ಮೂಲಂಗಿ ಆರೋಗ್ಯಕ್ಕೆ ಒಳ್ಳೆಯದು. ಮೂಲಂಗಿ ಸೊಪ್ಪಿನ ಬಳಕೆಯು ಮಲಬದ್ಧತೆಯನ್ನು ಕಡಿಮೆ ಮಾಡುತ್ತದೆ. ಆದರೆ ಅದರ ಕಟು ವಾಸನೆಯಿಂದಾಗಿ ನಮ್ಮಲ್ಲಿ ಅನೇಕರು ಮೂಲಂಗಿ ಎಂದೊಡನೆ ಮೂಗು ಮುರಿಯುತ್ತಾರೆ.
ಅಂತಹವರು ಮೂಲಂಗಿ ಚಪಾತಿ ಒಮ್ಮೆ ಮಾಡಿ, ತಿಂದು ನೋಡಿ. ಮೂಲಂಗಿ ಚಪಾತಿ ರುಚಿಯೂ ಹೌದು, ಆರೋಗ್ಯಕ್ಕೆ ಹಿತವೂ ಹೌದು. ಹೆಚ್ಚು ಕಟು ವಾಸನೆ ಇಲ್ಲದ ಕಾರಣ ಮೂಲಂಗಿ ಇಷ್ಟಪಡದವರಿಗೂ ಇದು ಇಷ್ಟವಾಗುತ್ತದೆ.
ಬೇಕಾಗುವ ಸಾಮಗ್ರಿಗಳು:
ಮೂಲಂಗಿ ಗಡ್ಡೆ, ಗೋಧಿ ಹಿಟ್ಟು ಸಕ್ಕರೆ, ಉಪ್ಪು ಹಾಗೂ ತುಪ್ಪ
ಮಾಡುವ ವಿಧಾನ:
ಮೂಲಂಗಿ ಗಡ್ಡೆಯನ್ನು ಸಿಪ್ಪೆ ತೆಗೆದುಕೊಂಡು ಚೆನ್ನಾಗಿ ತುರಿದುಕೊಳ್ಳಬೇಕು. ತುರಿದ ಮೂಲಂಗಿಗೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಸಕ್ಕರೆ ಹಾಕಿ ಚೆನ್ನಾಗಿ ಕಲಸಿಕೊಳ್ಳಬೇಕು. ನಂತರ ಗೋಧಿ ಹಿಟ್ಟಿಗೆ ಸ್ವಲ್ಪ ತುಪ್ಪ ಹಾಗೂ ಮಾಡಿಟ್ಟುಕೊಂಡ ಮೂಲಂಗಿ ಮಿಶ್ರಣವನ್ನು ಹಾಕಿ ಚೆನ್ನಾಗಿ ನಾದಿಕೊಳ್ಳಬೇಕು. ನಂತರ ಲಟ್ಟಿಸಿ, ತುಪ್ಪ ಹಾಕಿ ಬೇಯಿಸಿದರೆ, ರುಚಿಯಾದ ಮೂಲಂಗಿ ಚಪಾತಿ ರೆಡಿ.