ಬೆಂಗಳೂರು,ಆ.5;ಲೋಕಾಯುಕ್ತದಲ್ಲಿನ ಭ್ರಷ್ಟಾಚಾರದ ಪ್ರಮುಖ ಕಿಂಗ್‍ಪಿನ್ ಭಾಸ್ಕರ ಅಲಿಯಾಸ್ 420 ಭಾಸ್ಕರನನ್ನು ಕೊನೆಗೂ ವಿಶೇಷ ತನಿಖಾ ತಂಡದ ಅಧಿಕಾರಿಗಳು ಬಂಧಿಸಲು ಯಶಸ್ವಿಯಾಗಿದ್ದಾರೆ.
ಚೆನ್ನೈ ಆಂಧ್ರ ಇನ್ನಿತರ ಕಡೆಗಳಲ್ಲಿ ಭಾಸ್ಕರನಿಗೆ ಹಗಲಿರುಳು ಶೋಧ ನಡೆಸಿದ್ದ ವಿಶೇಷ ತನಿಖಾ ತಂಡದ ಅಧಿಕಾರಿಗಳಿಗೆ ಭಾಸ್ಕರ ನಗರದಲ್ಲೇ ಸಿಕ್ಕಿಬಿದ್ದಿದ್ದಾನೆ. ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಪ್ರಕರಣದ ಪ್ರಮುಖ ಆರೋಪಿ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಅವರ ಪುತ್ರ ಆಶ್ವಿನ್‍ರಾವ್ ಅವರ ನಿಕಟವರ್ತಿಯಾಗಿದ್ದ ಭಾಸ್ಕರ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಿದ ನಂತರ 420 ಭಾಸ್ಕರ ತಲೆ ಮರೆಸಿಕೊಂಡಿದ್ದ.
ತಲೆ ಮರೆಸಿಕೊಂಡ ಭಾಸ್ಕರನ ಬಂಧನಕ್ಕೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು ಆತ ಬಳಸುತ್ತಿದ್ದ ಮೊಬೈಲ್ ಸಂಖ್ಯೆ ಆಧರಿಸಿ ತನಿಖೆಯನ್ನು ಅಧಿಕಾರಿಗಳು ತೀವ್ರಗೊಳಿಸಿದ್ದರು,ಕೊನೆಗೂ ಯಶಸ್ವಿ ಕಾರ್ಯಾಚರನೆ ನಡೆಸಿದ ವಿಶೇಷ ತಂಡ ಆರೋಪಿಯನ್ನು ಬಂಧಿಸಿ ರಹಸ್ಯ ಸ್ಥಳದಲ್ಲಿ ವಿಚಾರಣೆಗೊಳಪಡಿಸಿದೆ.
ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಪ್ರಕರಣ ಬೆಳಕಿಗೆ ಬಂದ ನಾಲ್ಕೈದು ದಿನಗಳಲ್ಲಿ ದೃಶ್ಯ ಮಾಧ್ಯಮವೊಂದರಲ್ಲಿ ಲೋಕಾಯುಕ್ತದಲ್ಲಿನ ಭ್ರಷ್ಟಾಚಾರ ಪ್ರಕರಣದಲ್ಲಿ ಯಾರ್ಯಾರ ಪಾಲು ಪಾತ್ರ ಎಷ್ಟಿದೆ ಎನ್ನುವುದನ್ನು ಹೇಳಿಕೊಂಡಿದ್ದ ಆತನ ಹೇಳಿಕೆಯನ್ನು ಬೆನ್ನತ್ತಿದ್ದ ವಿಶೇಷ ತನಿಖಾ ತಂಡದ ಅಧಿಕಾರಿಗಳು ಆಶೋಕ್‍ಕುಮಾರ್, ಶ್ರೀನಿವಾಸಗೌಡ,ಶಂಕರೇಗೌಡ ನಂತರ ರಿಯಾಜ್ ಹಾಗೂ ಆಶ್ವಿನ್‍ರಾವ್‍ನನ್ನು ಬಂಧಿಸಿದ್ದರು
ಲೋಕಾಯುಕ್ತ ಎಸ್‍ಪಿ ಸೋನಿಯಾ ನಾರಂಗ್ ಅವರನ್ನು ಮಾಧ್ಯಮಗಳಲ್ಲಿ ಏಕವಚನದಲ್ಲಿ ನಿಂದಿಸಿದ್ದ ಭಾಸ್ಕರನ ವಿರುದ್ಧ ಕೇಂದ್ರ ವಿಭಾಗದ ಪೊಲೀಸರು ದೂರು ದಾಖಲಿಸಿಕೊಂಡು ಆತನಿಗಾಗಿ ಹುಡುಕಾಟ ನಡೆಸಿದ್ದರು.