ಬೆಂಗಳೂರು,ಆ.5: ನಿನ್ನೆವರೆಗೂ ಅದೊಂದು ಸುಖಿ ಕುಟುಂಬ. ಮೂವರು ಮಕ್ಕಳು ಉನ್ನತ ಹುದ್ದೆಗಳಲ್ಲಿದ್ದಾರೆ. ಆದರೆ ಇಳಿ ವಯಸ್ಸಿನಲ್ಲೂ ಪೋಷಕರ ಮಧ್ಯೆ ನಡೆದ ಜಗಳ ಇವರಿಬ್ಬರ ಸಾವಿನಲ್ಲಿ ಪರ್ಯಾವಸಾನಗೊಂಡಿದ್ದು , ದುರ್ದೈವದ ಸಂಗತಿ. ಈ ಘಟನೆ ನಡೆದಿರುವುದು ಮೂಡಲಪಾಳ್ಯದ ಸಮೀಪದ ಸರಸ್ವತಿ ನಗರದಲ್ಲಿ. ನಿವೃತ್ತ ಸರ್ಕಾರಿ ನೌಕರರಾದ ಗಿರೀಶ್(65) ಎಂಬುವರು ಸರಸ್ವತಿಪುರಂನ ಸ್ವಂತ ಮನೆಯಲ್ಲಿ ಕುಟುಂಬದವರೊಂದಿಗೆ ವಾಸವಾಗಿದ್ದರು.
ಗಿರೀಶ್ ಪತ್ನಿ ಗೌರಮ್ಮ(59) ಗೃಹಿಣಿಯಾಗಿದ್ದು, ಮೊದಲ ಮಗ ದೀಪಕ್ ಚೆನ್ನೈನಲ್ಲಿ ಭಾರತೀಯ ವಾಯುಪಡೆಯಲ್ಲಿ ವಿಂಗ್ ಕಮಾಂಡ್ ಆಗಿ ಸೇವೆ ಸಲ್ಲಿಸುತ್ತಿದ್ದರೆ, 2ನೇ ಮಗ ದಿಲೀಪ್ ಬೆಂಗಳೂರಿನ ಟಾಟಾ ಕನ್ಸಲ್ಟೆನ್ಸಿಯೊಂದರಲ್ಲಿ ಮ್ಯಾನೇಜರ್ ಆಗಿದ್ದು, 3ನೇ ಮಗ ದರ್ಶನ್ ಹೆಬ್ಬಾಳದ ಸಾಫ್ಟ್‌ವೇರ್ ಕಂಪನಿಯಲ್ಲಿ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಪೈಕಿ ದರ್ಶನ್ ಮಾತ್ರ ಪೋಷಕರೊಂದಿಗೆ ವಾಸವಾಗಿದ್ದರು. ಒಟ್ಟಾರೆ ಈ ಕುಟುಂಬ ಸುಖಿ ಕುಟುಂಬವಾಗಿತ್ತು. ಆದರೆ ಮೂರು ತಿಂಗಳ ಹಿಂದೆ ಮಕ್ಕಳು ಪೋಷಕರನ್ನು ದೆಹಲಿ ಪ್ರವಾಸಕ್ಕೆ ಕರೆದೊಯ್ದಿದ್ದಾಗ ಗಿರೀಶ್ ಅವರ ತಲೆಗೆ ಪೆಟ್ಟಾಗಿದ್ದರಿಂದ ಚಿಕಿತ್ಸೆ ಕೊಡಿಸಲಾಗಿತ್ತು.
ತದನಂತರದಲ್ಲಿ ಗಿರೀಶ್ ಮಾನಸಿಕ ಅಸ್ವಸ್ಥರಂತೆ ವರ್ತಿಸುತ್ತಿದ್ದರೆನ್ನಲಾಗಿದೆ. ಮನೆಯಲ್ಲಿ ನಡೆಯುವ ಸಣ್ಣಪುಟ್ಟ ವಿಷಯಕ್ಕೂ ಪತ್ನಿ ಗೌರಮ್ಮ ಜೊತೆ ಜಗಳವಾಡುತ್ತಿದ್ದರು. ಆಗ ಮನೆಯಲ್ಲಿರುತ್ತಿದ್ದ ದರ್ಶನ್ ಅವರನ್ನು ಸಮಾಧಾನಪಡಿಸುತ್ತಿದ್ದ ಎನ್ನಲಾಗಿದೆ. ಅಲ್ಲದೆ ಗಿರೀಶ್ ಅವರು ನನಗೆ ಬದುಕು ಸಾಕಾಗಿದೆ. ನಾನು ಸಾಯುತ್ತೇನೆಂಬ ಮಾತುಗಳನ್ನಾಡುತ್ತಿದ್ದರಲ್ಲದೆ, ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಗಲಾಟೆ ಮಾಡುತ್ತಿದ್ದರು.
ನಿನ್ನೆ ರಾತ್ರಿ 7 ಗಂಟೆ ಸಮಯದಲ್ಲಿ ಮಗ ದರ್ಶನ್ ವಾಯು ವಿಹಾರಕ್ಕೆ ತೆರಳಿದ್ದ ವೇಳೆ ದಂಪತಿ ಮಧ್ಯೆ ಜಗಳವಾಗಿ ಮಾತಿನ ಚಕಮಕಿ ನಡೆದು ಅದು ವಿಕೋಪಕ್ಕೆ ತಿರುಗಿದಾಗ ತಾಳ್ಮೆ ಕಳೆದುಕೊಂಡ ಗಿರೀಶ್ ಕೈಗೆ ಸಿಕ್ಕ ಕಬ್ಬಿಣದ ಸಲಾಕೆಯಿಂದ ಪತ್ನಿ ಗೌರಮ್ಮ ತಲೆಗೆ ಹಲ್ಲೆ ನಡೆಸಿದ್ದರಿಂದ ಕುಸಿದುಬಿದ್ದಿದ್ದಾರೆ.
ಇವರ ಮನೆಯಲ್ಲಿ ಕೂಗಾಟ ಕೇಳಿ ನೆರೆಹೊರೆಯವರು ಮನೆ ಬಳಿ ಜಮಾಯಿಸಿದ್ದಾರೆ. ಅಷ್ಟರಲ್ಲಿ ಮನೆಗೆ ಮರಳಿದ ದರ್ಶನ್ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿಯ ಬಗ್ಗೆ ವಿಚಾರಿಸಿದಾಗ ತಂದೆ ಗಿರೀಶ್ ಗಾಬರಿಯಾಗಿ ನೇಣು ಹಾಕಿಕೊಳ್ಳಲು ಮುಂದಾಗಿದ್ದಾರೆ. ಆಗ ಮಗ, ತಂದೆಯನ್ನು ಸಮಾಧಾನಪಡಿಸಿ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿ ಮನೆಗೆ ಮರಳುವಷ್ಟರಲ್ಲಿ ಇತ್ತ ತಂದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ನಡುವೆ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ತಾಯಿ ಗೌರಮ್ಮ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಕ್ಷಣಾರ್ಧದಲ್ಲಿ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ರೋದನ ನೋಡುಗರ ಮನ ಕಲಕುವಂತಿತ್ತು.