ಮಡಿಕೇರಿ: ಪಾಕಿಸ್ತಾನದಲ್ಲಿ ಬಂಧಿತನಾಗಿರುವ ತಮ್ಮ ಮಗನನ್ನು ಸ್ವದೇಶಕ್ಕೆ ಮರಳಿ ಕರೆತರಬೇಕೆಂದು ಗೋಣಿಕೊಪ್ಪಲು ಬಳಿಯ ಕೈಕೇರಿ ಗ್ರಾಮದ ನಿವಾಸಿ ಕುಶಾಲಪ್ಪ ಹಾಗೂ ಮೀನಾಕ್ಷಿ ದಂಪತಿ ಕಳೆದ ಒಂದು ವರ್ಷದಿಂದ ಸರ್ಕಾರಗಳನ್ನು ಗೋಗರೆಯುತ್ತಿದ್ದಾರೆ.
ರಾಜ್ಯ ಸರ್ಕಾರಕ್ಕೆ, ಕೇಂದ್ರ ಸರ್ಕಾರಕ್ಕೆ, ಪೊಲೀಸರಿಗೆ ಮನವಿಗಳ ಮೇಲೆ ಮನವಿಗಳನ್ನು ಸಲ್ಲಿಸುತ್ತಿದ್ದರೂ ಪ್ರಯೋಜನವಾಗಿಲ್ಲ.
ಕುಶಾಲಪ್ಪ ಹಾಗೂ ಮೀನಾಕ್ಷಿ ದಂಪತಿ ಪುತ್ರ ಯಶವಂತ್ 2004ರಲ್ಲಿ ಗೋಣಿಕೊಪ್ಪಲಿನ ಕಾವೇರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಡಿಪ್ಲೊಮಾಗೆ ಸೇರಿಕೊಂಡಿದ್ದರು. ಹಾಜರಾತಿ ಕಡಿಮೆ ಇದ್ದ ಕಾರಣ 4ನೇ ಸೆಮಿಸ್ಟರ್‌ನಲ್ಲಿ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ. ಅದರಿಂದಾಗಿ ಪೋಷಕರು ಯಶವಂತ್‌ನನ್ನು ಮೈಸೂರಿನ ಜನಶಿಕ್ಷಣ ಸಂಸ್ಥಾನದಲ್ಲಿ ಆರು ತಿಂಗಳ ಎಲೆಕ್ಟ್ರಾನಿಕ್ಸ್ ಕೋರ್ಸ್‌ಗೆ 2006ರಲ್ಲಿ ಸೇರಿಸಿದರು.
ಆರು ತಿಂಗಳು ಕಳೆದ ನಂತರ 2006ರ ಡಿಸೆಂಬರ್‌ನಲ್ಲಿ ಉದ್ಯೋಗ ಅರಸಿ ಬೆಂಗಳೂರಿಗೆ ಹೋಗುತ್ತಿದ್ದು, ₨ 1 ಸಾವಿರ ಹಣ ನೀಡಬೇಕೆಂದು ಪೋಷಕರಿಗೆ ದೂರವಾಣಿ ಮೂಲಕ ತಿಳಿಸಿದರು. ಅದರಂತೆ ಮೀನಾಕ್ಷಿ– ಕುಶಾಲಪ್ಪ ಅವರು ಮೈಸೂರಿಗೆ ತೆರಳಿ ಹಣ ನೀಡಿ ಬಂದರು. ನಂತರ ಯಶವಂತ್ ಸಂಪರ್ಕ ಸಾಧ್ಯವಾಗಲಿಲ್ಲ.
‘ಎಂಟು ವರ್ಷಗಳ ಹಿಂದೆ 2007ರಲ್ಲಿ ಮೈಸೂರಿನಿಂದ ನಮ್ಮ ಮಗ ಯಶವಂತ್ ಕಾಣೆಯಾಗಿದ್ದ. ಅವನನ್ನು ಸಾಕಷ್ಟು ಹುಡುಕಿದೆವು. ಮೈಸೂರಿನ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆವು. ಎಷ್ಟೇ ಪ್ರಯತ್ನಿಸಿದರೂ ಅವನ ಸುಳಿವು ಸಿಗಲಿಲ್ಲ. ಕಳೆದ ವರ್ಷ ಪಾಕಿಸ್ತಾನ ಸರ್ಕಾರವು ಭಾರತೀಯ ಕೈದಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.
