ಬೆಂಗಳೂರು, ಆ.10- ತಮ್ಮ ಮೇಲೆ ದಾಖಲಾಗಿದ್ದ ಅಕ್ರಮ ಆಸ್ತಿ ಪ್ರಕರಣವನ್ನು ಮುಚ್ಚಿ ಹಾಕಲು ವಿಧಾನಪರಿಷತ್ ಸದಸ್ಯರೊಬ್ಬರು ಲೋಕಾಯುಕ್ತ ನ್ಯಾಯಮೂರ್ತಿ ಭಾಸ್ಕರರಾವ್ ಪುತ್ರ ಅಶ್ವಿನ್‌ಗೆ 15 ಲಕ್ಷ ಲಂಚ ನೀಡಿರುವುದನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಪತ್ತೆ ಮಾಡಿದೆ.ಲೋಕಾಯುಕ್ತ ಲಂಚ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು , ಲಂಚ ನೀಡಿರುವ ವಿಧಾನ ಪರಿಷತ್ ಸದಸ್ಯರು ಯಾರು ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.
ಎಸ್‌ಐಟಿ ವಶದಲ್ಲಿರುವ ಪ್ರಮುಖ ಆರೋಪಿ ಅಶೋಕ್ ಕುಮಾರ್ ಮೂಲಕ ವಿಧಾನ ಪರಿಷತ್ ಸದಸ್ಯರು ಪ್ರಕರಣವನ್ನು ಮುಚ್ಚಿ ಹಾಕಿರುವುದನ್ನು ಭಾಸ್ಕರರಾವ್ ಪುತ್ರ ಅಶ್ವಿನ್ ಎರಬಾಟಿಗೆ 15 ಲಕ್ಷ ಲಂಚ ನೀಡಿದ್ದಾರೆ.
ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ಈ ಹಿಂದೆ ಲೋಕಾಯುಕ್ತ ಅಧಿಕಾರಿಗಳು ವಿಧಾನ ಪರಿಷತ್ ಸದಸ್ಯರ ನಿವಾಸ, ಕಚೇರಿಗಳ ಮೇಲೆ ದಾಳಿ ನಡೆಸಿ ನಗದು, ಆಭರಣ, ಜಮೀನು, ನಿವೇಶನ ಸೇರಿದಂತೆ ಮತ್ತಿತರ ಬೆಲೆ ಬಾಳುವ ವಸ್ತುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು.ಪ್ರಕರಣವನ್ನು ಮುಚ್ಚಿ ಹಾಕಿ ಬಿ ರಿಪೋರ್ಟ್ ಹಾಕಬೇಕಾದರೆ ಮೊದಲು 50 ಲಕ್ಷ ಲಂಚ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟರು. ಲೋಕಾಯುಕ್ತ ಸಂಸ್ಥೆಯಲ್ಲಿ ಮಧ್ಯವರ್ತಿಯಾಗಿದ್ದ ಅಶೋಕ್‌ಕುಮಾರ್ ಎಂಎಲ್‌ಸಿ ಅವರನ್ನು ಸಂಪರ್ಕಿಸಿ ವ್ಯವಹಾರ ಕುದುರಿಸಲು ಮುಂದಾದರು. 50 ಲಕ್ಷ ನೀಡಿದರೆ ಪ್ರಕರಣವನ್ನು ಮುಚ್ಚಿ ಹಾಕಲಾಗುವುದು. ನನಗೆ ಭಾಸ್ಕರ್‌ರಾವ್ ಅವರ ಪುತ್ರ ಅಶ್ವಿನ್ ಪರಿಚಯವಿದೆ ಎಂದು ಹೇಳಿದ್ದ.ಇದರಂತೆ ಅಶೋಕ್‌ಕುಮಾರ್ ಹಾಗೂ ವಿಧಾನ ಪರಿಷತ್ ಸದಸ್ಯರು ಹೈದರಾಬಾದ್‌ನಲ್ಲಿದ್ದ ಅಶ್ವಿನ್ ಭೇಟಿಯಾಗಿ 25 ಲಕ್ಷ ನೀಡುತ್ತೇನೆ. ಬಿ ರಿಪೋರ್ಟ್ ಪ್ರಕರಣವನ್ನು ಮುಚ್ಚಿ ಹಾಕಬೇಕೆಂದು ಕೋರಿಕೊಂಡಿದ್ದರು.ಮಾತುಕತೆಯಂತೆ ಮೊದಲ ಕಂತಿನಲ್ಲಿ ಅಶ್ವಿನ್‌ಗೆ ಈ ವಿಧಾನ ಪರಿಷತ್ ಸದಸ್ಯರು 15 ಲಕ್ಷ ಹಣವನ್ನು ಒಂದೇ ಕಂತಿನಲ್ಲಿ ನೀಡಿದ್ದರು. ಇದೀಗ ಎಸ್‌ಐಟಿ ಮುಂದೆ ಲಂಚ ಪಡೆದುಕೊಂಡಿರುವುದನ್ನು ಅಶ್ವಿನ್ ಹಾಗೂ ಅಶೋಕ್‌ಕುಮಾರ್ ಒಪ್ಪಿಕೊಂಡಿದ್ದಾರೆ.ಇದೀಗ ಎಸ್‌ಐಟಿ ತನಿಖಾ ತಂಡ ಎಂಎಲ್‌ಸಿ ಅವರನ್ನು ಯಾವುದೇ ಕ್ಷಣ ಬಂಧಿಸುವ ಸಾಧ್ಯತೆ ನಿಚ್ಚಳವಾಗಿದೆ.