ಬೀದರ್: ಮಕ್ಕಳನ್ನು ತಾಯಿಯ ಹೊರತಾಗಿ ಬೇರೆಯವರು ಕಾಳಜಿಯಿಂದ ನೋಡಿಕೊಳ್ಳುವುದು ಸಾಧ್ಯವಿಲ್ಲ ಎಂಬ ಮಾತು ಜನಜನಿತ. ಮಕ್ಕಳಿಗೆ ಯಾರು ಮೋಸ ಮಾಡಿದರೂ ತಾಯಿ ಮೋಸ ಮಾಡಲಾರಳು. ಆದರೆ ಇಲ್ಲೊಬ್ಬ ಮಹಾತಾಯಿ ಮದ್ಯ ಸೇವಿಸಲು ಹಣವಿಲ್ಲದ ಕಾರಣ ಮಕ್ಕಳನ್ನೇ ಮಾರಾಟ ಮಾಡಲು ಮುಂದಾದ ಘಟನೆ ವರದಿಯಾಗಿದೆ.
ಸೇಡಂ ನಿವಾಸಿ ಲಕ್ಷ್ಮಿ ಎಂಬಾಕೆ ಎರಡು ವರ್ಷದ ಹೆಣ್ಣುಮಗು, ನಾಲ್ಕು ತಿಂಗಳ ಗಂಡು ಮಗುವನ್ನು ಮಾರಾಟಕ್ಕೆ ಯತ್ನಿಸಿದ ಮಹಾತಾಯಿ. ಇಲ್ಲಿನ ರೈಲು ನಿಲ್ದಾಣದ ಬಳಿ ಬಾರ್ ಒಂದರ ಎದುರು ಈಕೆ ಮಕ್ಕಳನ್ನು ಕರೆದುಕೊಂಡು ಬಂದಿದ್ದಾಳೆ.
ಮೊದಲೇ ಮತ್ತಿನಲ್ಲಿದ್ದ ಆಕೆ ಮದ್ಯ ಸೇವಿಸಲು 30-40 ರೂ. ಕೊಡಿ. ಇಲ್ಲವೇ ಒಂದು ಕ್ವಾರ್ಟರ್ ಮದ್ಯ ಕೊಡಿಸಿ. ಅದರ ಬದಲಿಗೆ ಈ ಮಕ್ಕಳನ್ನು ನೀವು ಬೇಕಾದರೆ ಕರೆದೊಯ್ಯಬಹುದು ಎಂದೆಲ್ಲಾ ಹೇಳಿದ್ದಾಳೆ.
ಇಷ್ಟಕ್ಕೆ ಆಕೆ ಸುಮ್ಮನಾಗಿಲ್ಲ. ಕುಡಿದ ಮತ್ತಿನಲ್ಲಿ ಮಕ್ಕಳನ್ನು ಥಳಿಸಿದ್ದಾಳೆ. ಇದನ್ನು ಕಂಡ ಅಲ್ಲೇ ಕೆಲಸ ಮಾಡುವ ಮಹಿಳೆಯೊಬ್ಬರು ಮಕ್ಕಳನ್ನು ರಕ್ಷಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.