ಆ ಪಟ್ಟಿಯಲ್ಲಿ ರಮೇಶ್ ಎನ್ನುವರಿದ್ದಾರೆ. ಅವನು ಸಂಪೂರ್ಣವಾಗಿ ನನ್ನ ಮಗ ಯಶವಂತ್‌ನನ್ನು ಹೋಲುತ್ತಾನೆ. ಇವನೇ ನಮ್ಮ ಮಗ. ಇವನನ್ನು ಭಾರತಕ್ಕೆ ಕರೆಸಿಕೊಳ್ಳುವ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು’ ಎಂದು ಮೀನಾಕ್ಷಿ ಮನವಿ ಮಾಡಿದ್ದಾರೆ.
ಪಾಕ್ ಸರ್ಕಾರವು ಕಳೆದ ವರ್ಷ ತನ್ನಲ್ಲಿರುವ ಭಾರತೀಯ ಕೈದಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ರಮೇಶ್ ಅವರ ಹೆಸರು ಹಾಗೂ ಭಾವಚಿತ್ರ ಪ್ರಕಟಿಸಿ, ಇವರ ರಾಷ್ಟ್ರೀಯತೆಯನ್ನು ಸಾಬೀತುಪಡಿಸುವ ದಾಖಲೆಗಳನ್ನು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿತ್ತು. ರಮೇಶ್ ಎನ್ನುವವರನ್ನು 2013ರ ಡಿಸೆಂಬರ್ 6ರಂದು ಲಾಹೋರ್‌ನ ಪಾರ್ಕ್‌ನಲ್ಲಿ ಬಂಧಿಸಲಾಗಿದ್ದು, ಇವರ ಬಳಿ ಯಾವುದೇ ಶಸ್ತ್ರಾಸ್ತ್ರಗಳು ಇರಲಿಲ್ಲ. ವಿಚಾರಣೆ ವೇಳೆ ಇವರು, ತಾನು ಭಾರತೀಯ ಹಾಗೂ ರಮೇಶ್ ಎಂದಷ್ಟೇ ಹೇಳಿಕೊಂಡಿದ್ದಾರೆ ಎನ್ನುವ ವಿವರಣೆಯನ್ನು ಪಾಕ್ ಸರ್ಕಾರ ನೀಡಿದೆ.
ಇದರ ಆಧಾರದ ಮೇಲೆ ಮೈಸೂರು ವಿಭಾಗದ ಪೊಲೀಸರು 2014ರ ಜುಲೈ ತಿಂಗಳಿನಲ್ಲಿ ಸ್ಥಳೀಯ ಪತ್ರಿಕೆಗಳಲ್ಲಿ ರಮೇಶ್ ಅವರ ಭಾವಚಿತ್ರವನ್ನು ಪ್ರಕಟಿಸಿ ಸಾರ್ವಜನಿಕರಿಂದ ಮಾಹಿತಿಯನ್ನು ಕೋರಿತು. ರಮೇಶ್ ಅವರ ಭಾವಚಿತ್ರವು ಕಳೆದುಹೋಗಿರುವ ಯಶವಂತ್ ಅವರನ್ನು ಹೋಲುತ್ತದೆಂದು ನೆಂಟರಿಷ್ಟರು ಮೀನಾಕ್ಷಿಯವರಿಗೆ ತಿಳಿಸಿದರು. ಏಳು ವರ್ಷಗಳಿಂದ ಹುಡುಕಿ ಹುಡುಕಿ ಸೋತುಹೋಗಿದ್ದ ಪಾಲಕರಲ್ಲಿ ಇದು ಆಶಾಕಿರಣವನ್ನು ಮೂಡಿಸಿತು.
