ಬೆಂಗಳೂರು, ಆ.7-ಬಿಬಿಎಂಪಿ ಚುನಾವಣೆಗೆ ಕಾಲ ಸಮೀಪಿಸುತ್ತಿದ್ದಂತೆ ಬಿಜೆಪಿಯಲ್ಲಿನ ಭಿನ್ನಮತ ಭುಗಿಲೇಳುತ್ತಿದೆ. ಟಿಕೆಟ್ ಹಂಚಿಕೆ ನಿರಾಕರಣೆ ಹಿನ್ನೆಲೆಯಲ್ಲಿ ಮತ್ತೆ ಮೂವರು ಮಾಜಿ ಬಿಬಿಎಂಪಿ ಸದಸ್ಯರು ಬಿಜೆಪಿಗೆ ಗುಡ್‌ಬೈ ಹೇಳಿದ್ದಾರೆ. ಅಗ್ರಹಾರ ದಾಸರಹಳ್ಳಿ ವಾರ್ಡ್‌ನ ರೂಪಾದೇವಿ, ರಾಜಗೋಪಾಲ ನಗರ ವಾರ್ಡ್‌ನ ಎಚ್.ಎನ್.ಗಂಗಾಧರ್ ಹಾಗೂ ಬಿಳೇಕಹಳ್ಳಿ ವಾರ್ಡ್‌ನ ರೂಪಾ ರಮೇಶ್ ಪಕ್ಷ ತೊರೆಯಲು ತೀರ್ಮಾನಿಸಿದ್ದಾರೆ. ತಮಗೆ ಟಿಕೆಟ್ ಸಿಗುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ಬಿಜೆಪಿ ತೊರೆದಿರುವ ಅಗ್ರಹಾರ ದಾಸರಹಳ್ಳಿ ವಾರ್ಡ್‌ನ ರೂಪಾದೇವಿ ಈಗಾಗಲೇ ಯಾವುದೇ ಷರತ್ತಿಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಬಿಳೇಕಹಳ್ಳಿ ವಾರ್ಡ್‌ನ ಮಾಜಿ ಸದಸ್ಯೆ ರೂಪಾ ಅವರ ಪತಿ ಪಕ್ಷ ತೊರೆಯುವ ತೀರ್ಮಾನ ಕೈಗೊಳ್ಳುವುದರ ಜತೆಗೆ ಬಿಜೆಪಿಯಲ್ಲಿ ಬಿಬಿಎಂಪಿ ಟಿಕೆಟ್‌ಗಳನ್ನು ಹಣಕ್ಕೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.ಇನ್ನು ರಾಜಗೋಪಾಲನಗರ ವಾರ್ಡ್‌ನ ಮಾಜಿ ಸದಸ್ಯ ಎಚ್.ಎನ್.ಗಂಗಾಧರ್ ತಮಗೆ ಟಿಕೆಟ್ ಸಿಗುವುದಿಲ್ಲ ಎಂಬುದು ಖಚಿತವಾಗುತ್ತಿದ್ದಂತೆ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಕಚೇರಿ ಧ್ವಂಸ ಮಾಡಿದ್ದಾರೆ. ಪಕ್ಷದ ಬ್ಯಾನರ್‌ಗಳನ್ನು ಹರಿದು ಹಾಕಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.ಈ ಸಂಜೆಯೊಂದಿಗೆ ಮಾತನಾಡಿದ ಅವರು, ಇಡೀ ಕ್ಷೇತ್ರದಲ್ಲಿ ಒಂದು ಬಾರಿ ಗೆದ್ದ ಬಿಬಿಎಂಪಿ ಸದಸ್ಯರಿಗೆ ಮತ್ತೊಂದು ಬಾರಿ ಅವಕಾಶ ನೀಡಲು ಪಕ್ಷದ ವರಿಷ್ಠರು ನಿರಾಕರಿಸಿದ್ದಾರೆ. ಅವರ ಉದ್ದೇಶ ಎರಡನೆ ಬಾರಿ ಟಿಕೆಟ್ ನೀಡಿದರೆ ಎಲ್ಲಿ ಅವರು ಬಲಿಷ್ಠರಾಗುತ್ತಾರೋ ಎಂಬ ಭೀತಿ ಅವರನ್ನು ಕಾಡುತ್ತಿದೆ.ನನಗೆ ಮತ್ತೆ ಟಿಕೆಟ್ ನೀಡಿದರೆ ಭವಿಷ್ಯದಲ್ಲಿ ಶಾಸಕರಿಗೆ ಎದುರಾಳಿಯಾಗಬಹುದು
