ಎಂಟು ಮಂದಿ ಯೋಧರು ಸಹೋದ್ಯೋಗಿಯ ಪತ್ನಿಯ ಮೇಲೆ ಅತ್ಯಾಚಾರವೆಸಗಿ ಜೈಲು ಪಾಲಾದ ಘಟನೆಯೊಂದು ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಕೈಗಾರಿಕಾ ಪ್ರದೇಶದಲ್ಲಿರುವ ಆರ್.ಬಿ.ಐ ನ ನೋಟು ಮುದ್ರಣ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಎಂಟು ಮಂದಿ ಯೋಧರು ತಮ್ಮ ಹಿರಿಯ ಸಹೋದ್ಯೋಗಿಯಾಗಿರುವ ಯೋಧರ ಪತ್ನಿಯನ್ನು ಹಲವಾರು ಬಾರಿ ಅತ್ಯಾಚಾರ ನಡೆಸಿದ್ದು ಇವರಿಗೆ ಹೆದರಿ ಸಂತ್ರಸ್ತ ಮಹಿಳೆ ಯಾವುದೇ ದೂರು ನೀಡಿರಲಿಲ್ಲ ಎನ್ನಲಾಗಿದೆ.
ಆದರೆ ಆಕೆಯ ಪತಿಗೆ ಇತ್ತೀಚೆಗಷ್ಟೇ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರಕ್ಕೆ ವರ್ಗಾವಣೆಯಾಗಿದ್ದು ಹಾಗಾಗಿ ಶಕ್ತಿ ನಗರ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಳು. ಅಲ್ಲಿನ ಪೊಲೀಸರು ಪ್ರಕರಣವನ್ನು ಮೈಸೂರಿನ ಮೆಟಗಳ್ಳಿ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಮೆಟಗಳ್ಳಿ ಪೊಲೀಸ್ ಠಾಣೆಯ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.