ಬೆಂಗಳೂರು,ಆ.5: ನಾನು ಉಗ್ರ ಅಲ್ಲ… ಆದರೂ ಎಸ್‌ಐಟಿ ಪೊಲೀಸರು ಉಗ್ರರಿಗಿಂತ ಕೆಟ್ಟದಾಗಿ ನಡೆಸಿಕೊಂಡರು….ಹೀಗೆ ಲೋಕ ಕಳಂಕ ಪ್ರಕರಣ ಆರೋಪದಲ್ಲಿ ಎಸ್‌ಐಟಿ ವಶದಲ್ಲಿರುವ ಪಿಆರ್‌ಒ ರಿಯಾಜ್ ಅಹಮದ್ ನ್ಯಾಯಾಲಯದ ಮುಂದೆ ಅಲವತ್ತುಕೊಂಡ ಪರಿ ಇದು. ಒಂಬತ್ತು ದಿನಗಳ ಪೊಲೀಸ್ ಕಸ್ಟಡಿ ಅವಧಿ ಇಂದಿಗೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಿಯಾಜ್ ಅವರನ್ನು ಪೊಲೀಸರು ಲೋಕಾಯುಕ್ತ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ಈ ಸಂದರ್ಭದಲ್ಲಿ ಎಸ್‌ಐಟಿ ಪೊಲೀಸರು ಬಂಧಿತ ರಿಯಾಜ್ ಅಹಮದ್ ವಿಚಾರಣೆಗೆ ಸಂಪೂರ್ಣ ಸ್ಪಂದಿಸುತ್ತಿಲ್ಲ. ಹಾಗಾಗಿ ಪೊಲೀಸ್ ಕಸ್ಟಡಿ ಅವಧಿವಿಸ್ತರಿಸುವಂತೆ ಮನವಿ ಮಾಡಿಕೊಂಡರು. ಪೊಲೀಸರ ಈ ಹೇಳಿಕೆಯಿಂದ ವಿಚಲಿತನಾದಂತೆ ಕಂಡುಬಂದ ರಿಯಾಜ್ ಅಹಮದ್ ಸ್ವಾಮಿ…. ನಾನು ಉಗ್ರ ಅಲ್ಲ…. ಪೊಲೀಸರಿಗೆ ಎಲ್ಲ ರೀತಿಯ ಸಹಕಾರ ನೀಡಿದ್ದೇನೆ. ಆದರೂ ಅವರು ಉಗ್ರರಿಗಿಂತ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಮಾತ್ರವಲ್ಲ ನನ್ನ ವಿರುದ್ದ ಇಲ್ಲಸಲ್ಲದ ನಾಲ್ಕು ಡಜನ್ ಕೇಸು ಹಾಕಿದ್ದಾರೆ. ಇದರಿಂದ ನನ್ನ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ ಎಂದು ಹೇಳಿದರು.
ಪೊಲೀಸ್ ಕಸ್ಟಡಿಯಲ್ಲಿದ್ದ 9 ದಿನಗಳು ನಾನು ಸರಿಯಾಗಿ ನಿದ್ರೆ ಮಾಡಿಲ್ಲ, ಮನೆ ಊಟ ಬೇಕೆಂದು ಕೇಳಿದ್ದೆ ಆದರೆ ಪೊಲೀಸರು ಒದಗಿಸಲಿಲ್ಲ. ಹಾಗಾಗಿ ಎರಡು ದಿನ ಊಟ ಮಾಡಿಲ್ಲ. ಇಂದು ಬೆಳಗ್ಗೆ ಕೋರ್ಟ್‌ಗೆ ಹಾಜರಾಗುವ ವೇಳೆಯೂ ತಿಂಡಿ ತಿಂದು ಬಂದಿಲ್ಲ. ದಯವಿಟ್ಟು ಪೊಲೀಸ್ ಕಸ್ಟಡಿಗೆ ಕೊಡಬೇಡಿ ಎಂದು ಕೋರಿದರು. ವಾದ-ವಿವಾದ ಆಲಿಸಿದ ಲೋಕಾಯುಕ್ತ ನ್ಯಾಯಾಲಯದ ನ್ಯಾಯಮೂರ್ತಿ ಕೆ.ಜಿ.ಬೋಪಣ್ಣ ಅವರು, ರಿಯಾಜ್ ಅಹಮದ್‌ರನ್ನು ಆ.14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು.