ಬೆಂಗಳೂರು, ಆ.8: ಒಂದಿಲ್ಲೊಂದು ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸಿ ಬಂಧಿಸುವ ಹುನ್ನಾರವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಸಾಯಿ ವೆಂಕಟೇಶ್ವರ ಗಣಿ ಕಂಪನಿಗೆ ಪರವಾನಗಿ ನೀಡಿದ ಪ್ರಕರಣದಲ್ಲಿ ಲೋಕಾಯುಕ್ತ ವಿಶೇಷ ತಂಡ ನನ್ನನ್ನು ಬಂಧಿಸಿರಲಿಲ್ಲ. ಬದಲಾಗಿ ತಮ್ಮನ್ನು ಆಗಸ್ಟ್ 5 ರಂದು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿತ್ತು. ಇದನ್ನೇ ಕುಮಾರಸ್ವಾಮಿ ಅವರನ್ನು ಬಂಧಿಸಲಾಗಿದೆ ಎಂದು ಮಾಧ್ಯಮದ ಮೂಲಕ ಬಿಂಬಿಸಿರುವುದು ಸರಿಯಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ರಾಜ್ಯ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡು ತಮ್ಮನ್ನು ರಾಜ್ಯದ ಜನರ ಮುಂದೆ ಸಂಶಯ ಬರುವಂತೆ ನೋಡಿಕೊಳ್ಳುವ ಹುನ್ನಾರ ನಡೆಸಿ ಜನರಲ್ಲಿರುವ ವಿಶ್ವಾಸ ನಾಶಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.
ಬಿಬಿಎಂಪಿ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳನ್ನು ಜೆಡಿಎಸ್ ಪಕ್ಷ ಹಿಂದಿಕ್ಕಲಿದೆ ಎನ್ನುವ ಆತಂಕದಿಂದ ತಮ್ಮನ್ನು ಒಂದಿಲ್ಲೊಂದು ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ದೂರಿದರು.
ಸಾಯಿ ವೆಂಕಟೇಶ್ವರ ಗಣಿ ಕಂಪನಿಗೆ ಪರವಾನಗಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ವಿಚಾರಣೆಗೆ ಹಾಜರಾಗುವಂತೆ ತಮಗೆ ನೋಟೀಸ್ ನೀಡಿದ್ದು, ಅದರಂತೆ ವಿಚಾರಣೆಗೆ ಹಾಜರಾಗಿದ್ದೆ. ಅದೇ ವೇಳೆ ವಕೀಲರ ಸಲಹೆಯಂತೆ ಜಾಮೀನು ಅರ್ಜಿಯನ್ನು ತೆಗೆದುಕೊಂಡು ಹೋಗಿದ್ದೆ. ಮೊದಮೊದಲು ನಿಮ್ಮನ್ನು ವಿಚಾರಣೆಗೆ ಕರೆದಿರುವುದು ಜಾಮೀನು ಅರ್ಜಿ ಏಕೆ ಎಂದು ಹೇಳಿದ ಅಧಿಕಾರಿಗಳು, ಆ ಬಳಿಕ ಹೇಗೂ ಜಾಮೀನು ತಂದಿದ್ದೀರಿ ಕೊಡಿ ಎಂದು ಪಡೆದರು ಎಂದರು.
ಲೋಕಾಯುಕ್ತ ವಿಶೇಷ ತನಿಖಾ ದಳದ ಮುಖ್ಯಸ್ಥ ಚರಣ್ ರೆಡ್ಡಿ ಅವರಿಗೆ ದೂರವಾಣಿ ಕರೆ ಮಾಡಿ ವಿಚಾರಿಸಿದಾಗ ಅವರು, ಜಾಮೀನು ಅರ್ಜಿಯನ್ನು ನೀಡಿದ್ದರು ಎನ್ನುವ ಬಗ್ಗೆ ಮಾಹಿತಿ ನೀಡಿದ್ದೇನೆಯೇ ಹೊರತು ನಿಮ್ಮನ್ನು ಬಂಧಿಸಲಾಗಿದೆ ಎಂದು ಹೇಳಿಲ್ಲ. ಇದನ್ನೇ ಮಾಧ್ಯಮವೊಂದು ತಪ್ಪಾಗಿ ಅರ್ಥೈಸಿಕೊಂಡು ಕುಮಾರಸ್ವಾಮಿ ಅವರನ್ನು ಬಂಧಿಸಿದೆ ಎಂದು ಸುದ್ದಿ ಪ್ರಕಟಿಸಿದೆ ಎಂದು ದೂರಿದರು.
ತಾವು ಅಧಿಕಾರದಲ್ಲಿದ್ದ ಅವಧಿಯಲ್ಲಿ ಅಕ್ರಮವಾಗಿ ಏನನ್ನೂ ಮಾಡಿಲ್ಲ. ಹೀಗಿದ್ದರೂ ತಮ್ಮನ್ನು ಬಲಿಪಶು ಮಾಡಲಾಗುತ್ತಿದೆ. ಜನರ ಒಳಿತಿಗಾಗಿ ನನ್ನ ಮೇಲೆ 10 ಎಫ್‌ಐಆರ್ ಹಾಕಿದರೂ ನಾನೇನೂ ಹೆದರುವುದಿಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರದ ವಿವಿಧ ಹಗರಣಗಳಾದ ಒಂದಂಕಿ ಲಾಟರಿ, ಡಿ.ಕೆ. ರವಿ ಪ್ರಕರಣ, ಮರಳು ದಂಧೆ, ಲೋಕಾಯುಕ್ತ ಭ್ರಷ್ಟಾಚಾರ ಸೇರಿದಂತೆ ವಿವಿಧ ವಿಷಯಗಳನ್ನು ಜನರ ಮುಂದಿಡುತ್ತಿದ್ದು, ಇದರಿಂದ ಇರಿಸುಮುರಿಸಾಗಿರುವ ರಾಜ್ಯ ಸರ್ಕಾರ ತಮ್ಮ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದೆ ಎಂದು ದೂರಿದರು.
ಲೋಕಾಯುಕ್ತ ಅಧಿಕಾರಿಗಳ ಮೂಲಕ ಆಡಳಿತ ನಡೆಸುತ್ತಿರುವವರು ತಮ್ಮನ್ನು ಕನಿಷ್ಟ 2-3 ದಿನಗಳ ಮಟ್ಟಿಗಾದರೂ ಜೈಲಿಗೆ ಹಾಕುವ ಹುನ್ನಾರ ನಡೆಸಿದ್ದಾರೆ. ಈ ಬಗ್ಗೆ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ ಎಂದು ಹೇಳಿದ ಅವರು ರಾಜ್ಯ ಸರ್ಕಾರದ ಬೆದರಿಕೆಗೆ ಬಗ್ಗುವುದಿಲ್ಲ. ನಾನೇನೂ ತಪ್ಪು ಮಾಡಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಶಂಪೂರ್ ಉಪಸ್ಥಿತರಿದ್ದರು.