ಬೆಂಗಳೂರು: ವರ ನಟ ಡಾ. ರಾಜಕುಮಾರ್ ಅಭಿನಯದ ‘ಮಯೂರ’ ಚಿತ್ರದ ದೃಶ್ಯಾವಳಿಗಳನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪಿಸಿ ‘ಸಪ್ನೋಂಕಿ ರಾಣಿ’ ಚಿತ್ರದ ವಿರುದ್ದ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಲಾಗಿದೆ.
‘ಮಯೂರ’ ಚಿತ್ರದ ನಿರ್ಮಾಪಕ ಹಾಗೂ ವಿತರಕ ಶಿವಲಿಂಗಯ್ಯ ಈ ದೂರು ನೀಡಿದ್ದು, ಕ್ರಮ ಕೈಗೊಳ್ಳುವಂತೆ ವಾಣಿಜ್ಯ ಮಂಡಳಿಯನ್ನು ಮನವಿ ಮಾಡಿದ್ದಾರೆ. ‘ಮಯೂರ’ ಚಿತ್ರದ ನೆಗೆಟಿವ್ ಹಕ್ಕುಗಳು ತಮ್ಮ ಬಳಿ ಇದ್ದು ತಮ್ಮಿಂದ ಒಪ್ಪಿಗೆ ಪತ್ರ ಪಡೆಯದೆ ‘ಸಪ್ನೋಂಕಿ ರಾಣಿ’ ಚಿತ್ರ ತಂಡ ದೃಶ್ಯಾವಳಿಗಳನ್ನು ಬಳಸಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.
‘ಸಪ್ನೋಂಕಿ ರಾಣಿ’ ಚಿತ್ರಕ್ಕೆ ವಿನಯ್ ರಾಜಕುಮಾರ್ ಕ್ಲಾಪ್ ಮಾಡಿದ್ದು, ಚಿತ್ರದ ವಿರುದ್ದ ದೂರು ದಾಖಲಾಗಿರುವುದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ನಿರ್ಮಾಪಕ ಪೃಥ್ವಿ, ಡಾ. ರಾಜ್ ಕುಟುಂಬದವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ. ಅಂತದ್ದರಲ್ಲಿ ‘ಸಪ್ನೋಂಕಿ ರಾಣಿ’ ಚಿತ್ರದ ವಿರುದ್ದ ದೂರು ದಾಖಲಿಸಲು ಶಿವಲಿಂಗಯ್ಯನವರಿಗೆ ನೈತಿಕ ಹಕ್ಕೇನಿದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ‘ಮಯೂರ’ ಚಿತ್ರದ ದೃಶ್ಯಾವಳಿಯನ್ನು ವ್ಯವಹಾರಿಕ ಉದ್ದೇಶದಿಂದ ಬಳಸಿಕೊಂಡಿಲ್ಲ ಅಣ್ಣಾವ್ರ ಮೇಲಿನ ಅಭಿಮಾನದಿಂದ ಬಳಸಿಕೊಂಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ. ಸೃಜನ್ ಲೋಕೇಶ್, ಐಶ್ವರ್ಯಾ, ಅವಿನಾಶ್ ಮೊದಲಾದವರು ‘ಸಪ್ನೋಂಕಿ ರಾಣಿ’ ಚಿತ್ರದಲ್ಲಿ ಅಭಿನಯಿಸಿದ್ದಾರೆ.