ಬೈಲಹೊಂಗಲ,ಆ.9 – ಸಮೀಪದ ಹೊಸೂರ ಗ್ರಾಮದಲ್ಲಿ ಮಳೆಯ ಕೊರತೆಯಿಂದ ಒಣಗುತ್ತಿರುವ ಕಬ್ಬು, ಹೆಸರು, ಸೊಯಾಬಿನ್ ನಾಶಪಡಿಸಿ ಬೆಂಕಿ ಹಚ್ಚಿದ ಘಟನೆ ನೆನ್ನೆ ಜರುಗಿದೆ. ಸಕ್ಕರೆ ಕಾರ್ಖಾನೆಗೆ ಪೊರೈಸಿದ ಕಬ್ಬಿನ ಬಾಕಿ ಬಿಲ್ಲ ಪಾವತಿಯಾಗಿಲ್ಲ. ವಿದ್ಯುತ್ತ ಕೊರತೆ, ಮಳೆ ಅಭಾವ, ಅಂತರ್ಜಲ ಕುಸಿತದಿಂದ ಬೊರವೆಲ್ ಬಂದ್ ಆಗಿ ಬೆಳೆ ನಾಶವಾಗುತ್ತಿದ್ದನ್ನು ಕಂಡು ಕಂಗಾಲಾದ ರೈತರು ತಮ್ಮ ಹೊಲದಲ್ಲಿ ಸಾವಿರಾರು ರೂ. ಖರ್ಚು ಮಾಡಿ, ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಕಿತ್ತು ಬೆಂಕಿ ಹಚ್ಚುತ್ತಿರುವದು ಕಳವಳಕಾರಿ ವಿಷಯವಾಗಿದೆ.
ಮಲ್ಲಪ್ಪ ದೊಡ್ಡಮಲ್ಲಪ್ಪ ಕಮತಗಿ ಎಂಬ ರೈತ 4 ಎಕರೆ ಭೂಮಿಯಲ್ಲಿ ಬೆಳೆದ ಕಬ್ಬು, ಮಳೆಯಿಲ್ಲದ್ದರಿಂದ ದೊಣ್ಣೆ ಹುಳದ ಬಾಧೆ ತಗುಲಿ ಒಣಗುತ್ತಿದ್ದನ್ನು ನೋಡಲಾಗದೆ, ಕೊಯ್ದು ಬೆಂಕಿ ಹಚ್ಚಿ, ಸಂಕಟ ತಾಳಲಾರದೆ ಕಣ್ಣೀರಿಟ್ಟು ಮಾದ್ಯಮದ ಮುಂದೆ ತಮ್ಮ ಗೋಳನ್ನು ವ್ಯಕ್ತಪಡಿಸಿದರು. ಮಡಿವಾಳಪ್ಪ ವಿವೇಕಿ ರೈತ ಸಹ ಬೆಳೆ ಸಾಲ ಮಾಡಿ ಬೆಳೆದ 3 ಏಕರೆ ಜಮೀನಿನಲ್ಲಿಯ ಹೆಸರಿನ ಬೆಳೆಯನ್ನು ನಾಶಪಡಿಸಿದ್ದಾರೆ. ಚಿನ್ನಪ್ಪ ಬಸಪ್ಪ ಹುಂಬಿ ಎಂಬ ವಯೋವೃದ್ಧ ರೈತ 14 ಲಕ್ಷ ರೂ. ಬಾಕಿ ಸಾಲ ತುಂಬಲು ಬೆಳಗಾವಿ ಯುಟಿಐ ಬ್ಯಾಂಕಿನವರು ಮೊದಲೇ ಖಾಲಿ ಚೆಕ್ ಮೇಲೆ ಸಹಿ ಪಡೆದಿದ್ದರು. ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರಿಂದ ಜಾಮೀನು ಪಡೆದು ಹೊರ ಬಂದು, ಮಾನಸಿಕವಾಗಿ ಮನನೊಂದು ಹಾಸಿಗೆ ಹಿಡಿದಿದ್ದರಿಂದ ಕುಟುಂಬವನ್ನು ನಡೆಸುವದು ದುಸ್ಥರವಾಗಿದೆ. ರೈತರಿಗೆ ನೀಡಿದ ಸಾಲ ಮರುಪಾವತಿಗೆ ಸರಕಾರ ತಡೆಯಾe ನೀಡಿದ್ದರೂ ಸಹ ಬ್ಯಾಂಕಿನವರು ಪ್ರಕರಣ ದಾಖಲಿಸುತ್ತಿರುವುದು ಸರಕಾರದ ಆದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ ಎಂದು ಮಗ ಮಲ್ಲಿಕಾರ್ಜುನ ಪತ್ರಿಕೆಗೆ ತಿಳಿಸಿದರು.
