಗೂ ವಿಜಯಕುಮಾರ್‌ ಹೇಳಿದರು.

ಬಿಡುಗಡೆ ಮಾಡಿದ ಕೂಡಲೇ ನಮಗೆ ನಮ್ಮ ಮೊಬೈಲ್‌ಗ‌ಳನ್ನು ನೀಡಿದರು. ಉಳಿದಿಬ್ಬರು ಸ್ನೇಹಿತರ ಕುರಿತು ವಿಚಾರಿಸಿದಾಗ ಅವರು ನಮ್ಮ ಆಡಳಿತ (ಇಸ್ಲಾಮಿಕ್‌ ಸ್ಟೇಟ್‌) ವ್ಯಾಪ್ತಿಯಲ್ಲಿ ಬರುವುದಿಲ್ಲ. ಹೀಗಾಗಿ ನಿಮ್ಮನ್ನು ಕಳುಹಿಸುತ್ತೇವೆ. ಆನಂತರ ಅವರ ಬಗ್ಗೆ ಯೋಚಿಸುತ್ತೇವೆ ಎಂದು ಉಗ್ರರು ಹೇಳಿದರು. ಕಡೆಗೆ ನಮ್ಮ ಸ್ನೇಹಿತರಿಗೆ ವಿದಾಯ ಹೇಳಿ ಹೊರಟು ಬಂದೆವು. ಗೆಳೆಯರು ಸುರಕ್ಷಿತವಾಗಿ ಬರಲಿ ಎಂದು ಪ್ರಾರ್ಥಿಸುತ್ತೇವೆ ಎಂದು ತಿಳಿಸಿದರು. ಬಂಧನದ ಅವಧಿಯಲ್ಲಿ ಅವರು ನಮಗೆ ಹಿಂಸೆ ಮಾಡಲಿಲ್ಲ. ಚೆನ್ನಾಗಿ ನೋಡಿಕೊಂಡರು. ಊಟ-ತಿಂಡಿ ಕೊಡುತ್ತಿದ್ದರು. ಹವಾನಿಯಂತ್ರಿತ ಕೊಠಡಿಯಲ್ಲಿ ವಾಸ್ತವ್ಯ ಕಲ್ಪಿಸಿದ್ದರು. ಆದಾಗ್ಯೂ ನಮಗೆ ಆತಂಕವಿದ್ದೇ ಇತ್ತು ಎಂದು ಆ ಭೀತಿಯ ಕ್ಷಣಗಳನ್ನು ಸ್ಮರಿಸಿಕೊಳ್ಳುತ್ತಾರೆ. ಉಗ್ರರಿಂದ ಬಿಡುಗಡೆಯಾದ ನಂತರ ಬೆಂಗಳೂರಿಗೆ ಹಿಂತಿರುಗಲು ಸಿರ್ಟೆ ನಗರದಿಂದ ಲಿಬಿಯಾದ ರಾಜಧಾನಿ ಟ್ರಿಪೋಲಿಗೆ ಕಾರಿನಲ್ಲಿ ಪ್ರಯಾಣ ಮಾಡುವಾಗ ತಮ್ಮನ್ನು ಸಂಪರ್ಕಿಸಿದ “ಉದಯವಾಣಿ’ಯೊಂದಿಗೆ ಈ ಇಬ್ಬರು ಕನ್ನಡಿಗರು ಮಾತನಾಡಿದರು. ಉಗ್ರರೊಂದಿಗಿನ ಲಕ್ಷ್ಮೀಕಾಂತ್‌ ಹಾಗೂ ವಿಜಯಕುಮಾರ್‌ ಅನುಭವದ ಸಾರವಿದು-

