ಬೆಂಗಳೂರು, ಆ.8- ಬಿಬಿಎಂಪಿ ಚುನಾವಣೆ ಟಿಕೆಟ್ ಹಂಚಿಕೆ ಗೊಂದಲ ತಾರಕಕ್ಕೇರಿದೆ. ಒಮ್ಮತದ ಅಭ್ಯರ್ಥಿಗಳ ಆಯ್ಕೆ ಮಾಡಲಾರದೆ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಉಂಟಾಗಿರುವ ಭಿನ್ನಮತ ಬೀದಿಗೆ ಬಂದಿದೆ.
ತಮ್ಮ ಬೆಂಬಲಿತ ಅಭ್ಯರ್ಥಿಗಳಿಗೆ ಟಿಕೆಟ್ ಕೊಡಿಸಲು ನಾಯಕರು ನಡೆಸಿದ ಪ್ರಯತ್ನ ವಿಫಲವಾಗಿರುವ ಹಿನ್ನೆಲೆಯಲ್ಲಿ ಅಪಸ್ವರವೆದ್ದು ಕಾಂಗ್ರೆಸ್, ಬಿಜೆಪಿ ನಾಯಕರುಗಳಲ್ಲಿ ಸಂಘರ್ಷವೇರ್ಪಟ್ಟಿರುವುದು ಕಂಡುಬಂದಿದೆ.
ಕಾಂಗ್ರೆಸ್ ಪಕ್ಷ ಒಂದು ವಾರದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಡೆಸಿರುವ ಕಸರತ್ತು ಈವರೆಗೂ ಮುಗಿದಿಲ್ಲ. 198 ಸ್ಥಾನಗಳಿಗೆ 850ಕ್ಕೂ ಹೆಚ್ಚು ಆಕಾಂಕ್ಷಿಗಳಿಂದ ಅರ್ಜಿ ಬಂದಿದ್ದು, ಎಲ್ಲರ ಅಭಿಪ್ರಾಯ ಕ್ರೋಢೀಕರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ನಿನ್ನೆ ಫೈನಲ್ ಟಚ್ ನೀಡಲು ನಡೆಸಿದ ಸಭೆ ವಿಫಲವಾಗಿದೆ.
ಸಿದ್ದು-ಪರಮೇಶ್ವರ್ ಅವರ ಪಟ್ಟಿ ಒಂದಕ್ಕೊಂದು ತಾಳೆಯಾಗದೆ ಅಭ್ಯರ್ಥಿಗಳ ಆಯ್ಕೆ ಮತ್ತೆ ಮುಂದೆ ಹೋಗಿದ್ದು, ಆಕಾಂಕ್ಷಿಗಳಲ್ಲಿ ಗೊಂದಲ ಹೆಚ್ಚಾಗಿದೆ. ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟಿಸುವ ಮುನ್ನವೇ ಕಾಂಗ್ರೆಸ್ ಪಕ್ಷದಲ್ಲಿ ಪ್ರತಿಭಟನೆ, ಧರಣಿ, ಆಕ್ರೋಶ ಭುಗಿಲೆದ್ದಿದೆ. ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಕಾರ್ಪೊರೇಟರ್‌ಗಳಿಗೆ ಟಿಕೆಟ್ ನೀಡಬಾರದೆಂದು ಕಾಂಗ್ರೆಸ್ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷರ ನಿವಾಸದೆದುರು ಇಂದು ಭಾರೀ ಪ್ರತಿಭಟನೆ ನಡೆಸಿದರು. ಪಾಲಿಕೆ ಮಾಜಿ ಸದಸ್ಯರಾದ ಸಂಪತ್‌ರಾಜು, ದೇವಿಕಾರಾಣಿ, ಎ.ಆರ್.ಜಾಕಿರ್ ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದೆಂದು ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿರುವುದು ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಉಂಟುಮಾಡಿದೆ.
ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಹೈಕಮಾಂಡ್ ಇವರಿಗೆ ನೋಟಿಸ್ ನೀಡಿತ್ತು. ಮತ್ತೆ ಇವರಿಗೇ ಟಿಕೆಟ್ ನೀಡಲು ಪಕ್ಷ ಮುಂದಾಗಿರುವುದು ಕೇಳಿಬಂದಿರುವುದರಿಂದ ಅಸಮಾಧಾನಗೊಂಡ ಕಾರ್ಯಕರ್ತರು ಯಾವುದೇ ಕಾರಣಕ್ಕೂ ಮಾಜಿ ಕಾರ್ಪೊರೇಟರ್‌ಗಳಿಗೆ ಟಿಕೆಟ್ ನೀಡಬಾರದು. ಹೊಸಬರಿಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದ್ದಾರೆ. ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸದಸ್ಯ ಟಿ.ಮಲ್ಲೇಶ್ ಅವರು ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಬಹಿರಂಗವಾಗಿಯೇ ಸಮರ ಸಾರಿದ್ದಾರೆ. ದಲಿತರೊಬ್ಬರಿಗೆ ಟಿಕೆಟ್ ನೀಡದಂತೆ ವಂಚಿಸಿದ್ದಾರೆಂದು ಆರೋಪಿಸಿದ್ದಾರೆ. ದತ್ತಾತ್ರೇಯ ವಾರ್ಡ್‌ನಲ್ಲೂ ಕೂಡ ಒಮ್ಮತದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ.
ರಾಜಾಜಿನಗರ, ಗಾಂಧಿನಗರ, ಮಲ್ಲೇಶ್ವರ, ಸಿ.ವಿ.ರಾಮನ್‌ನಗರ, ಜಯನಗರ, ಮಹಾಲಕ್ಷ್ಮಿ ಲೇಔಟ್ ಮುಂತಾದ ವಿಧಾನಸಭಾ ಕ್ಷೇತ್ರಗಳಲ್ಲಿ ಒಮ್ಮತದ ಅಭ್ಯರ್ಥಿಗಳ ಆಯ್ಕೆ ಕೈಗೆ ಕಗ್ಗಂಟಾಗಿ ಪರಿಣಮಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸಾಕಷ್ಟು ಹರಸಾಹಸ ಮಾಡುತ್ತಿದ್ದಾರೆ. ಪಟ್ಟಿ ಅಂತಿಮಗೊಳಿಸಲು ಸಾಧ್ಯವಾಗದಿದ್ದರೆ ರಾಜ್ಯದ ಉಸ್ತುವಾರಿ ದಿಗ್ವಿಜಯ್‌ಸಿಂಗ್ ಅವರು ಮಧ್ಯಪ್ರವೇಶ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಆಯ್ಕೆ ಪಟ್ಟಿ ಪ್ರಕಟಿಸದಂತೆ ಅಭ್ಯರ್ಥಿಗಳಿಗೆ ನೇರವಾಗಿ ಬಿ ಫಾರಂ ನೀಡಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಈಗಾಗಲೇ 92 ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿರುವ ಬಿಜೆಪಿಯಲ್ಲಿ ಭಿನ್ನಮತ ಕಳೆದೆರಡು ದಿನಗಳಿಂದ ಉಲ್ಬಣಗೊಂಡಿದೆ. ಟಿಕೆಟ್ ಕೈ ತಪ್ಪಿದವರು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಪ್ರಕಟಗೊಂಡ ಪಟ್ಟಿಯಲ್ಲಿ ಭಾರೀ ಅನ್ಯಾಯ ಮಾಡಲಾಗಿದೆ ಎಂದು ಕಳೆದೆರಡು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆ ಉಲ್ಬಣಗೊಂಡಿದ್ದು, ಬಿಜೆಪಿ ನಾಯಕರುಗಳ ನಡುವೆ ಸಂಘರ್ಷವೇರ್ಪಟ್ಟಿದೆ.
ಪರಿಸ್ಥಿತಿ ಶಮನಕ್ಕೆ ಆರ್‌ಎಸ್‌ಎಸ್ ನಾಯಕರು ಮಧ್ಯಪ್ರವೇಶಿಸಿದ್ದು, ಎರಡನೆ ಹಂತದ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಸಂಘರ್ಷ ತಲೆದೋರದಂತೆ ಎಚ್ಚರಿಕೆ ವಹಿಸಿದ್ದಾರೆ. ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರನ್ನು ಪರಿಗಣಿಸಿಲ್ಲ ಎಂದು ಅಸಮಾಧಾನ ವ್ಯಕ್ತವಾಗಿದೆ.
