ಕರ್ನಾಟಕ

ಬಿಬಿಎಂಪಿ ಚುನಾವಣೆ; ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ

Pinterest LinkedIn Tumblr

BJP

ಬೆಂಗಳೂರು, ಆ.5: ಬಿಬಿಎಂಪಿ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ನಿಷ್ಠಾವಂತ ಕಾರ್ಯಕರ್ತರ ಬದಲು ಸಂಸದರು, ಶಾಸಕರ ಹಿಂಬಾಲಕರಿಗೆ ಮಣೆ ಹಾಕಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಬಂಡಾಯದ ಭೀತಿ

ಬೇರೆ ರಾಜಕೀಯ ಪಕ್ಷಗಳಿಗಿಂತ ಮೊದಲೇ ಪಟ್ಟಿ ಬಿಡುಗಡೆ ಮಾಡಿದ ಪಕ್ಷ ಎಂದು ಬೀಗುತ್ತಿದ್ದ ಬಿಜೆಪಿ ಮುಖಂಡರಿಗೆ ಈ ಅಸಮಾಧಾನ ಬಿಸಿ ತುಪ್ಪವಾಗಿದ್ದು, ಬಂಡಾಯದ ಭೀತಿ ಎದುರಾಗಿದೆ.

ಬಿಬಿಎಂಪಿ ಚುನಾವಣೆಯ ಉಸ್ತುವಾರಿಯಾಗಿರುವ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ ವಿರುದ್ಧ ಕೆಲ ಮುಖಂಡರು ಗರಂ ಆಗಿದ್ದು, ತಾವು ಹೇಳಿದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿಲ್ಲ ಎಂಬುದು ಮುಖಂಡರ ದೂರಾಗಿದೆ.

ಮಾಜಿ ಸಚಿವ ವಿ. ಸೋಮಣ್ಣ, ಸಂಸದ ಪಿ.ಸಿ.ಮೋಹನ್, ಕೇಂದ್ರ ಸಚಿವರಾದ ಅನಂತ್‌ಕುಮಾರ್, ಸದಾನಂದಗೌಡರವರು ಕೆಲ ವಾರ್ಡ್‌ಗಳಿಗೆ ತಾವು ಹೇಳಿದ ಅಭ್ಯರ್ಥಿಗೆ ಟಿಕೆಟ್ ಸಿಗದ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಪಟ್ಟಿ ಬಿಡುಗಡೆಗೂ ಮುನ್ನ ನಿನ್ನೆ ನ‌ಡೆದ ಹಿರಿಯ ಮುಖಂ‌ಡರ ಸಭೆಯಲ್ಲಿ ಮಾಜಿ ಸಚಿವ ವಿ. ಸೋಮಣ್ಣ, ವಿಜಯನಗರ ಹಾಗೂ ಗೋವಿಂದರಾಜ ಕ್ಷೇತ್ರದಲ್ಲಿ ತಾವು ಹೇಳಿದವರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದು, ಆರ್. ಅಶೋಕ ಜತೆ ನೇರವಾಗಿ ಮಾತಿನ ಜಟಾಪಟಿ ನಡೆಸಿದರು ಎನ್ನಲಾಗಿದೆ.

ಹೈಕಮಾಂಡ್‌ಗೆ ದೂರು: ಪಟ್ಟಿ ಬದಲಾವಣೆ

ಪಕ್ಷಕ್ಕೆ ದುಡಿದವರು, ಹಿರಿಯರನ್ನು ಕಡೆಗಣಿಸಿ, ಹಿಂಬಾಲಕರಿಗೆ ಟಿಕೆಟ್ ನೀಡಿರುವ ಮುಖಂಡರ ತೀರ್ಮಾನದ ವಿರುದ್ಧ ಪಕ್ಷದ ಕೆಲ ಮುಖಂಡರು ವರಿಷ್ಠರಿಗೆ ದೂರು ನೀಡಲು ಮುಂದಾಗಿದ್ದು, ಈಗಿನ ಪಟ್ಟಿಯಲ್ಲಿ ಕೆಲ ಬದಲಾವಣೆಯಾಗುವ ಸಾಧ್ಯತೆಗಳಿವೆ.

ಮಾಜಿ ಮೇಯರ್‌, ಸದಸ್ಯರ ಪತ್ನಿಯರಿಗೆ ಟಿಕೆಟ್

ಬಿಜೆಪಿ ಈಗ ಬಿಡುಗಡೆ ಮಾ‌ಡಿರುವ ಪಟ್ಟಿಯಲ್ಲಿ ಮಾಜಿ ಮೇಯರ್‌ಗಳು, ಪಾಲಿಕೆಯ ಕೆಲ ಮಾಜಿ ಸದಸ್ಯರು, ತಮ್ಮ ಪತ್ನಿಯರಿಗೆ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಮಾಜಿ ಮೇಯರ್ ನಟರಾಜ್, ಪತ್ನಿಗೆ ಟಿಕೆಟ್ ನೀಡಲಾಗಿದ್ದು, ಅದೇ ರೀತಿ ಪಾಲಿಕೆಯ ಮಾಜಿ ಸದಸ್ಯರಾದ ಪದ್ಮರಾಜ್, ಬಿ.ವಿ. ಗಣೇಶ್, ಮಂಜುನಾಥ ಬಾಬು, ಮಂಜುನಾಥ ರೆಡ್ಡಿ, ರಾಮಮೂರ್ತಿ, ಶಿವಕುಮಾರ್, ಧನರಾಜ್, ರಮೇಶ್ ಇವರುಗಳ ಪತ್ನಿಯರಿಗೂ ಟಿಕೆಟ್ ನೀ‌ಡಲಾಗಿದೆ.

ಬಿಜೆಪಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದವರಿಗೂ ಮತ್ತೆ ಒಂದು ಅವಕಾಶ ನೀಡಲಾಗಿದ್ದು, 96 ಅಭ್ಯರ್ಥಿಗಳ ಪೈಕಿ 9 ಮಂದಿ ಮಾತ್ರ ಹಾಲಿ ಪಾಲಿಕೆ ಸದಸ್ಯರಾಗಿದ್ದು, ಉಳಿದವರೆಲ್ಲಾ ಹೊಸ ಮುಖಗಳಾಗಿದ್ದಾರೆ

Write A Comment