ಬೆಂಗಳೂರು, ಆ.7-ಅಭದ್ರತೆಯಿಂದ ನರಳುತ್ತಿರುವ ಕಾಂಗ್ರೆಸ್ ಬಿಬಿಎಂಪಿಯ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲು ಹಿಂದೆ-ಮುಂದೆ ನೋಡುತ್ತಿದೆ.ನಿನ್ನೆ ಮಧ್ಯಾಹ್ನದಿಂದ ಆರಂಭವಾಗಿರುವ ಅಭ್ಯರ್ಥಿಗಳ ಆಯ್ಕೆ ಕಸರತ್ತು ಈವರೆಗೂ ಅಂತಿಮಗೊಂಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ನಗರ ಹೊರವಲಯದ ರೆಸಾರ್ಟ್‌ನಲ್ಲಿ ಇಂದು ಅಭ್ಯರ್ಥಿಗಳ ಆಯ್ಕೆಗೆ ಸಭೆ ಮುಂದುವರೆದಿತ್ತು.
ನಿನ್ನೆ ಮಧ್ಯಾಹ್ನ ಆರಂಭವಾದ ಸಭೆ
ತಡರಾತ್ರಿಯವರೆಗೂ ಸುಮಾರು 12 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಸಂಭವನೀಯ ಪಟ್ಟಿ ಪರಿಶೀಲಿಸಿದೆ.ಆಯಾ ಕ್ಷೇತ್ರದ ಶಾಸಕರು, ಕಳೆದ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳ ಸಮ್ಮುಖದಲ್ಲಿ ಕ್ಷೇತ್ರ ಉಸ್ತುವಾರಿ ಸಚಿವರು, ನಗರ ಜಿಲ್ಲಾ ಸಚಿವರುಗಳ ಜತೆ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಚರ್ಚೆ ನಡೆಸಿದ್ದಾರೆ.ನಿನ್ನೆ ಸುಮಾರು 80 ವಾರ್ಡ್‌ಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಯಿತು. ಇನ್ನು 118 ವಾರ್ಡ್ ಅಭ್ಯರ್ಥಿಗಳ ಆಯ್ಕೆಗೆ ಇಂದು ಸಭೆ ನಡೆಯುತ್ತಿದೆ.ಆಯ್ಕೆಯಾದ ಅಭ್ಯರ್ಥಿಗಳಿಗೆ ಅವರ ಗಾಡ್‌ಫಾದರ್‌ಗಳು ಈಗಾಗಲೇ ಕರೆ ಮಾಡಿ ಟಿಕೆಟ್ ಖಚಿತವಾಗಿದ್ದು, ಕೆಲಸ ಆರಂಭಿಸುವಂತೆ ಸೂಚನೆ ನೀಡಿದ್ದಾರೆ. ಆದರೂ ಅಧಿಕೃತಪಟ್ಟಿ ಪ್ರಕಟಗೊಳ್ಳುವವರೆಗೂ ಅಭ್ಯರ್ಥಿಗಳಿಗೆ ನೆಮ್ಮದಿ ಇಲ್ಲದಂತಾಗಿದೆ.ಗೆಲುವು ಹಾಗೂ ಸಾಮಾಜಿಕ ನ್ಯಾಯ ಆಧಾರವಾಗಿಟ್ಟುಕೊಂಡು ಟಿಕೆಟ್ ಹಂಚಿಕ ಮಾಡಲಾಗುತ್ತಿದೆ. ಕ್ರಿಮಿನಲ್‌ಗಳಿಗೆ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರು ಹಲವಾರು ಬಾರಿ ಹೇಳಿದ್ದರು.ಆದರೆ ಒತ್ತಡಕ್ಕೆ ಮಣಿದು ಮತ್ತೆ ಅಂಥವರಿಗೇ ಮಣೆ ಹಾಕಲಾಗಿದೆ. ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ ಬೆನ್ನಲ್ಲೇ ಬಂಡಾಯ
ಚಟುವಟಿಕೆಗಳು ಆರಂಭವಾಗುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್ ಅಭದ್ರತೆಯಿಂದ ನರಳುತ್ತಿದೆ.ಜೆಡಿಎಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳು ಈಗಾಗಲೇ ಬಿ ಫಾರಂ ಹಂಚಿಕೆ ಆರಂಭಿಸಿದ್ದರೆ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ತಿಣುಕಾಡುತ್ತಿದೆ.ಗುಪ್ತಚರ ಇಲಾಖೆ ವರದಿಯಂತೆ ಕಾಂಗ್ರೆಸ್‌ಗೆ ನಿರೀಕ್ಷಿತ ಸ್ಥಾನ ಸಿಗುವುದಿಲ್ಲ ಎಂಬುದು ಹಿರಿಯ ನಾಯಕರನ್ನು ಚಿಂತೆಗೀಡು ಮಾಡಿದೆ.ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ಬಿಬಿಎಂಪಿ ಚುನಾವಣೆ ಗೆಲ್ಲದಿದ್ದರೆ ತಲೆ ದಂಡ ಎಂದು ಎಚ್ಚರಿಕೆ ನೀಡಿರುವುದು ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರ ನಿದ್ದೆಗೆಡಿಸಿದೆ.ಹೀಗಾಗಿ ಪ್ರತಿ ವಾರ್ಡ್‌ನ ಅಭ್ಯರ್ಥಿಗಳ ಆಯ್ಕೆಗೆ ಎಚ್ಚರಿಕೆ ವಹಿಸಲಾಗುತ್ತಿದೆ. ಲೋಕಸಭೆ, ವಿಧಾನಸಭೆಯಂಥ ಪ್ರಮುಖ ಚುನಾವಣೆಗಳಿಗೆ ಟಿಕೆಟ್ ಹಂಚಿಕೆ ಮಾಡಲು ಹೈಕಮಾಂಡ್ ಅನುಮತಿ ಬೇಕು. ಹಾಗಾಗಿ ಕೊನೆ ಕ್ಷಣದವರೆಗೂ ವಿಳಂಬವಾಗುತ್ತದೆ.ಆದರೆ ಬಿಬಿಎಂಪಿಯಂಥ ಸ್ಥಳೀಯ ಸಂಸ್ಥೆ ಚುನಾವಣೆಗೆ ರಾಜ್ಯಮಟ್ಟದ ನಾಯಕರುಗಳೇ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿರುವಾಗ ಇಲ್ಲಿಯೂ ಕೂಡ ಮೀನಾಮೇಷ ಎಣಿಸುತ್ತಿರುವುದು ಏಕೆ ಎಂಬ ಪ್ರಶ್ನೆಯನ್ನು ಕಾರ್ಯಕರ್ತರು ನಾಯಕರ ಮುಂದಿಟ್ಟಿದ್ದಾರೆ.
ಇಂದು ಕೊನೆ ಸುತ್ತಿನ ಮಾತುಕತೆ ನಡೆಯುತ್ತಿದ್ದು, ಸಂಜೆ ವೇಳೆಗೆ ಎಲ್ಲ ವಾರ್ಡ್‌ಗಳ ಅಭ್ಯರ್ಥಿಗಳನ್ನು ಅಖೈರುಗೊಳಿಸಿ ನಾಳೆ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.