ಅದೇ ರೀತಿ ಮಲ್ಲೇಶ್ವರ, ಗೋವಿಂದರಾಜನಗರ, ವಿಜಯನಗರ ವಿಧಾನಸಭಾ ಕ್ಷೇತ್ರಗಳ ಕೆಲವು ವಾರ್ಡ್‌ಗಳಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈ ನಡುವೆ ರಾಜಾಜಿನಗರದಲ್ಲಿ ಅಭ್ಯರ್ಥಿಗಳ ಆಯ್ಕೆ ಸುಗಮವಾಗಿ ನಡೆದಿದ್ದು, ಎಲ್ಲ ಏಳು ಅಭ್ಯರ್ಥಿಗಳು ನಿನ್ನೆ ಒಟ್ಟಿಗೇ ನಾಮಪತ್ರ ಸಲ್ಲಿಸಿದ್ದಾರೆ. ಇದೇ ರೀತಿ ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಒಟ್ಟಾಗಿ ನಾಮಪತ್ರ ಸಲ್ಲಿಸಬೇಕೆಂದು ನಾಯಕರು ಸೂಚನೆ ನೀಡಿದ್ದಾರೆ. ಜೆಡಿಎಸ್ ಪಕ್ಷದಲ್ಲೂ ಗೊಂದಲ ಮುಂದುವರೆದಿದೆ. ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಭೆ ನಡೆಸಿ 120 ಅಭ್ಯರ್ಥಿಗಳನ್ನು ಜೆಡಿಎಸ್ ಪಕ್ಷ ಪ್ರಕಟಿಸಿತ್ತು. ಇನ್ನು 78 ವಾರ್ಡ್‌ಗಳಿಗೆ ಅಭ್ಯರ್ಥಿಗಳ ಪ್ರಕಟಣೆ ಬಾಕಿ ಇದೆ. ಒಮ್ಮತದ ಅಭ್ಯರ್ಥಿಗಳ ಆಯ್ಕೆಗೆ ಜೆಡಿಎಸ್ ಪಕ್ಷ ತನ್ನ ಕಸರತ್ತು ಮುಂದುವರೆಸಿದೆ.
ಈ ನಡುವೆ ಬಿಬಿಎಂಪಿ ಚುನಾವಣೆ ಸ್ಪರ್ಧೆಗಿಳಿಯದಿರಲು ನಿರ್ಧರಿಸಿರುವ ಆಪ್ ಪಕ್ಷದ ಬೆಂಬಲ ಪಡೆಯಲು ಜೆಡಿಎಸ್ ಪಕ್ಷ ಕಸರತ್ತು ನಡೆಸಿದೆ. ನಾಳೆ ಜೆಡಿಎಸ್ ಪಕ್ಷ ಅಂತಿಮ ಪಟ್ಟಿ ಪ್ರಕಟಿಸುವ ಸಾಧ್ಯತೆ ಇದೆ. ಯಾವ ರಾಜಕೀಯ ಪಕ್ಷಗಳೂ ಇನ್ನೂ ಅಭ್ಯರ್ಥಿಗಳ ಆಯ್ಕೆಯನ್ನು ಪೂರ್ಣಗೊಳಿಸಿಲ್ಲ. ನಾಮಪತ್ರ ಸಲ್ಲಿಸಲು ಆಗಸ್ಟ್ 10 ಕೊನೆಯ ದಿನವಾಗಿದ್ದು, ನಾಳೆ ಎಲ್ಲ ಪಕ್ಷಗಳವರೂ ಬಿ ಫಾರಂ ಕೊಡಲೇಬೇಕು. ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ, ಅಂತಿಮ ಕ್ಷಣದಲ್ಲಿ ಯಾವ ರೀತಿಯ ರಾಜಕೀಯ ಮೇಲಾಟ ನಡೆಯಲಿದೆ ಎಂಬುದನ್ನು ಕಾದು ನೋಡಬೇಕು.