‘ನಮ್ಮಲ್ಲಿದ್ದ ಹಳೆಯ ಯಶವಂತ್ ಭಾವಚಿತ್ರಕ್ಕೂ ರಮೇಶ್ ಭಾವಚಿತ್ರಕ್ಕೂ ತಾಳೆ ಇದೆ. ಡಿಪ್ಲೊಮಾ ಕಲಿಯುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ಶಾಕ್ ತಗುಲಿ ಯಶವಂತ್‌ನ ಕುತ್ತಿಗೆ ಮೇಲೆ ಕಪ್ಪು ಕಲೆ ಉಂಟಾಗಿತ್ತು. ಇದೇ ರೀತಿ ಪಾಕ್ ಜೈಲಿನಲ್ಲಿರುವ ರಮೇಶ್ ಅವರ ಕುತ್ತಿಗೆ ಮೇಲೂ ಇದೆ. ಯಶವಂತ್‌ನಿಗೆ ಸ್ವಲ್ಪ ತೊದಲು, ಹೆದರಿಕೊಂಡರೆ ಮಾತೇ ಆಡುತ್ತಿರಲಿಲ್ಲ. ಅಲ್ಲಿ ರಮೇಶ್ ಕೂಡ ವಿಚಾರಣೆ ವೇಳೆ ಏನೂ ಮಾತನಾಡಿಲ್ಲ. ವಯಸ್ಸಿನಲ್ಲೂ ಕೂಡ ಇಬ್ಬರಲ್ಲೂ ಸಾಮ್ಯತೆ ಇದೆ ಎಂದು ಮೀನಾಕ್ಷಿ ಹೇಳುತ್ತಾರೆ.
‘ಇವೆಲ್ಲ ಕಾರಣಗಳಿಂದಾಗಿ ಪಾಕಿಸ್ತಾನದಲ್ಲಿ ಬಂಧಿತನಾಗಿರುವ ರಮೇಶ್ ತಮ್ಮ ಮಗ ಯಶವಂತ್‌ನೇ ಆಗಿದ್ದಾನೆ. ರಮೇಶ್‌ನನ್ನು ಇಲ್ಲಿಗೆ ಕರೆಸಬೇಕು ಇಲ್ಲವೇ ನನ್ನನ್ನೊಮ್ಮೆ ಅವರ ಬಳಿ ಕರೆದೊಯ್ಯಬೇಕು. ಆಗ ಸತ್ಯ ಏನೆಂದು ತಿಳಿಯಲಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ, ಗೃಹ ಸಚಿವಾಲಯಕ್ಕೆ ಮೀನಾಕ್ಷಿ ಅವರು ಪತ್ರ ಬರೆದಿದ್ದಾರೆ.
‘ಸ್ಥಳೀಯ ಶಾಸಕ ಕೆ.ಜಿ. ಬೋಪಯ್ಯ, ಕೇಂದ್ರ ಕಾನೂನು ಸಚಿವ ಡಿ.ವಿ. ಸದಾನಂದಗೌಡ ಅವರ ಮೂಲಕವೂ ಕೇಂದ್ರ ಗೃಹ ಸಚಿವಾಲಯಕ್ಕೆ ತಮ್ಮ ಅಹವಾಲುಗಳನ್ನು ಸಲ್ಲಿಸಿದ್ದೇವೆ. ಆದರೆ, ಇದುವರೆಗೆ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. ಯಶವಂತ್‌ನನ್ನು ಕರೆತರಬೇಕು ಹಾಗೂ ಅವನು ಅಲ್ಲಿಗೆ ಹೇಗೆ ಹೋದ ಎನ್ನುವುದರ ಬಗ್ಗೆಯೂ ತನಿಖೆಯಾಗಬೇಕು’ ಎಂದು ಆಗ್ರಹಿಸಿದ್ದಾರೆ.
ಶ್ರೀಕಾಂತ ಕಲ್ಲಮ್ಮನವರ