ಬೆಂಗಳೂರು,ಆ.8-ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಎಷ್ಟೇ ಕ್ಯಾತೆ ತೆಗೆದರೂ ಲೆಕ್ಕಿಸದೆ ಯೋಜನೆಯನ್ನು ಪೂರ್ಣಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಪಥ ಮಾಡಿದ್ದಾರೆ. ವಿಧಾನಸೌಧದಲ್ಲಿಂದು ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ಅವರ 15ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ಸರ್ಕಾರ ರಾಜಕೀಯ ಕಾರಣಕ್ಕಾಗಿ ಕ್ಯಾತೆ ತೆಗೆಯುತ್ತಿದೆ. ರಾಜ್ಯ ಸರ್ಕಾರ ಇದಕ್ಕೆ ಸೊಪ್ಪು ಹಾಕುವುದಿಲ್ಲ, ಯೋಜನೆಯನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲು ಬದ್ಧವಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಮೇಕೆದಾಟು ಯೋಜನೆಯಿಂದ ಯಾವುದೇ ನಿಯಮ ಉಲ್ಲಂಘನೆಯಾಗುವುದಿಲ್ಲ. ಅದಕ್ಕೆ ಕಾನೂನಿನ ತೊಡಕುಗಳು ಇಲ್ಲ, ಕಾವೇರಿ ನ್ಯಾಯಾಧೀಕರಣ ನೀಡಿರುವ ತೀರ್ಪು ಉಲ್ಲಂಘನೆಯಾಗುವುದಿಲ್ಲ. ಅನಗತ್ಯವಾಗಿ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ರಾಜಕೀಯಕ್ಕೋಸ್ಕರ ಕ್ಯಾತೆ ತೆಗೆಯುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ನಿನ್ನೆ ತಮಿಳುನಾಡು ಪ್ರವಾಸದಲ್ಲಿದ್ದ ನರೇಂದ್ರ ಮೋದಿ ಅವರನ್ನು ಭೋಜನಕೂಟಕ್ಕೆ ಆಹ್ವಾನಿಸಿದ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಮಾತುಕತೆಯ ನಡುವೆ ಕರ್ನಾಟಕದ ಮೇಕದಾಟು ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಬಾರದು ಎಂದು ದೂರು ನೀಡಿದ್ದಾರೆ. ಇದು ಕನ್ನಡಿಗರನ್ನು ಆತಂಕಕ್ಕೀಡು ಮಾಡಿದೆ. ಯೋಜನೆಯ ಸಮಗ್ರ ವರದಿ ಸಿದ್ಧಗೊಳ್ಳುತ್ತಿರುವ ಹಂತದಲ್ಲಿ ತಮಿಳುನಾಡಿನ ಖ್ಯಾತೆ ರಾಜಕಾರಣ ರಾಜ್ಯದ ಜನರನ್ನು ತಾಳ್ಮೆ ಕೆಡಿಸಿದೆ ಎಂದರು.