ಎಂಬ ಭೀತಿಯಿಂದ ಬಿಜೆಪಿಯವರು ತಮಗೆ ಟಿಕೆಟ್ ನೀಡಲು ನಿರಾಕರಿಸಿದ್ದಾರೆ. ಕಳೆದ ಬಾರಿ ನನ್ನ ವಿರುದ್ಧ ಸ್ಪರ್ಧಿಸಿದ್ದ ಬಂಡಾಯ ಅಭ್ಯರ್ಥಿಗೆ ಟಿಕೆಟ್ ನೀಡಿದ್ದಾರೆ. ಇದರಿಂದ ನನಗೆ ಮುಜುಗರವಾಗಿದ್ದು, ಬಿಜೆಪಿ ಪಕ್ಷದಲ್ಲಿ ಮುಂದುವರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.ಇಂದು ಸಂಜೆ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಭೆ ಕರೆದು ಚರ್ಚಿಸಿ ಮುಂದೆ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸುತ್ತೇನೆ ಎಂದರು.
ಈಗಾಗಲೇ ಹಂಪಿನಗರ ವಾರ್ಡ್‌ನ ಚಂದ್ರಶೇಖರಯ್ಯ ಹಾಗೂ ಚಂದ್ರಾ ಬಡಾವಣೆ ವಾರ್ಡ್‌ನ ಮಾಲತಿ ವೆಂಕಟಸ್ವಾಮಿ ಪಕ್ಷ ತೊರೆದಿದ್ದು, ಇದೀಗ ಮತ್ತೆ ಮೂವರು ಬಿಜೆಪಿ ಬಿಡಲು ತೀರ್ಮಾನಿಸಿದ್ದಾರೆ.ಮೊದಲ ಕಂತಿನಲ್ಲಿ 96 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆ ಬಿಜೆಪಿಯಲ್ಲಿನ ಭಿನ್ನಮತ ಭುಗಿಲೆದ್ದಿದ್ದು, ಐದಕ್ಕೂ ಹೆಚ್ಚು ಬಿಬಿಎಂಪಿ ಸದಸ್ಯರು ಪಕ್ಷ ಬಿಡಲು ತೀರ್ಮಾನಿಸಿದ್ದಾರೆ. ಇನ್ನೂ ಕೆಲವರು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಎರಡನೆ ಹಾಗೂ ಅಂತಿಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದರೆ ಮತ್ತಷ್ಟು ಮಾಜಿ ಸದಸ್ಯರು ಹಾಗೂ ಮುಖಂಡರುಗಳು ಪಕ್ಷ ತೊರೆಯುವುದು ಗ್ಯಾರಂಟಿ. ಹೀಗಾಗಿಯೇ ಎರಡನೆ ಪಟ್ಟಿ ಬಿಡುಗಡೆಗೆ ಬಿಜೆಪಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನ ಮೇಲೆ ಹಿಡಿತ ಸಾಧಿಸಲು ಆ ಪಕ್ಷದ ಪ್ರಮುಖ ನಾಯಕರ ನಡುವಿನ ಮುಸುಕಿನ ಗುದ್ದಾಟವೇ ಇಷ್ಟೆಲ್ಲ ರಾದ್ಧಾಂತಗಳಿಗೆ ಕಾರಣ ಎನ್ನಲಾಗಿದೆ.