ಕರ್ನಾಟಕ

ತನ್ನ ರಕ್ಷಣೆಗೆ ಹೆತ್ತವರನ್ನೇ ಕೂಡಿ ಹಾಕಿ ಬೆಂಕಿ ಹಚ್ಚಲು ಯತ್ನಿಸಿ ಪೊಲೀಸರಿಗೆ ಸವಾಲಾಗಿದ್ದವನ ಬಂಧನ..!

Pinterest LinkedIn Tumblr

fireತುಮಕೂರು,ಆ.8- ಪೊಲೀಸರಿಂದ ತಪ್ಪಿಸಿ ಕೊಳ್ಳುವ ಸಲುವಾಗಿ ತನ್ನ ಕುಟುಂಬದವರನ್ನೇ ಕೊಠಡಿ ಯೊಂದರಲ್ಲಿ ಕೂಡಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವುದಾಗಿ ಪೊಲೀಸರಿಗೇ ಸವಾಲು ಹಾಕಿದ್ದ ವ್ಯಕ್ತಿಯ ಮನವೊಲಿಸುವಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಯಶಸ್ವಿಯಾಗುವ ಮೂಲಕ ಈ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ. ಪೊಲೀಸರು ನನಗೆ ನ್ಯಾಯ ದೊರಕಿಸಿಕೊಡುತ್ತಿಲ್ಲ. ಮಾನಸಿಕವಾಗಿ ಬೆಳ್ಳಾವಿ ಮತ್ತು ಚೇಳೂರು ಪೊಲೀಸರು ಕಿರುಕುಳ ನೀಡುತ್ತಿದ್ದಾರೆ.  ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು  ಬರಬೇಕು. ಇಲ್ಲದಿದ್ದರೆ ನನ್ನ ಕುಟುಂಬದ ಎಲ್ಲರಿಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದ ಪ್ರಕರಣ ಇದೀಗ ಸುಖಾಂತ್ಯಗೊಂಡಿದೆ.

ಘಟನೆ ವಿವರ:
ಬೆಳ್ಳಾವಿ ಮತ್ತು ಚೇಳೂರು ವ್ಯಾಪ್ತಿ ಗಡಿಭಾಗದಲ್ಲಿನ ಬೋರಗೊಂಡನಹಳ್ಳಿ ಗ್ರಾಮದ ದೊಡ್ಡಯ್ಯ ಎಂಬುವರ ಮಗ ರಂಗಸ್ವಾಮಿ(40) ಎಂಬಾತನೇ  ಪೊಲೀಸರಿಗೆ ಸವಾಲು ಹಾಕಿದ್ದ ಭೂಪ.
ಈತನ ಮೇಲೆ ಚೇಳೂರು ಮತ್ತು ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ಹಲವಾರು ದೂರುಗಳಿವೆ. ದೂರಿನ ಸಂಬಂಧ ಆಗಾಗ್ಗೆ ಈತನನ್ನು ಪೊಲೀಸರು ವಿಚಾರಣೆ ಮಾಡಲು ಠಾಣೆಗೆ ಕರೆದೊಯ್ಯುತ್ತಿದ್ದರು.
ಈ ನಡುವೆ ಅದೇ ಗ್ರಾಮದ ಮಹಿಳೆಯೊಬ್ಬರ ಜೊತೆ ಈತ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಆಕೆಯೊಂದಿಗೆ ಹಣಕಾಸು ವ್ಯವಹಾರ ಮಾಡಿಕೊಂಡಿದ್ದ.  ಇತ್ತೀಚೆಗೆ ಇವರಿಬ್ಬರ ನಡುವೆ ಯಾವುದೋ ವಿಚಾರವಾಗಿ ಜಗಳ ನಡೆದಿದ್ದರಿಂದ ರಂಗಸ್ವಾಮಿ ಆಕೆ ಮನೆ ಮೇಲೆ ಕಲ್ಲು ತೂರಿ ದಾಂಧಲೆ ನಡೆಸಿದ್ದನು.  ಈ ಸಂಬಂಧ ಬೆಳ್ಳಾವಿ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಕೆಲ ದಿನಗಳ ಹಿಂದೆ ಬೆಳ್ಳಾವಿ ಸಮೀಪದ ಸುಗುಣ ಕೋಳಿ ಕಾರ್ಖಾನೆ ಬಳಿ ರಂಗಸ್ವಾಮಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ, ಅತಿಯಾದ ಮಳೆ ಬೀಳುತ್ತಿದ್ದ ಕಾರಣ, ರಸ್ತೆಯಲ್ಲಿ ಗುಂಡಿ ಇರುವುದು ತಿಳಿಯದೆ ಗುಂಡಿಯಲ್ಲಿ ಬಿದ್ದು ಗಾಯಗೊಂಡಿದ್ದನು.   ತನಗೆ ಅಪಘಾತ ಮಾಡಿ ಗುಂಡಿಯಲ್ಲಿ ಬೀಳಿಸಲಾಗಿದೆ ಎಂದು ರಂಗಸ್ವಾಮಿ  ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾದ ಮಹಿಳೆಯ ಗಂಡನ ವಿರುದ್ಧ ಚೇಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದನು.  ಈ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಾಗ ರಂಗಸ್ವಾಮಿ ನೀಡಿರುವ ದೂರು ಸುಳ್ಳು ಎಂಬುದು ಗೊತ್ತಾಗಿದೆ. ತದನಂತರ ಆತನನ್ನು ಠಾಣೆಗೆ ಕರೆದು ಛೀಮಾರಿ ಹಾಕಿ ಕಳುಹಿಸಿದ್ದರು. ಇದರಿಂದ ಅವಮಾನಿತನಾದಂತೆ ವರ್ತಿಸಿದ ರಂಗಸ್ವಾಮಿ ಮತ್ತೆ ಮಹಿಳೆಗೆ ದೂರವಾಣಿ ಕರೆ ಮಾಡಿ ಅಶ್ಲೀಲವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾನೆ.  ಈ ಸಂಬಂಧ ಆ ಮಹಿಳೆ ಪೊಲೀಸರಿಗೆ ರಂಗಸ್ವಾಮಿ ವಿರುದ್ಧ ಕಿರುಕುಳ ಆರೋಪ ದೂರು ನೀಡಿದ್ದರು.