ಲಿಬಿಯಾ ರಾಷ್ಟ್ರದ ರಾಜಧಾನಿ ಟ್ರಿಪೋಲಿಯಿಂದ 100 ಕಿ.ಮೀ. ದೂರದಲ್ಲಿರುವ ಸಿರ್ಟೆಯ ವಿವಿಯಲ್ಲಿ ನಾವು ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದೆವು. ಇನ್ನು ನಮ್ಮ ಗೆಳೆಯರು ಗೋಪಿಕೃಷ್ಣ ಮತ್ತು ಬಲರಾಂ ಸಿರ್ಟೆಯಿಂದ 80 ಕಿ.ಮೀ ದೂರದಲ್ಲಿರುವ ಟ್ಯುನಿಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಂದೇ ತಾಯ್ನೆಲವಾಗಿದ್ದರಿಂದ ನಮ್ಮಲ್ಲಿ ಸ್ನೇಹದ ಬೆಸುಗೆಯಿತ್ತು. ಆಗಾಗ ಒಟ್ಟಿಗೆ ಸೇರುತ್ತಿದ್ದೆವು. ಹರಟುತ್ತಿದ್ದೆವು. ಸುತ್ತಾಡುತ್ತಿದ್ದೆವು. ದೂರದ ದೇಶದಲ್ಲಿ ನಮಗೆ ನಾವೇ ಬಂಧುಗಳು, ಮಿತ್ರರೂ ಆಗಿದ್ದೆವು. ಭಾರತಕ್ಕೆ ಬರಬೇಕಾದರೂ ಒಟ್ಟಿಗೆ ಬರುತ್ತಿದ್ದೆವು. ಬುಧವಾರ ತಾಯ್ನಾಡಿಗೆ ಮರಳಲು ನಿರ್ಧಾರವಾಗಿತ್ತು. ನಮ್ಮ ಪ್ರಯಾಣ ಪೂರ್ವನಿಗದಿಯಾಗಿದ್ದರಿಂದ ಗೋಪಿಕೃಷ್ಣ ಹಾಗೂ ಬಲರಾಂ ಅವರು, ಬೆಳಗ್ಗೆಯೇ ನಮ್ಮ ಜೊತೆಗೂಡಿದರು. ನಾವೆಲ್ಲಾ ಮಧ್ಯಾಹ್ನ 3 ಗಂಟೆಗೆ ಎರಡು ಕಾರುಗಳಲ್ಲಿ ಸಿರ್ಟೆಯಿಂದ ಟ್ರಿಪೋಲಿಗೆ ಹೊರಟಿದ್ದೆವು. ಸಿರ್ಟೆಯಿಂದ 60 ಕಿ.ಮೀ. ದೂರದಲ್ಲಿ ಐಸಿಸ್‌ ಸಂಘಟನೆಯ ಚೆಕ್‌ ಪೋಸ್ಟ್‌ ಬರುತ್ತದೆ. ಬಂದೂಕು ಹಿಡಿದು 24 ತಾಸು ಸರಹದ್ದು ಕಾಯುತ್ತಾರೆ ಅವರು. ತಮ್ಮ ಆಡಳಿತ ವ್ಯಾಪ್ತಿಯೊಳಗೆ ಪ್ರವೇಶಿಸುವ ಪ್ರತಿಯೊಬ್ಬರ ಕೂಲಂಕಷ ತಪಾಸಣೆ ನಡೆಸುತ್ತಾರೆ. ಆಗ ಇಸ್ಲಾಮೇತರರು ಸಿಕ್ಕಿದರೆ ವಶಕ್ಕೆ ಪಡೆಯುತ್ತಾರೆ. ನಾವು ಸಂಜೆ 5 ಗಂಟೆಗೆ ಆ ಚೆಕ್‌ ಪಾಯಿಂಟ್‌ ತಲುಪಿದ್ದೆವು. ಅದನ್ನು ದಾಟಿ ನಮ್ಮ ಕಾರು ಸ್ವಲ್ವ ದೂರ ಮುಂದೆ ಸಾಗಿತು. ಅಷ್ಟರಲ್ಲಿ ನಮಗೆ ಹಿಂದಿನ ಕಾರಿನಲ್ಲಿದ್ದ ಸ್ನೇಹಿತರು ಕರೆ ಮಾಡಿ ನಮ್ಮನ್ನು ಚೆಕ್‌ ಪಾಯಿಂಟ್‌ನಲ್ಲಿ ತಡೆಹಿಡಿದಿರುವುದಾಗಿ ಹೇಳಿದರು. ಈ ಮಾತು ಕೇಳಿ ನಮಗೆ ಆತಂಕವಾಯಿತು.