ಸಾಲಸೂಲ ಮಾಡಿ ನಾಟಿ ಮಾಡಿದ ಬೆಳೆ ಮುಂಗಾರು ಮಳೆಯ ಅಭಾವದಿಂದ ಕೈಕೊಟ್ಟಿದ್ದರಿಂದ ಕೈಗೆ ಬಂದ ಬೆಳೆ ನಾಶವಾಗುತ್ತಿವೆ. ಇತ್ತ ಬ್ಯಾಂಕಿನವರು ಸಹ ಸಾಲ ವಸೂಲಿ ಪ್ರಕರಣ ದಾಖಲಿಸುತ್ತಿದ್ದಾರೆ. ತಮ್ಮ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಸವದತ್ತಿ ಎಸ್‌ಬಿಐದಲ್ಲಿ ಸಾಲ ಮಾಡಿದ ದೇಮಪ್ಪ ಬೂದಿಹಾಳ ಹಾಗೂ ಬೆಳಗಾವಿ ಯುಟಿಐ ಬ್ಯಾಂಕಿನಲ್ಲಿ 9 ಲಕ್ಷ ರೂ. ಸಾಲ ಮಾಡಿದ ಈರಪ್ಪ ಹುಂಬಿ ಪತ್ರಿಕೆಗೆ ತಿಳಿಸಿದರು.
ಹೊಸೂರ ಗ್ರಾಮದ ಆನಂದ ಅಡಕಿ 4 ಏಕರೆ, ಚನ್ನಪ್ಪ ನಂದೆನ್ನವರ 4 ಏಕರೆ, ಈರಣ್ಣ ಹುರಳಿ 4 ಏಕರೆ, ಮಹಾಂತೇಶ ಹುಲಮನಿ 1 ಏಕರೆ, ನಾಗಪ್ಪ ಗುಡಿಶೆಟ್ಟಿ 2 ಏಕರೆ, ಬಸಪ್ಪ ಪೆಂಟೇದ 8 ಏಕರೆ, ಮಹಾದೇವಪ್ಪ ಬುಡಶೆಟ್ಟಿ 5 ಏಕರೆ, ಮೂಗಪ್ಪ ಬೂದಿಹಾಳ 2 ಏಕರೆ ಹೊಲದಲ್ಲಿ ಬೆಳೆಯಲಾದ ಕಬ್ಬು ಒಣಗುತ್ತಿರುವದರಿಂದ ಅದನ್ನು ಕಡಿದು ದನಕರುಗಳಿಗೆ ಹಾಕುತ್ತಿದ್ದಾರೆ. ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಂಕರ ಮಾಡಲಗಿ ಮಾತನಾಡಿ, ಮುರಗೋಡ, ಹೊಸೂರ, ಮಾಟೋಳ್ಳಿ, ಇಂಗಳಗಿ, ಸೊಗಲ, ಮಲ್ಲೂರ ಭಾಗದಲ್ಲಿ ಬ್ಯಾಂಕಿನವರು ರೈತರ ಮೇಲೆ ಪ್ರಕರಣ ದಾಖಲಿಸಿ ಮಾನ ಹರಾಜು ಮಾಡುತ್ತಿರುವುದು ಖೇದರಕ ಸಂಗತಿ ಎಂದರು.
ಶಾಸಕರು, ವಿಧಾನಪರಿಷತ್ ಸದಸ್ಯರು ರೈತರ ಸಮಸ್ಯೆ ಆಲಿಸುತ್ತಿಲ್ಲ. ಈ ಭಾಗದ ರೈತರ ಸಮಸ್ಯೆ ಕುರಿತು ಸದನದಲ್ಲಿ ಚರ್ಚೆಯಾಗಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತ ವಿರೋ ನೀತಿ ಅನುಸರಿಸುತ್ತಿರುವುದರಿಂದ ರೈತರು ಗುಳೆ ಹೋಗುವ ಪರಿಸ್ಥಿತಿ ಬಂದೊದಗಿದೆ ಎಂದು ವಿಷಾದಿಸಿದರು. ಬೈಲಹೊಂಗಲ, ಸವದತ್ತಿ ತಾಲೂಕಗಳನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಬೆಳೆ ಪರಿಹಾರ ನೀಡಿ ಸಾಲ ಮನ್ನಾ ಮಾಡಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ ಅವರು ಸಂಕಷ್ಟಕ್ಕೀಡಾದ ರೈತರ ಪರಿಸ್ಥಿತಿ ಅವಲೋಕಿಸದೆ ಕೇಂದ್ರ ಕೃಷಿ ಸಚಿವರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತರಿಗೆ ಮಾನ ಮರ್ಯಾದೆ ಇಲ್ಲ. ಅವರು ನಪುಂಸಕರು ಎಂಬ ಹೇಳಿಕೆ ನೀಡಿರುವುದು ಖಂಡನೀಯ ಎಂದರು.ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಜಾದವ, ಮಲ್ಲಪ್ಪ ಇಂಗಳಗಿ, ಮುದಕಪ್ಪ ಮರಿಶೆಟ್ಟಿ, ಮಲ್ಲಪ್ಪ ಚಿಕ್ಕೋಪ್ಪ, ಫಕೀರಪ್ಪ ಕಡಕೋಳ, ಈರಪ್ಪ ಬೋಳೆತ್ತಿನ,ಎಚ್.ಎಂ. ಬೋವಿ, ದೇಮಪ್ಪ ಕಲಮನಿ, ಮಲ್ಲಪ್ಪ ಕಮತಗಿ ಮೊದಲಾದವರು ಇದ್ದರು.