ಕೋಲಾರ: ವರ್ಷದ ಹಿಂದೆ ಮುಳಬಾಗಲಿನಿಂದ ನಾಪತ್ತೆಯಾಗಿದ್ದ ಬುದ್ಧಿಮಾಂದ್ಯ ಮಹಿಳೆ ಹರಿಯಾಣದಲ್ಲಿ ಪತ್ತೆಯಾಗಿದ್ದು, ಅಲ್ಲಿನ ಕನ್ನಡಿಗ ಎಸ್ಪಿ ಆಕೆಯನ್ನು ಕೋಲಾರಕ್ಕೆ ಕಳಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ತಾಲೂಕಿನ ಪೆಮ್ಮಶೆಟ್ಟಹಳ್ಳಿ ಗ್ರಾಮದ ಸುರೇಶ್ ಅವರ ಪತ್ನಿ ವೇದಾವತಿ ಮಾನಸಿಕ ಅಸ್ವಸ್ಥಳಾದ ಹಿನ್ನೆಲೆಯಲ್ಲಿ ಮನೆಯವರು ಮುಳಬಾಗಲಿನ ದರ್ಗಾದಲ್ಲಿ ಚಿಕಿತ್ಸೆ ಕೊಡಿಸಲು ಕರೆದುಕೊಂಡು ಹೋಗಿದ್ದರು. ಆಗ ವೇದಾವತಿ ನಾಪತ್ತೆಯಾಗಿದ್ದರು. ಆಕೆಯ ಅಣ್ಣ, ಪತಿ ಒಂದು ತಿಂಗಳು ಹುಡುಕಿದರೂ ಪತ್ತೆಯಾಗಿರಲಿಲ್ಲ. ಮುಳಬಾಗಲು ಠಾಣೆಯಲ್ಲಿ ದೂರು ದಾಖಲಾಗಿತ್ತು. ವಾರದ ಬಳಿಕ ಪೊಲೀಸ್ ಠಾಣೆಯಲ್ಲಿ ವಿಚಾರಿಸಿದಾಗ ‘ಒಂದು ಅನಾಥ ಶವ ಸಿಕ್ಕಿತ್ತು. ಅದನ್ನು ಮಣ್ಣು ಮಾಡಿದ್ದೇವೆ,’ ಎಂದು ಪೊಲೀಸರು ತಿಳಿಸಿದ್ದರು. ನಂತರ ವೇದಾವತಿಯ ಅಣ್ಣ ಮುನಿರಾಜು ತಂಗಿಗಾಗಿ ಹುಡುಕಾಟ ನಿಲ್ಲಿಸಿದ್ದ.
ತಪ್ಪಿಸಿಕೊಂಡಿದ್ದ ವೇದಾವತಿ ಗಡಿ ಭಾಗದಿಂದ ನೆರೆಯ ಆಂಧ್ರ ಮಾರ್ಗವಾಗಿ ಎಲ್ಲೆಲ್ಲೋ ತಿರುಗಾಡಿದ್ದಾಳೆ. ಈಗ್ಗೆ 6 ತಿಂಗಳ ಹಿಂದೆ ದಿಲ್ಲಿಯಿಂದ ಸಿರ್ಸಾಗೆ ಹೋಗುವ ರಸ್ತೆಯೊಂದರ ಮೋರಿ ಬಳಿ ವೇದಾವತಿ ಅಳುತ್ತ ಕುಳಿತಿದ್ದಾಗ ಕನ್ಹಯ್ಯ ಆಶ್ರಮದ ಗುರುವೇಂದರ್‌ಸಿಂಗ್ ಆಕೆಯನ್ನು ಆಶ್ರಮಕ್ಕೆ ಸೇರಿಸಿಕೊಂಡು 4 ತಿಂಗಳು ಚಿಕಿತ್ಸೆ ಕೊಡಿಸಿದ್ದಾರೆ. ವೇದಾವತಿಗೆ ಬುದ್ಧಿ ತಿಳಿಯತೊಡಗಿದಾಗ ಆಕೆ ತನ್ನ ವಿಳಾಸ ಹೇಳಿದ್ದಾಳೆ.
ಅವರು ಸಿರ್ಸಾ ಜಿಲ್ಲೆಯ ಎಸ್ಪಿ, ಕನ್ನಡಿಗ ಅಶ್ವಿನ್ ಶನ್ವಿ ಅವರ ಮೂಲಕ ಕೋಲಾರ ಗ್ರಾಮಾಂತರ ಠಾಣೆಯ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಪೊಲೀಸರಿಂದ ವೇದಾವತಿಯ ಅಣ್ಣ ಮುನಿರಾಜುಗೆ ಕರೆ ಮಾಡಿ, ವೇದಾವತಿ ಹರಿಯಾಣದ ಆಶ್ರಮವೊಂದರಲ್ಲಿ ಇರುವುದಾಗಿ ತಿಳಿಸಿದ್ದಾರೆ. ನಂತರ ಎಸ್ಪಿ ಅಶ್ವಿನ್ ಅವರನ್ನು ಮುನಿರಾಜು ಭೇಟಿಯಾಗಿದ್ದಾರೆ. ಅವರು ಉತ್ತರ ಕನ್ನಡ ಜಿಲ್ಲೆಯವರು ಎಂಬುದೂ ಗೊತ್ತಾಗಿದೆ. ಅವರು ತೋರಿದ ಸಹಕಾರದಿಂದ ವೇದಾವತಿ ತಾಯ್ನಾಡಿಗೆ ಮರಳಿದ್ದಾರೆ.