ಕೂಡಲೇ ನಾವು ಹಿಂತಿರುಗಿದವು. ಅಲ್ಲಿಗೆ ಹೋಗುತ್ತಿದ್ದಂತೆ ನೀವು ಇಸ್ಲಾಂ ಧರ್ಮದವರಲ್ಲ ಎಂದು ಹೇಳಿ ಬಂದೂಕುಧಾರಿಗಳು ನಮ್ಮನ್ನು ಕರೆದೊಯ್ದರು. ಆನಂತರ ಸಿರ್ಟೆ ನಗರದ ನಡುವಿನ ಯಾವುದೋ ಕಟ್ಟಡದಲ್ಲಿ ಸೆರೆಯಾಳುಗಳನ್ನಾಗಿ ಮಾಡಿಟ್ಟರು. ಆ ಸಂದರ್ಭದಲ್ಲಿ ನಮ್ಮ ಕಾರು ಚಾಲಕ ಅಬ್ದುಲ್ಲಾ ನಮಗೆ ತುಂಬಾ ಸಹಾಯ ಮಾಡಿದ. ಆತ ಹಲವು ದಿನಗಳಿಂದ ನಮಗೆ ಪರಿಚಿತ. ಯಾವಾಗಲೂ ಪ್ರಯಾಣಕ್ಕೆ ಆತನನ್ನು ಕರೆಯುತ್ತಿದ್ದೆವು. ಅಬ್ದುಲ್ಲಾ ಕೂಡಲೇ ಭಾರತ ರಾಯಭಾರ ಕಚೇರಿಗೆ ವಿಷಯ ತಿಳಿಸಿದ. ಅಷ್ಟರಲ್ಲಿ ನಮ್ಮ ಮೊಬೈಲ್‌ ಹಾಗೂ ಲಗೇಜ್‌ ಅನ್ನು ಮುಸುಕುಧಾರಿಗಳು ಕಸಿದುಕೊಂಡಿದ್ದರು. ಹೀಗಾಗಿ ನಾವು ಯಾರನ್ನೂ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಆದರೆ ಉಗ್ರರು ನಮಗೆ ಯಾವುದೇ ರೀತಿ ತೊಂದರೆ ಕೊಡಲಿಲ್ಲ. ಊಟೋಪಚಾರ ಸಹ ಉತ್ತಮವಾಗಿತ್ತು. ಅವರಿಗೆ ನಾವು ಶಿಕ್ಷಕರು ಎಂಬುದನ್ನು ಮನವರಿಕೆ ಮಾಡಿಕೊಟ್ಟೆವು. ದೇವರು ದೊಡ್ಡವನು. ನಮ್ಮನ್ನು ರಕ್ಷಿಸಿದ. ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಸಹಾಯ ಮಾಡಿದರು ಎಂದು ಡಾ.ಲಕ್ಷ್ಮೀಕಾಂತ್‌ ಹಾಗೂ ಡಾ.ವಿಜಯಕುಮಾರ್‌ ನೆಮ್ಮದಿಯ ನಿಟ್ಟುಸಿರುಬಿಟ್ಟರು.

ಮಗಳ ನೋಡಬೇಕು- ಲಕ್ಷೀಕಾಂತ್‌: ಮೊದಲು ನನ್ನ ಮಗಳನ್ನು ನೋಡಬೇಕು. ಆರು ತಿಂಗಳ ಹಿಂದಷ್ಟೆ ಜನಿಸಿದ್ದಾಳೆ. ನಾನು ಸೆರೆಯಾಳಾದೆ ಎಂದು ತಿಳಿದ ಆ ಕ್ಷಣ ಕಣ್ಮುಂದೆ ಮಗಳ ಮುಗ್ಧ ಚಿತ್ರ ಬಂತು. ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ಗೊತ್ತಾಗಲಿಲ್ಲ ಎಂದು ಲಕ್ಷ್ಮೀಕಾಂತ್‌ ನೆನಪಿಸಿಕೊಳ್ಳುತ್ತಾರೆ.
ನನ್ನ ಪತ್ನಿ, ಮಗಳು, ಅಪ್ಪ-ಅಮ್ಮ, ಸಂಬಂಧಿಗಳನ್ನು ಯಾವಾಗ ನೋಡುತ್ತೇನೆ ಎಂದು ಕಾತರಿಸುತ್ತಿದ್ದೇನೆ ಎಂದ ಭಾವುಕರಾದರು.
-ಗಿರೀಶ್‌ ಮಾದೇನಹಳ್ಳಿ
-ಉದಯವಾಣಿ

Write A Comment