ಬೆಳಗಾವಿ: ಅತ್ಯಾಚಾರವೆಸಗಿದ ಬಳಿಕ ತಪ್ಪಿನ ಅರಿವಾಗಿ ಸಂತ್ರಸ್ಥೆಯನ್ನು ವಿವಾಹದರೂ ಇಲ್ಲೊಬ್ಬನ ಗ್ರಹಚಾರ ಸರಿ ಇದ್ದಂತೆ ಕಾಣುತ್ತಿಲ್ಲ. ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ತಪ್ಪಿಗೆ ಆತನೀಗ ಹತ್ತು ವರ್ಷ ಶಿಕ್ಷೆ ಅನುಭವಿಸಬೇಕಾಗಿದೆ.
ಬೆಳಗಾವಿ ಸಮೀಪದ ದೇಸೂರ ಗ್ರಾಮದ ಕೃಷ್ಣ ದಶರಥ ನಿಟ್ಟೂರಕರ ಎಂಬಾತನೇ ಶಿಕ್ಷೆಗೊಳಗಾದ ವ್ಯಕ್ತಿ. ಈತ 2013ರ ಜೂ. 26ರಂದು ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ್ದ. ಬೆಳಗಾವಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿ 2014ರ ಫೆಬ್ರವರಿಯಲ್ಲಿ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಬಾಲಕಿ ಆರೋಪಿ ವಿರುದ್ದ ಹೇಳಿಕೆ ನೀಡಿದ್ದಳು.
ಬಳಿಕ ಕೃಷ್ಣನೊಂದಿಗೆ ಮದುವೆಯಾಗಿದ್ದ ಬಾಲಕಿ ಅತ್ಯಾಚಾರ ನಡೆದಿಲ್ಲ ಎಂದು ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದಳು. ಆದರೆ, ಈ ಮೊದಲು ಆಕೆ ನೀಡಿದ್ದ ಹೇಳಿಕೆಯನ್ನು ಅಧಿಕೃತ ಎಂದು ಪರಿಗಣಿಸಿದ ನ್ಯಾಯಾಲಯ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ ಆರೋಪಿಗೆ ಹತ್ತು ವರ್ಷ ಜೈಲು ಶಿಕ್ಷೆ ಹಾಗೂ ಸಂತ್ರಸ್ಥೆಗೆ 25 ಸಾವಿರ ರೂ. ಪರಿಹಾರ ನೀಡುವಂತೆ ಆದೇಶಿಸಿದೆ.
ಚೆನ್ನೈ ಹೈಕೋರ್ಟ್ ಈ ಹಿಂದೆ ಪ್ರಕರಣವೊಂದರಲ್ಲಿ ಅತ್ಯಾಚಾರ ನಡೆಸಿದ ಆರೋಪಿಯೊಂದಿಗೆ ಸಂಧಾನ ಮಾಡಿಕೊಳ್ಳುವಂತೆ ಸಂತ್ರಸ್ಥ ಮಹಿಳೆಗೆ ಸೂಚನೆ ನೀಡಿತ್ತು. ಆಗ ಸಾರ್ವಜನಿಕ ವಲಯ ಮಾತ್ರವಲ್ಲದೇ, ಸುಪ್ರೀಂ ಕೋರ್ಟ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.