ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಚಾಯ್ ಮಾರುತ್ತಿದ್ದರು ಎನ್ನುವ ಕಾರಣಕ್ಕೆ ಅವರನ್ನು ಚಾಯ್ ವಾಲಾ ಎಂದು ಕರೆದು ವಿಪಕ್ಷದವರು ಛೇಡಿಸಿದ್ದುಂಟು. ಅಡಿಕೆಯಿಂದ ಚಹಾ ಸಿದ್ಧಪಡಿಸಿ ಮಲೆನಾಡ ಪುಟ್ಟ ಗ್ರಾಮದ ಯುವಕ ನಿವೇದನ್ ಮೋದಿಯವರ ಮೇಕ್ ಇನ್ ಇಂಡಿಯಾ ಯೋಜನೆಯಡಿ ಸುದ್ದಿ ಮಾಡಿದ್ದಾರೆ.
ಇನ್ನೇನೂ ಅಡಿಕೆ ನಿಷೇಧ ಆಗಿಯೇ ಹೋಯ್ತು ಎನ್ನುವಷ್ಟರಲ್ಲೆ ಅಡಿಕೆಗೆ ಚಿನ್ನದ ಬೆಲೆ ಸಿಗುವ ಮೂಲಕ ಅಡಿಕೆ ಬೆಳೆಗಾರರಲ್ಲಿ ಸಂತಸ ತಂದಿತ್ತು. ಇದೀಗ ಅಡಿಕೆಯಿಂದ ಚಹಾ ಸಿದ್ಧಪಡಿಸುವ ಮೂಲಕ ಅಡಿಕೆಯ ಮೌಲ್ಯವರ್ಧಿತ ಉತ್ಪನ್ನ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಅಡಿಕೆ ಧಾರಣೆ ಕುಸಿದಾಗಲೆಲ್ಲಾ, ಅಡಿಕೆಯ ಮೌಲ್ಯವರ್ಧನೆ ಬಗ್ಗೆಯೇ ಚರ್ಚೆ ಆಗುತ್ತಿತ್ತು. ಕೇವಲ ತಾಂಬೂಲ ಹಾಗೂ ಗುಟ್ಕಾ ತಯಾರಿಕೆಗೆ ಸೀಮಿತವಾಗಿದ್ದ ಅಡಿಕೆಯಿಂದ ಚಹಾ ತಯಾರಿಸಬಹುದು ಎಂಬುದನ್ನು ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಗ್ರಾಮದ ನಿವೇದನ್ ಸಾದರಪಡಿಸಿದ್ದಾರೆ.
ನಿವೇದನ್ ಫಾರ್ಮಸಿ ಪದವಿ ಪಡೆದು, ಆಸ್ಟ್ರೇಲಿಯಾಕ್ಕೆ ತೆರಳಿ ಮೆಲ್ಬೋನ್ ವಿವಿಯಲ್ಲಿ ಉತ್ಪಾದನೆ ಹಾಗೂ ಮಾರುಕಟ್ಟೆ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆಸ್ಟ್ರೇಲಿಯಾದ ಖಾಸಗಿ ಕಂಪನಿಯಲ್ಲಿ 2 ವರ್ಷಗಳ ಕಾಲ ಕೆಲಸ ಮಾಡಿ, ತಾಯ್ನಾಡಿಗೆ ಮರಳಿ ಇಲ್ಲಿಯೇ ಏನಾದರೂ ಸಾಧಿಸಬೇಕು ಎಂಬ ಛಲದ ಫಲವೇ ಅಡಿಕೆ ಟೀ.. ಅಡಿಕೆಯಿಂದ ಸಿದ್ಧಪಡಿಸಿದ ಚಹಾ ಪುಡಿಯಿಂದ ಚಹಾ ಕುಡಿದು ಬಾಯಿ ಚಪ್ಪರಿಸಿದವರು ಅನೇಕರು.
ಚಹಾ ಪೌಡರ್ ತಯಾರಿಗೆ ಬೆಟ್ಟೆ ಅಡಿಕೆಯನ್ನು ಬಳಸಿಕೊಳ್ಳಲಾಗಿದೆ. ಗ್ರೀನ್ ಟೀ ಮಾದರಿಯಲ್ಲೆ ಈ ಚಹಾ ಪುಡಿಯನ್ನು ಸಿದ್ಧಪಡಿಸಲಾಗಿದೆ. ಶೇ. 80 ರಷ್ಟು ಅಡಿಕೆ ಮತ್ತು ಸುವಾಸನೆಗೆ ಶೇ.20 ರಷ್ಟು ಶುದ್ಧ ಆಯುರ್ವೇದಿಕ್ ಗಿಡ ಮೂಲಿಕೆ ಬಳಕೆ ಮಾಡಲಾಗಿದೆ.
ಅಡಿಕೆಗೆ ಚಿನ್ನದ ಬೆಲೆ ಇದ್ದರೆ, ಅಡಿಕೆಯ ಉಪ ಉತ್ಪನ್ನಗಳಿಗೆ ಇನ್ನೆಷ್ಟು ಬೆಲೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಆದರೆ ಅರೆಕಾ ಟೀ ಪುಡಿ ಮಾತ್ರ ಅಗ್ಗದ ಬೆಲೆಯಲ್ಲೆ ತಯಾರಿಸಲಾಗಿದೆ. ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಹೊಸ ಉತ್ಪನ್ನ ದೊರೆಯಲಿದೆ. ಎರಡು ಹಾಗೂ ಐದು ಗ್ರಾಂ ಪೌಚ್ ಗಳನ್ನು ಸಿದ್ಧಪಡಿಸಲಾಗಿದೆ. 10 ರಿಂದ 15 ಗ್ರಾಂ ಅಡಿಕೆ ಚಹಾ ಪುಡಿ 45 ರಿಂದ 50 ರೂ.ಗೆ ದೊರೆಯುವಂತೆ ಮಾಡುವ ಉದ್ದೇಶವಿದೆ. ಚಹಾ ಸೊಪ್ಪಿನಲ್ಲಿ ಇರುವ ಹಾಗೆಯೇ ಟ್ಯಾನಿನ್ ಎನ್ನುವ ಅಂಶ ಅಡಕೆಯಲ್ಲಿದೆ. ಟ್ಯಾನಿನ್ ಅಂಶವನ್ನು ಉಳಿಸಿಕೊಂಡು ಚಹಾ ಪೌಡರ್ ಸಿದ್ಧಪಡಿಸಲಾಗಿದೆ. ಇದು ಜೀರ್ಣಶಕ್ತಿಗೂ ಒಳ್ಳೆಯದು. ಮಧುಮೇಹ ಉಳ್ಳವರು ಕೂಡ ಬಳಸುವಂತೆ ಪ್ರತ್ಯೇಕ ಪ್ಯಾಕ್ ಗಳಲ್ಲಿ ಅರೇಕಾ ಟೀ ಸಿದ್ಧಪಡಿಸಲಾಗಿದೆ.
ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಲು ಕ್ಯಾಂಪ್ಕೋ ಮುಂದೆ ಬಂದಿದೆ. ಶಿವಮೊಗ್ಗದ ಮ್ಯಾಮ್ಕೋಸ್ ಕೂಡ ಅರೆಕಾ ಚಹಾ ಮಾರುಕಟ್ಟೆಗೆ ಪರಿಚಯಿಸುವ ಉತ್ಸಾಹ ತೋರಿದೆ.