ಇದರನ್ವಯ ನಿನ್ನೆ ಬೆಳಗ್ಗೆ ಪೊಲೀಸರು ಠಾಣೆಗೆ  ಕರೆತರಲು ಆತನ ಮನೆ ಬಳಿ ಹೋದಾಗ ಮನೆಯಲ್ಲಿದ್ದ ತಂದೆ, ತಾಯಿ ಹಾಗೂ ಮಗನನ್ನು ಕೊಠಡಿಯಲ್ಲಿ  ಕೂಡಿ ಹಾಕಿ ಪೆಟ್ರೋಲ್ ಸುರಿದಿದ್ದಾನೆ.  ಇದರಿಂದ ಗಾಬರಿಯಾದ ರಂಗಸ್ವಾಮಿ ಪತ್ನಿ ಚಂದ್ರಮ್ಮ  ಮನೆಯಿಂದ ಹೊರಗೆ ಬಂದಿದ್ದಾಳೆ. ಈ ವೇಳೆ ರಂಗಸ್ವಾಮಿ ಬಾಗಿಲು ಹಾಕಿಕೊಂಡು ಕಿಟಕಿ ಮೂಲಕ ಮನೆ ಬಳಿ ಬಂದ ಪೊಲೀಸರಿಗೆ ಧಮಕಿ ಹಾಕಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಬರಲೇಬೇಕೆಂದು ಪಟ್ಟು  ಹಿಡಿದಿದ್ದಾನೆ.

ಈತನ ವರ್ತನೆಯನ್ನು ಸ್ಥಳದಲ್ಲಿದ್ದ ಗಮನಿಸಿದ ಗುಬ್ಬಿ ವೃತ್ತ ನಿರೀಕ್ಷಕ ವೆಂಕಟರಮಣ, ಚೇಳೂರು ಠಾಣೆ ಎಸ್‌ಐ ಈರಣ್ಣ , ಬೆಳ್ಳಾವಿ ಠಾಣೆ ಸಬ್‌ಇನ್‌ಸ್ಪೆಕ್ಟರ್ ಶಿವಣ್ಣ ಆತನ ಮನವೊಲಿಸುವಲ್ಲಿ ಮುಂದಾದರೂ ಕೇಳಲಿಲ್ಲ.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು  ಸ್ಥಳಕ್ಕೆ ಬರಬೇಕು ನನಗೆ ಆಗಾಗ್ಗೆ ಠಾಣೆಗೆ ಕರೆದೊಯ್ಯುವುದಿಲ್ಲ ಎಂದು ಬರವಣಿಗೆಯಲ್ಲಿ ಬರೆದುಕೊಡಬೇಕೆಂದು ಬೇಡಿಕೆ ಇಟ್ಟಿದ್ದಾನೆ.  ಸುದ್ದಿ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ , ತಿಲಕ್ ಪಾರ್ಕ್ ಡಿವೈಎಸ್ಪಿ ಚಿದಾನಂದ್, ವೃತ್ತ ನಿರೀಕ್ಷಕ ಬಾಳೇಗೌಡ, ತುಮಕೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಸೇರಿದಂತೆ ಸುಮಾರು 30 ಮಂದಿ ಪೊಲೀಸರು ರಾತ್ರಿ 10 ಗಂಟೆ ಸಮಯದಲ್ಲಿ ಸ್ಥಳಕ್ಕೆ ದೌಡಾಯಿಸಿ ರಂಗಸ್ವಾಮಿಯೊಂದಿಗೆ ಮಾತುಕತೆ ನಡೆಸಿ ಆತನನ್ನು ಸಮಾಧಾನಪಡಿಸಿ ಬಾಗಿಲು ತೆಗೆಸುವಲ್ಲಿ ಯಶಸ್ವಿಯಾಗಿ ಕುಟುಂಬದವರನ್ನು ಸಾವಿನಿಂದ ರಕ್ಷಿಸಿ ರಂಗಸ್ವಾಮಿಯನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.  ಒಟ್ಟಾರೆ ರಂಗಸ್ವಾಮಿಯ ನಾಟಕೀಯ ಪ್ರಕರಣ ಸುಖಾಂತ್ಯಗೊಂಡು ಕುಟುಂಬದವರ ಪ್ರಾಣ ರಕ್ಷಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Write A Comment